ADVERTISEMENT

ಮುಖ್ಯಮಂತ್ರಿಯಾಗಲು ನನಗಿನ್ನೂ ಸಮಯವಿದೆ: ಶಾಸಕ ಜನಾರ್ದನ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 16:04 IST
Last Updated 22 ಅಕ್ಟೋಬರ್ 2024, 16:04 IST
   

ಬಳ್ಳಾರಿ: ‘ಬಿ.ಎಸ್‌ ಯಡಿಯೂರಪ್ಪ ಅವರು ತಮ್ಮ 66ನೇ ವಯಸ್ಸಿಗೆ ಸಿಎಂ ಆದರು. ನನಗೆ ಈಗಿನ್ನು 57 ವರ್ಷ. ನನಗೆ 9ರಿಂದ 10 ವರ್ಷಯ ಸಮಯವಿದೆ’ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.  

ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದೆ ಮುನಿಸಿಕೊಂಡಿದ್ದ ದಿವಾಕರ್‌ ಅವರ ಜತೆಗೆ ಕಾರ್ಯಕರ್ತರ ಸಭೆ ನಡೆಸಿದ ಅವರು, ತಾವು ಸಿಎಂ ಆಗುವ ಇಂಗಿತ ಹೊರ ಹಾಕಿದರು.  

‘ಯಡಿಯೂರಪ್ಪ ಸೈಕಲ್‌ ತುಳಿದು, ಬಸ್‌ನಲ್ಲಿ ತಿರುಗಿ ಪಕ್ಷ ಸಂಘಟಿಸಿ, ಕಷ್ಟ ಪಟ್ಟಮೇಲೆ  66ನೇ ವಯಸ್ಸಿನಲ್ಲಿ ಸಿಎಂ ಆದರು. ಆದರೆ, ರಾಜಕೀಯಕ್ಕೆ ಬಂದು, ಜೈಲಿಗೆ ಹೋಗಿ ಬಂದರೂ ನನಗೆ ಈಗಿನ್ನೂ 57 ವರ್ಷ ವಯಸ್ಸು. ಅ ಲೆಕ್ಕದಲ್ಲಿ  ನನಗೆ ಇನ್ನೂ 9 ರಿಂದ 10 ವರ್ಷ ಸಮಯವಿದೆ’ ಎಂದು ಹೇಳಿದರು. 

ADVERTISEMENT

‘ನಾವು ಹೋಲಿಕೆ ಮಾಡಿಕೊಳ್ಳಬೇಕು. ಅಟಲ್‌ ಬಿಹಾರಿ ವಾಜಯಪೇಯಿ 75ನೇ ವರ್ಷದಲ್ಲಿ ಪ್ರಧಾನಿಯಾದರು. ದಿವಾಕರ್‌ಗೂ ವಯಸ್ಸಿದೆ, ಸಮಯವಿದೆ. ಇದು ಅವರಿಗೆ ಅಗ್ನಿ ಪರೀಕ್ಷೆ’  ಎಂದರು. 

ದಿವಾಕರ್‌ ಅವರನ್ನು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಮಾಡಲಾಗಿದೆ ಎಂದು ಅವರು ಇದೇ ವೇಳೆ ಘೋಷಿಸಿದರು. ನೇಮಕಾತಿ ಪತ್ರವನ್ನು ಅವರಿಗೆ ಹಸ್ತಾಂತರಿಸಿದರು. 

2023ರ ವಿಧಾನಸಭಾ ಚುನಾವಣೆಯಲ್ಲಿ ಸಂಡೂರಿ ಕ್ಷೇತ್ರದಲ್ಲಿ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿದ್ದ ದಿವಾಕರ್‌ 31 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು. ಈ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರಾದರೂ, ಪಕ್ಷ ಬಂಗಾರು ಹನುಮಂತ ಅವರಿಗೆ ಟಿಕೆಟ್‌ ಘೋಷಣೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.