ಹೂವಿನಹಡಗಲಿ: ತುಂಗಭದ್ರಾ ನದಿಯಲ್ಲಿ ತೆಪ್ಪಗಳ ಮೂಲಕ ಮರಳು ಅಕ್ರಮ ಸಾಗಣೆ ಮಾಡುತ್ತಿದ್ದ ತಂಡದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಎರಡೂ ದಂಡೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮೂರು ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.
ನದಿಯ ಎಡ ದಂಡೆಯ ದಂಧೆಕೋರರು ಬಲ ದಂಡೆ ಭಾಗದ ಮರಳನ್ನು ತೆಪ್ಪಗಳಲ್ಲಿ ತುಂಬಿ ಆ ಕಡೆ ದಡಕ್ಕೆ ಸಾಗಿಸುತ್ತಿದ್ದರು. ಮಂಗಳವಾರ ‘ಪ್ರಜಾವಾಣಿ’ಯಲ್ಲಿ ‘ತುಂಗಭದ್ರೆಯಲ್ಲಿ ಮರಳು ತೆಪ್ಪಯಾನ’ ಸುದ್ದಿ ಪ್ರಕಟವಾಗಿತ್ತು.
ಹಾವೇರಿ ಮತ್ತು ವಿಜಯನಗರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸುತ್ತಿದ್ದಂತೆ ಮರಳು ಸಾಗಣೆಯಲ್ಲಿ ತೊಡಗಿದ್ದ ದಂಧೆಕೋರರು ತೆಪ್ಪಗಳನ್ನು ನದಿಯಲ್ಲಿ ಮುಳುಗಿಸಿ ಪರಾರಿಯಾಗಿದ್ದಾರೆ. ಹಾವೇರಿ ಭಾಗದ ಕಂಚಾರಗಟ್ಟಿ ಬಳಿ ಅಧಿಕಾರಿಗಳು ಎರಡು ಬಿದಿರಿನ ತೆಪ್ಪ, ಒಂದು ಕಬ್ಬಿಣ ತೆಪ್ಪ ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಬ್ಯಾಲಹುಣ್ಸಿ, ನಂದಿಗಾವಿ ತೀರದಲ್ಲಿ ತಹಶೀಲ್ದಾರ್ ಜಿ. ಸಂತೋಷಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಮಲ್ಲಯ್ಯ ಹಾಗೂ ಹಾವೇರಿ ಭಾಗದಲ್ಲಿ ಹಿರಿಯ ಭೂ ವಿಜ್ಞಾನಿ ಶಬ್ಬೀರ್ ಬಾಷಾ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.
‘ತೆಪ್ಪಗಳ ಮೂಲಕ ಮರಳು ಅಕ್ರಮ ಸಾಗಣೆ ತಡೆಗಟ್ಟಲು ತಹಶೀಲ್ದಾರ್ ಅವರು ವಿಶೇಷ ಕಾರ್ಯಾಚರಣೆಗೆ ಯೋಜಿಸಿದ್ದಾರೆ. ಜೀವರಕ್ಷಕ ಪರಿಕರದೊಂದಿಗೆ ಮುಳುಗು ತಜ್ಞರ ತಂಡಕ್ಕೆ ವಿಶೇಷ ಬೋಟ್ ವ್ಯವಸ್ಥೆ ಮಾಡಿ, ನದಿಪಾತ್ರದಲ್ಲಿ ಕಣ್ಗಾವಲು ಇರಿಸಲಾಗುವುದು’ ಎಂದು ಭೂ ವಿಜ್ಞಾನಿ ಮಲ್ಲಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.