ADVERTISEMENT

ಹೂವಿನಹಡಗಲಿ: ಮೂಲಸೌಕರ್ಯ, ಕಾಯಂ ಬೋಧಕರಿಲ್ಲ

ಹೂವಿನಹಡಗಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು

ಕೆ.ಸೋಮಶೇಖರ
Published 19 ಜೂನ್ 2024, 4:52 IST
Last Updated 19 ಜೂನ್ 2024, 4:52 IST
   

ಹೂವಿನಹಡಗಲಿ: ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಆರಂಭದಿಂದಲೂ ಕಾಯಂ ಬೋಧಕರಿಲ್ಲ. ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಆ ಕೊರತೆ ನೀಗಿಸುತ್ತಿದ್ದರೂ ತಾಂತ್ರಿಕ ಕೌಶಲ ಕಲಿಸುವ ಸೌಕರ್ಯಗಳಿಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಇಲ್ಲಿನ ಎಂಜಿನಿಯರಿಂಗ್ ಕಾಲೇಜಿಗೆ 52 ಬೋಧಕ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 19 ಹುದ್ದೆಗಳು ಮಾತ್ರ ಭರ್ತಿಯಿದ್ದು, 33 ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ತರಗತಿ ನಡೆಸಲಾಗುತ್ತಿದೆ.

2007ರಲ್ಲಿ ಮಂಜೂರಾಗಿರುವ ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿದೆ. ಆರಂಭಿಕ ಎರಡು ವರ್ಷ ಸ್ಥಳಾಂತರ ಭೀತಿಯಲ್ಲಿದ್ದ ಕಾಲೇಜಿಗೆ ಪಟ್ಟಣದಿಂದ 5 ಕಿ.ಮೀ. ದೂರದ ಹುಲಿಗುಡ್ಡದಲ್ಲಿ ಸುಸಜ್ಜಿತವಾದ ಆಡಳಿತ ಮತ್ತು ಶೈಕ್ಷಣಿಕ ವಿಭಾಗಗಳ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್, ಸಿವಿಲ್ ಮತ್ತು ಮೆಕ್ಯಾನಿಕಲ್ ಕೋರ್ಸ್ ಗಳಿವೆ. ಪ್ರಸಕ್ತ ವರ್ಷ ಎಲ್ಲ ಸೆಮಿಸ್ಟರ್ ಸೇರಿ 557 ವಿದ್ಯಾರ್ಥಿಗಳಿದ್ದಾರೆ.

ADVERTISEMENT

ಪ್ರತಿ ವಿದ್ಯಾರ್ಥಿಯಿಂದ ಕ್ರೀಡಾನಿಧಿ ಸಂಗ್ರಹಿಸಿದರೂ ಕಾಲೇಜಿನಲ್ಲಿ ಯಾವುದೇ ಕ್ರೀಡಾ ಚಟುವಟಿಕೆ ನಡೆಸುವುದಿಲ್ಲ. ಕ್ರೀಡಾ ಪರಿಕರಗಳನ್ನೂ ಒದಗಿಸುತ್ತಿಲ್ಲ. ವಿಶ್ವವಿದ್ಯಾಲಯವು ಪ್ರತಿವರ್ಷ ಸಂಘಟಿಸುವ ಕ್ರೀಡಾಕೂಟಕ್ಕೂ ಇಲ್ಲಿನ ವಿದ್ಯಾರ್ಥಿಗಳನ್ನು ಕರೆದೊಯ್ಯುವುದಿಲ್ಲ. ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಿಲ್ಲ ಎಂದು ಸಬೂಬು ಹೇಳಿ ಕ್ರೀಡಾ ಪ್ರತಿಭೆಗಳ ಆಸೆಗೆ ತಣ್ಣೀರು ಎರಚುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

‘ಹೂವಿನಹಡಗಲಿಯಂಥ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇರುವುದು ಹೆಮ್ಮೆಯ ವಿಷಯ. ಸರ್ಕಾರ ಬರೀ ಕಟ್ಟಡ ನಿರ್ಮಿಸಿ ಕೈ ತೊಳೆದುಕೊಳ್ಳಬಾರದು. ವಿದ್ಯಾರ್ಥಿಗಳು ತಾಂತ್ರಿಕ ಕೌಶಲ ಪಡೆಯುವ ನಿಟ್ಟಿನಲ್ಲಿ ನುರಿತ ಬೋಧಕರನ್ನು ನೇಮಿಸಬೇಕು. ಪ್ರಯೋಗಾಲಯ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಿಕೊಡಬೇಕು’ ಎಂದು ಎಬಿವಿಪಿ ಮುಖಂಡ ರವಿ ಸೊಪ್ಪಿನ ಆಗ್ರಹಿಸಿದ್ದಾರೆ.

ಇಲ್ಲಗಳ ನಡುವೆಯೇ ಬೋಧನೆ...

ಕಾಲೇಜಿನಲ್ಲಿ ಪ್ರಯೋಗಾಲಯವಿದ್ದರೂ ಪ್ರಯೋಗ ಸಲಕರಣೆಗಳಿಲ್ಲ, ಪ್ರಯೋಗಾಲಯ ಬೋಧಕರಿಲ್ಲ. ಗ್ರಂಥಾಲಯ, ಕ್ಯಾಂಟೀನ್, ಆಡಿಟೋರಿಯಂ ಇಲ್ಲ. ಸಿವಿಲ್ ಮತ್ತು ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗಗಳ ವಿದ್ಯಾರ್ಥಿಗಳಿಗೆ ಸರಿಯಾದ ಪೀಠೋಪಕರಣಗಳಿಲ್ಲ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ.

ವಿವಿಧ ಕಂಪನಿಗಳಲ್ಲಿ ಉದ್ಯೋಗವಕಾಶ ಕಲ್ಪಿಸಿಕೊಡುವ ಪ್ಲೇಸ್ ಮೆಂಟ್ ಅಧಿಕಾರಿಯೂ ಇಲ್ಲ. ಹೀಗೆ ‘ಇಲ್ಲ’ಗಳ ನಡುವೆ ಇಲ್ಲಿ ಭವಿಷ್ಯದ ಶಿಲ್ಪಿಗಳು ಅರಳಬೇಕಾಗಿದೆ. ಹಲವು ಕೊರತೆಗಳ ನಡುವೆಯೂ ಕಾಲೇಜು ಫಲಿತಾಂಶ ಆಶಾದಾಯಕವಾಗಿದೆ.

ಪಟ್ಟಣ ಹೊರ ವಲಯದ 5 ಕಿ.ಮೀ. ದೂರದಲ್ಲಿರುವ ಕಾಲೇಜಿಗೆ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಾಲೇಜು ಬಳಿ ಕೋರಿಕೆಯ ಬಸ್ ನಿಲುಗಡೆ ಇದ್ದರೂ ಎಲ್ಲ ಬಸ್ ಗಳು ನಿಲ್ಲಿಸುವುದಿಲ್ಲ. ‘ಶಕ್ತಿ’ ಯೋಜನೆ ಜಾರಿ ಬಳಿಕ ಬಸ್ ಗಳು ತುಂಬಿ ತುಳುಕುವುದರಿಂದ ಕಾಲೇಜಿಗೆ ಹೋಗಿ ಬರಲು ತೊಂದರೆಯಾಗುತ್ತದೆ. ಬಸ್ ಗಾಗಿ ಕಾಯುವುದೇ ಕೆಲಸವಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.