ADVERTISEMENT

ಅರಿವು ಅಜ್ಞಾನದಿಂದಲೂ ಭ್ರಷ್ಟಾಚಾರ: ಇನ್‌ಸ್ಪೆಕ್ಟರ್‌ ಪ್ರಭುಲಿಂಗಯ್ಯ ಹಿರೇಮಠ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 15:15 IST
Last Updated 18 ಜನವರಿ 2021, 15:15 IST
ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು   

ಹೊಸಪೇಟೆ: ‘ಅರಿವು, ಅಜ್ಞಾನದ ಕೊರತೆಯಿಂದ ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗಿದೆ’ ಎಂದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಇನ್‌ಸ್ಪೆಕ್ಟರ್‌ ಪ್ರಭುಲಿಂಗಯ್ಯ ಹಿರೇಮಠ ತಿಳಿಸಿದರು.

ಎಸಿಬಿ‌ಯಿಂದ ಸೋಮವಾರ ನಗರದ ವಿಜಯನಗರ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಭ್ರಷ್ಟಾಚಾರ ನಿಗ್ರಹದಲ್ಲಿ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ’ ಪಾತ್ರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ನಿರ್ವಹಣೆಯ ಕಾರ್ಯವಿಧಾನದ ಬಗ್ಗೆ ತಿಳಿದುಕೊಂಡಿರಬೇಕು. ಸರ್ಕಾರದ ಯೋಜನೆಗಳ ಮಾಹಿತಿ ಪಡೆಯಲು ಮಾಹಿತಿ ಹಕ್ಕು, ಸಕಾಲ ಯೋಜನೆಗಳನ್ನು ಬಳಸಿಕೊಳ್ಳಬೇಕು. ಸರ್ಕಾರದ ಯಾವುದೇ ಯೋಜನೆ ಇರಲಿ, ಯಾವ ಅಡೆತಡೆ ಇಲ್ಲದೇ ಫಲಾನುಭವಿಗಳಿಗೆ ನೇರವಾಗಿ ತಲುಪಬೇಕು. ಆದರೆ, ಅದು ಕಟ್ಟಕಡೆಯ ಮನುಷ್ಯನಿಗೆ ತಲುಪುತ್ತಿಲ್ಲ’ ಎಂದರು.

ADVERTISEMENT

‘ವಿದ್ಯಾರ್ಥಿಗಳಿಗೆ ಮನೆಯ ಜವಾಬ್ದಾರಿ ಬಂದ ಮೇಲೆ ಭ್ರಷ್ಟಾಚಾರದ ಅನುಭವವಾಗುತ್ತದೆ. ಅದನ್ನು ನಿಗ್ರಹಿಸಲು ಏನು ಮಾಡಬೇಕು ಎನ್ನುವುದನ್ನು ಅರಿಯಬೇಕು. ಜನ ಕಟ್ಟುವ ತೆರಿಗೆ ಹಣದಿಂದ ಸರ್ಕಾರದ ಸೌಲಭ್ಯ ದೊರೆಯುತ್ತವೆ. ಆ ಸೌಲಭ್ಯ ಪಡೆಯುವುದು ನಮ್ಮ ಹಕ್ಕು. ಅದಕ್ಕಾಗಿ ಯಾರಿಗೂ ಲಂಚ ಕೊಡಬೇಕಿಲ್ಲ’ ಎಂದು ಹೇಳಿದರು.

‘ಭ್ರಷ್ಟಾಚಾರ ನಿಗ್ರಹ ದಳವು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕಾಗಿಯೇ ಸ್ಥಾಪನೆಗೊಂಡಿದೆ. ಭ್ರಷ್ಟಾಚಾರದ ಕುರಿತು ನೀಡುವ ದೂರಿನ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ. ದೂರನ್ನು ನೀಡಲು ಯಾರೂ ಹಿಂಜರಿಯಬಾರದು. ಅದರಲ್ಲೂ ಮಹಿಳೆಯರು ಧೈರ್ಯದಿಂದ ಮುಂಚೂಣಿಯಲ್ಲಿ ಬಂದು ಭ್ರಷ್ಟಾಚಾರದ ನಿರ್ಮೂಲನೆಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಪ್ರಾಚಾರ್ಯ ವಿ.ಎಸ್‌. ಪ್ರಭಯ್ಯ ಮಾತನಾಡಿ, ‘ನಮ್ಮ ದೇಶದಲ್ಲಿ ಹಂತ ಹಂತವಾಗಿ ಭ್ರಷ್ಟಾಚಾರ ಕಡಿಮೆಯಾಗುತ್ತಿದೆ. ಇದಕ್ಕೆ ಸಾರ್ವಜನಿಕರ, ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿರುತ್ತದೆ’ ಎಂದರು.

ಪ್ರಾಚಾರ್ಯ ಸುಜಾತ ಬೆಳ್ಳಿಗುಂಡಿ, ಎಚ್.ಎಂ. ಪ್ರಭು ಸ್ವಾಮಿ, ಪ್ರಾಧ್ಯಾಪಕ ಎಚ್.ಎಂ.ನಿರಂಜನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.