ಬಳ್ಳಾರಿ: ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಶ್ರೇಣಿಯಲ್ಲಿ ನಿಯಮ ಮೀರಿ ಗಣಿಗಾರಿಕೆ ನಡೆಸಿದ್ದ ‘ಕಾರ್ತಿಕೇಯ ಮ್ಯಾಂಗನೀಸ್ ಆ್ಯಂಡ್ ಐರನ್ ವೋರ್’ ಕಂಪನಿ ರಾಜ್ಯ ಸರ್ಕಾರಕ್ಕೆ ₹81.14 ಕೋಟಿಯಷ್ಟು ನಷ್ಟ ಪರಿಹಾರ ಪಾವತಿಸಬೇಕಿದೆ.
ಕೇಂದ್ರದ ಉನ್ನತಾಧಿಕಾರ ಸಮಿತಿಯ ವರದಿಯಂತೆ ‘ಸಿ’ ವರ್ಗಕ್ಕೆ (ಅಕ್ರಮ) ಸೇರಿದ ‘ಕಾರ್ತಿಕೇಯ ಮ್ಯಾಂಗನೀಸ್ ಆ್ಯಂಡ್ ಐರನ್ ವೋರ್’ನ ಗಣಿಯನ್ನು ಎಂಎಸ್‌ಪಿಎಲ್ ಸಂಸ್ಥೆ 2016ರಲ್ಲಿ ಹರಾಜಿನಲ್ಲಿ ಖರೀದಿ ಮಾಡಿತ್ತು. 28.299 ಹೆಕ್ಟೇರ್‌ನ ಈ ಗಣಿಗೆ ಸದ್ಯ ಹೊಸದಾಗಿ ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಗಣಿಗೆ ಮೊದಲ ಹಂತದ ಅನುಮತಿ (ಸ್ಟೇಜ್–1)ನೀಡುವಂತೆ ಅರಣ್ಯ ಇಲಾಖೆಯ ಹೆಚ್ಚು
ವರಿ ಮುಖ್ಯ ಕಾರ್ಯದರ್ಶಿ ಮೇ 17ರಂದು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ.
ರಾಜ್ಯದ ಶಿಫಾರಸು ಪರಿಶೀಲಿಸಿರುವ ಕೇಂದ್ರ ಸರ್ಕಾರ, ಹಲವು ದೋಷಗಳನ್ನು ಪತ್ತೆ ಮಾಡಿ ರಾಜ್ಯಕ್ಕೆ ಪತ್ರ ಬರೆದಿದ್ದು, ಅದು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಕಾರ್ತಿಕೇಯ ಕಂಪನಿಯು ಕೇಂದ್ರದ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಗಣಿಗಾರಿಕೆ ನಡೆಸಿದ್ದ ಪ್ರದೇಶದ ಪ್ರಸ್ತುತ ನಿವ್ವಳ ಮೌಲ್ಯ ಮತ್ತು ಗಣಿಗಾರಿಕೆಯಿಂದ ಆದ ಅರಣ್ಯ, ಪರಿಸರ ಹಾನಿಯ ದಂಡ ಒಟ್ಟು ₹81,14,55,517 ಆಗಿದ್ದು, ಅದನ್ನು ಈ ವರೆಗೆ ಪಾವತಿ ಮಾಡಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಕೇಂದ್ರ ಹೇಳಿದೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಾರ್ತಿಕೇಯ ಕಂಪನಿಯ ವಿರುದ್ಧ 2012ರ ಅಕ್ಟೋಬರ್ 3ರಂದು ಪ್ರಕರಣ ದಾಖಲಾಗಿತ್ತು. ಬಾಕಿ ವಸೂಲಿಗೆ ಕಾನೂನು ಪ್ರಕ್ರಿಯೆ ಮುಂದುವರಿದಿದೆ ಎಂದು ಅರಣ್ಯ ಇಲಾಖೆಯ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.