ADVERTISEMENT

ನಾನು ನಿಯತ್ತಿನ ನಾಯಿ; ತೋಳವಲ್ಲ: ಸಿ.ಎಂ ಬೊಮ್ಮಾಯಿ

‘ಪ್ರಧಾನಿ ಎದುರು ನಾಯಿಮರಿಯಂತಿರುತ್ತಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 22:21 IST
Last Updated 4 ಜನವರಿ 2023, 22:21 IST
   

ಬಳ್ಳಾರಿ: ‘ನಾಯಿ ಅತ್ಯಂತ ನಿಯತ್ತಿನ ಪ್ರಾಣಿ; ಸಾಕುವವರಿಗೆ, ಮಾಲೀಕರಿಗೆ ನಿಯತ್ತಾಗಿರುತ್ತೆ; ಕಳ್ಳರನ್ನು ಬಿಡೋದಿಲ್ಲ; ನಾನೂ ಕರ್ನಾಟಕದ ಜನರ ಸೇವೆ ಮಾಡುತ್ತಿರುವ ನಿಯತ್ತಿನ ನಾಯಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟರು.

‘ಕಾಂಗ್ರೆಸ್‌ನವರ ಧಂ, ತಾಕತ್ತನ್ನು ಪ್ರಶ್ನಿಸುವ ಬೊಮ್ಮಾಯಿ, ನರೇಂದ್ರ ಮೋದಿ ಎದುರು ನಾಯಿಮರಿಯಂತೆ ಇರುತ್ತಾರೆ’ ಎಂದು ಸಿದ್ದರಾಮಯ್ಯ ಮಂಗಳವಾರ ಹಗರಿಬೊಮ್ಮನಹಳ್ಳಿ
ಯಲ್ಲಿ ಮಾಡಿದ್ದ ಭಾಷಣಕ್ಕೆ ಬಳ್ಳಾರಿಯಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡುವ ಸಮಯದಲ್ಲಿ ಮುಖ್ಯಮಂತ್ರಿ ಟಾಂಗ್‌ ಕೊಟ್ಟರು.

‘ನಾನು ರಾಜ್ಯದ ಜನರ ಸೇವೆ ಮಾಡುವ ನಿಯತ್ತಿನ ನಾಯಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ನನಗೆ ಅಧಿಕಾರ ಸಿಕ್ಕಿದೆ, ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕೆ ಜನರನ್ನು ತಿನ್ನುವ ತೋಳ ಆಗಲಾರೆ. ಕೆಲವು ನಾಯಿ ವೇಷದ ತೋಳಗಳಿವೆ. ನಾಯಿ ಯಾರು, ತೋಳ ಯಾರು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ’ ಎಂದು
ಸಿದ್ದರಾಮಯ್ಯನವರ ವಿರುದ್ಧ ಬೊಮ್ಮಾಯಿ ಹರಿಹಾಯ್ದರು.

ADVERTISEMENT

‘ಹದಿನೈದನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ ₹ 4,500 ಕೋಟಿ ಮಧ್ಯಂತರ ಪರಿಹಾರ ಘೋಷಣೆ ಮಾಡಿದ್ದನ್ನು ತರುವುದಕ್ಕೆ ಬೊಮ್ಮಾಯಿ ಅವರಿಗೆ ಆಗಲಿಲ್ಲ. ಮೋದಿಯವರ ಮುಂದೆ ನಾಯಿಮರಿ ರೀತಿ ಇರುತ್ತಾರೆ’ ಎಂದು ವಿರೋಧ ಪಕ್ಷದ ನಾಯಕರು ಮಂಗಳವಾರ ಲೇವಡಿ ಮಾಡಿದ್ದರು.

‘ಸಿದ್ದರಾಮಯ್ಯ ಆಡಿದ ಮಾತು ಅವರ ವ್ಯಕ್ತಿತ್ವ ತೋರಿಸುತ್ತದೆ. ನಾಯಿಯಲ್ಲಿರುವ ನಿಯತ್ತಿನ ಗುಣವನ್ನು ನಾನು ಜನರ ಪರವಾಗಿ ಉಳಿಸಿಕೊಂಡು ಹೋಗುತ್ತೇನೆ’ ಎಂದು ಬಸವರಾಜ ಬೊಮ್ಮಾಯಿ ಇದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಮನಮೋಹನ್‌ಸಿಂಗ್ ಅವರಂಥ ಸಭ್ಯ ಪ್ರಧಾನಿ ಇದ್ದಾಗ ರಾಜ್ಯಕ್ಕೆ ನಯಾಪೈಸೆ ತರಲಿಲ್ಲ. ಅವರ ಬಳಿಗೆಹೆದರಿಕೊಂಡು ಹೋಗದ ಸಿದ್ದರಾಮಯ್ಯ ಈಗ ಧೀರ, ಶೂರ ಎಂದು ಹೇಳಿಕೊಳ್ಳುತ್ತಾನೆ’ ಎಂದು ಒಂದು ಹಂತದಲ್ಲಿ ಮುಖ್ಯಮಂತ್ರಿ ಏಕ ವಚನವನ್ನೂ ಪ್ರಯೋಗಿಸಿದರು.

‘ನರೇಂದ್ರ ಮೋದಿ ಕಾಮಧೇನು; ಹತ್ತು– ಹಲವು ಕೊಡುಗೆ ಕೊಟ್ಟಿದ್ದಾರೆ. ನಾನು ದೊಡ್ಡ ಪಟ್ಟಿಯನ್ನೇ ಕೊಡಬಹುದು. ಒಂದು ರಾಜ್ಯಕ್ಕೆ 6,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕೊಟ್ಟಿರುವುದು ಸ್ವಾತಂತ್ರ್ಯ ಭಾರತದಲ್ಲಿ ದಾಖಲೆ. ಬೆಂಗಳೂರು– ಮೈಸೂರು ಹೆದ್ದಾರಿ; ಮಂಗಳೂರು, ಕಾರವಾರ ಬಂದರು ಅಭಿವೃದ್ಧಿ, ಕಳಸಾ–ಬಂಡೂರಿಗೆ ಅನುಮೋದನೆ, ಇದರ ಅರಿವಿಲ್ಲದೆ, ರಾಜಕೀಯ ಪ್ರೇರಿತ ಹೇಳಿಕೆಯನ್ನು ಸಿದ್ದರಾಮಯ್ಯ ನೀಡುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.