ಸಿರುಗುಪ್ಪ : 'ಭೌತಶಾಸ್ತ್ರ, ರಸಾಯನಿಕ ಶಾಸ್ತ್ರ, ಅರ್ಥಶಾಸ್ತ್ರ, ಜೀವಶಾಸ್ತ್ರದಂತೆ ಮಾನವನ ದೇಹವು ಒಂದು ಜೀವ ವಿಜ್ಞಾನ ಎಂದು ಮೈಸೂರು ರಾಮಕೃಷ್ಣ ಪರಮಹಂಸರ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.
ನಗರದ ಅಮೃತೇಶ್ವರ ದೇವಸ್ಥಾನದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿ, ಅಮೃತೇಶ್ವರ ದೇವಸ್ಥಾನ ಟ್ರಸ್ಟ್ ಸಹಯೋಗದೊಂದಿಗೆ ಭಾರತೀಯ ಸಂಸ್ಕೃತಿಯ ಉತ್ಸವ ಅಂಗವಾಗಿ ಬುಧವಾರ ನಡೆದ 'ವಿವೇಕ ಮಂಟಪ ಉಪನ್ಯಾಸಕ ಮಾಲಿಕೆ' 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
'ಜೀವ ವಿಜ್ಞಾನವನ್ನು ಭಾರತೀಯರು 'ಧರ್ಮ' ಎಂದು ಕರೆದರು, ಭೌತಶಾಸ್ತ್ರವನ್ನು ಚೆನ್ನಾಗಿ ಓದಿದರೆ ಅದಕ್ಕೆ ಸಂಬಂಧ ಪಟ್ಟ ವಿಷಯಗಳಲ್ಲಿ ಹಿಡಿತ ಮತ್ತು ನಿಯಂತ್ರಣ ಬರುತ್ತದೆ. ವೈದ್ಯಕೀಯ ಶಾಸ್ತ್ರ ಓದಿದರೆ ಮಾನವ ಶರೀರ ಹೇಗಿದೆ ಅದರ ಮೇಲೆ ನಿಯಂತ್ರಣ ಬಂದು ಕಾಯಿಲೆ ಕಸಲೇ ಬಾರದಂತೆ ನಾವು ಎಚ್ಚರಿಕೆ ವಹಿಸಿ ಗಟ್ಟಿ ಮುಟ್ಟಾಗಿ ನೂರಾರು ವರ್ಷ ಬದುಕುವುದಕ್ಕೆ ಸಾಧ್ಯವಾಗುವುದು’ ಎಂದರು.
‘ಜಗತ್ತಿನ ಅನೇಕ ಸಮಸ್ಯೆಗಳಿಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ. ಆದರೆ, ಜಗತ್ತು ಬೆಳೆಯುವುದು ಮಾತ್ರ ನಿಂತಿಲ್ಲ. ಏಕೆಂದರೆ ಕಾಡುವ ಶಕ್ತಿಗಿಂತ ಕಾಪಾಡುವ ಶಕ್ತಿ ಬಲಿಷ್ಠವಾಗಿದೆ. ಜಗತ್ತು ಈಗ ಇರುವ ಸ್ಥಿತಿಗೆ ನಮ್ಮ ಮನೋಭಾವವೇ ಕಾರಣ.
ನಮ್ಮ ಆಲೋಚನೆಯೇ ಒಂದು ವಸ್ತುವನ್ನು, ಸುಂದರವಾಗಿ ಮಾಡುವುದು. ನಮ್ಮ ಆಲೋಚನೆಯೇ ಅದನ್ನು ವಿಕಾರವಾಗುವಂತೆ ಮಾಡುವುದು, ಈ ಪ್ರಪಂಚವೆಲ್ಲ ನಮ್ಮ ಮನಸ್ಸಿನಲ್ಲಿದೆ. ವಸ್ತುವನ್ನು ಸರಿಯಾದ ರೀತಿಯಲ್ಲಿ ನೋಡುವ ಅಭ್ಯಾಸ ಮಾಡಿ. ಕೆಟ್ಟ ದಿನಗಳು ಇದ್ದ ಮಾತ್ರಕ್ಕೆ ಜೀವನವೇ ಕೆಟ್ಟದಾಗಬೇಕೆಂದಿಲ್ಲಾ, ರಾತ್ರಿ ಕಳೆದು ಹಗಲು ಬರುವಂತೆ ಒಳ್ಳೆಯ ದಿನಗಳು ಬಂದೇ ಬರುತ್ತದೆ’ ಎಂದು ಹೇಳಿದರು.
ಆತ್ಮವಿಶ್ವಾಸ, ಕೃತಜ್ಞತಭಾವ , ಧೃಡವಿಶ್ವಾಸ ನಿಮ್ಮೊಂದಿಗೆ ಇದ್ದರೆ ಚರಿತ್ರೆ ಸೃಷ್ಟಿಸಬಹುದು ಎಂದರು.
ಗುರುಬಸವ ಮಠಾಧಿಪತಿ ಬಸವಭೂಷಣ ಸ್ವಾಮೀಜಿ, ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಬಿಜೆಪಿ ಮುಖಂಡ ಧರಪ್ಪನಾಯಕ, ಉದ್ಯಮಿ ಕಿರಣ್ ಜೈನ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೌತಳ್ ಆರ್.ಸದಾಶಿವ, ಸದಸ್ಯರಾದ ಎಂ.ವೆಂಕಟೇಶ, ತಿರುಮಲ ರಾಜಶೇಖರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.