ADVERTISEMENT

ತೆಕ್ಕಲಕೋಟೆ | ‘ಬೆಳಕು’ ನೀಡಲು ಇಲ್ಲ ಸಿಬ್ಬಂದಿ

ಅಸಮರ್ಪಕ ವಿದ್ಯುತ್‌ ಪೂರೈಕೆ: ಸಂಕಷ್ಟದಲ್ಲೂ ಸಿಬ್ಬಂದಿ ಬೇರೆಡೆ ನಿಯೋಜನೆ– ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 5:16 IST
Last Updated 8 ಜುಲೈ 2024, 5:16 IST

ತೆಕ್ಕಲಕೋಟೆ ಪಟ್ಟಣದ ಜೆಸ್ಕಾಂ ಕಚೇರಿ ಹೊರನೋಟ

ತೆಕ್ಕಲಕೋಟೆ ಪಟ್ಟಣದ ಜೆಸ್ಕಾಂ ಕಚೇರಿ ಹೊರನೋಟ

ತೆಕ್ಕಲಕೋಟೆ: ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ಜೆಸ್ಕಾಂ ವಿಫಲವಾಗಿದ್ದು, ರೈತರ ಸುಟ್ಟ ಟಿಸಿ ಹಾಗೂ ಕಂಬ ಬದಲಿಸುವಲ್ಲಿಯೂ ಸಂಪೂರ್ಣ ಬೇಜವಾಬ್ದಾರಿ ತೋರುತ್ತಿದೆ ಎಂದು ತೆಕ್ಕಲಕೋಟೆ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾರ್ಯ ಮತ್ತು ಪಾಲನೆ ವಿಭಾಗವು ಸಿಬ್ಬಂದಿ ಕೊರತೆ ಕಾರಣ ನೀಡಿ ಲೈನ್ ಜಂಪ್, ಟ್ರಿಪ್ ಮುಂತಾದ ಸಾಮಾನ್ಯ ಸಮಸ್ಯೆ ಪರಿಹರಿಸುವಲ್ಲಿ 3-‌4 ತಾಸು ತೆಗೆದುಕೊಳ್ಳುತ್ತಿದೆ. ಜತೆಗೆ ಸುಟ್ಟ ವಿದ್ಯುತ್ ಪರಿವರ್ತಕ ಬದಲಾವಣೆ ಮಾಡಬೇಕಾದಲ್ಲಿ ನಾಲ್ಕಾರು ದಿನ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವುದು ಸಾಮಾನ್ಯ ಎಂಬಂತಾಗಿದೆ.

ADVERTISEMENT

ಈ ಬಾರಿಯ ಬೇಸಿಗೆಯಲ್ಲಿ ಪ್ರತೀ ವರ್ಷಕ್ಕಿಂತ ಅತ್ಯಧಿಕ ಉಷ್ಣಾಂಶವಿತ್ತು. ಇದೀಗ ಮಳೆಗಾಲ ಆರಂಭವಾಗಿ ಕೃಷಿ ಚಟುವಟಿಕೆಗಳು ವೇಗ ಪಡೆಯುವ ಹಂತದಲ್ಲಿವೆ. ಆದರೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ರೈತರಿಗೆ ಹೊಲಗದ್ದೆಗಳಿಗೆ ನೀರು ಸಿಗುತ್ತಿಲ್ಲ. ವಿದ್ಯುತ್‌ ಸ್ಥಗಿತಗೊಳ್ಳುವ ಸಮಯಕ್ಕಿಂತ ವಿದ್ಯುತ್‌ ಎಷ್ಟು ಸಮಯ ಇತ್ತು ಎಂಬ ಲೆಕ್ಕ ಹಾಕುವ ಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನೀಲಕಂಠ ಕ್ಯಾಂಪ್‌ನ ರೈತ ಮಾಕಣ್ಣ, ಸಿದ್ದಲಿಂಗ, ಶಾಂಭಯ್ಯ, ಚನ್ನಪ್ಪ, ಕುಬೇರ, ಕೃಷ್ಣ, ಗಾದಿಲಿಂಗ ಎಂಬುವವರು ಕಿರಿಯ ಎಂಜಿನಿಯರ್‌ ಯಲ್ಲಪ್ಪ ಇವರನ್ನು ಶನಿವಾರ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ.

‘ಕಳೆದ ತಿಂಗಳಿಂದ ಕಂಬಗಳ ಬದಲಾವಣೆಗೆ ವಿನಂತಿಸುತ್ತಿದ್ದರೂ ಜೆಸ್ಕಾಂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅವರು ಅಸಮಧಾನ ಹೊರಹಾಕಿದರು.

ಪಟ್ಟಣ ಪಂಚಾಯಿತಿಯ 20 ವಾರ್ಡ್ ಸೇರಿದಂತೆ 7 ಗ್ರಾಮ ಪಂಚಾಯಿತಿಗಳಾದ ಬಲಕುಂದಿ, ಉಪ್ಪಾರ ಹೊಸಳ್ಳಿ, ಹಳೇಕೋಟೆ, ನಡಿವಿ, ಎಂ.ಸೂಗೂರು, ಉತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರಿಗನೂರು ಮತ್ತು ಮಾಟಸೂಗುರು ಗ್ರಾಮಗಳು ಜೆಸ್ಕಾಂ ವ್ಯಾಪ್ತಿಗೆ ಒಳಪಡುತ್ತವೆ. ಪ್ರತಿಯೊಂದು ಗ್ರಾ.ಪಂ.ಗೆ ಒಬ್ಬರು ಲೈನ್‌ಮನ್(ಮಾರ್ಗದಾಳು) ಇರಬೇಕು ಎನ್ನುವ ನಿಯಮವನ್ನು ಜೆಸ್ಕಾಂ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಕೆಲ ಗ್ರಾ.ಪಂ. ಕಚೇರಿ ವ್ಯಾಪ್ತಿಗೆ ಲೈನ್‌ಮನ್‌ಗಳಿಲ್ಲದೆ, ವಿದ್ಯುತ್ ಪರಿವರ್ತಕ, ವಿದ್ಯುತ್ ತಂತಿಗಳನ್ನು ಅಳವಡಿಸುವ ನಾನಾ ಕೆಲಸಗಳು ದಿನೇ ದಿನೆ ವಿಳಂಬವಾಗುತ್ತಿವೆ.

ಹುದ್ದೆಗಳು ಖಾಲಿ:

ತೆಕ್ಕಲಕೋಟೆ ಜೆಸ್ಕಾಂ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಾದ ಹಿರಿಯ ಸಹಾಯಕ 1, ಸಹಾಯಕರು 1, ಲೆನ್ ಮೆಕ್ಯಾನಿಕ್ ಗ್ರೇಡ್ ಒಂದರಲ್ಲಿ 1, ಲೆನ್ ಮೆಕ್ಯಾನಿಕ್ ಗ್ರೇಡ್ ಎರಡರಲ್ಲಿ 1, ಲೆನ್‌ಮನ್ 1, ಸಹಾಯಕ ಲೆನ್‌ಮನ್ 12, ಮೀಟರ್ ರೀಡರ್ 1, ಒಟ್ಟು 18 ಹುದ್ದೆಗಳು ಖಾಲಿ ಇದ್ದು, ಸಿಬ್ಬಂದಿಗಳನ್ನು ಭರ್ತಿ ಮಾಡಿಕೊಳ್ಳಲು ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇದರ ಜತೆಗೆ ಸಿಬ್ಬಂದಿಯನ್ನು ಬೇರೆಡೆ ನಿಯೋಜನೆ ಮಾಡುತ್ತಿರುವುದರಿಂದ ಜೆಸ್ಕಾಂ ಮತ್ತಷ್ಟು ಸಮಸ್ಯೆಗೆ ಗುರಿಯಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ.

ವಿಳಂಬ: ತೆಕ್ಕಲಕೋಟೆ ಸುತ್ತಲ ನಾನಾ ಗ್ರಾಮಗಳ ಗ್ರಾಮಸ್ಥರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಸಾಮಾನ್ಯ ಎಂಬಂತೆ ಆಗಿದೆ. ವಾಸ್ತವವಾಗಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಗ್ರಾಮದ ಕೆಲಸಗಳು ದಿನೇ ದಿನೆ ವಿಳಂಬವಾಗುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆಕ್ಕಲಕೋಟೆ ಪಟ್ಟಣದ ಜೆಸ್ಕಾಂ ಸಿಬ್ಬಂದಿಯ ಪಾಳು ಬಿದ್ದಿರುವ ವಸತಿ ಗೃಹಗಳು

ಯಾರು ಏನಂತಾರೆ?

ಸಿಬ್ಬಂದಿ ಕೊರತೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಶೀಘ್ರವೇ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ - ಯಲ್ಲಪ್ಪ ಜೆಇ ಜೆಸ್ಕಾಂ ತೆಕ್ಕಲಕೋಟೆ

ತೆಕ್ಕಲಕೋಟೆ ಜೆಸ್ಕಾಂನಲ್ಲಿ ಕೇವಲ ಎರಡು ಮಾರ್ಗದಾಳುಗಳ ಕೊರತೆ ಇದೆ. ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ - ನವೀನ್ ಕುಮಾರ್ ಎಇಇ ಜೆಸ್ಕಾಂ ಸಿರುಗುಪ್ಪ

ರೈತರು ವಿದ್ಯುತ್ ಸಮಸ್ಯೆ ಬಗ್ಗೆ ಕೇಳಿದ್ರೆ ಅಧಿಕಾರಿಗಳು ಲೋಡ್ ಶೆಡ್ಡಿಂಗ್ ಇದೆ ಎಂಬಿತ್ಯಾದಿ ಕಾರಣ ಹೇಳುತ್ತಾರೆ. ಹೀಗಿರುವಾಗ ನಾವು ಯಾರನ್ನು ಕೇಳುವುದು – ಬಿ.ಮಲ್ಲಿಕಾರ್ಜುನ ಗೌಡ ಅಧ್ಯಕ್ಷ ಸಿರುಗುಪ್ಪ ತಾಲ್ಲೂಕು ಬಣಜಿಗರ ಸಂಘ ತೆಕ್ಕಲಕೋಟೆ

ಪಟ್ಟಣದ ಮೂರನೇ ವಾರ್ಡ್ ವಿದ್ಯುತ್ ಪರಿವರ್ತಕದ ಸಾಮರ್ಥ್ಯ ಹೆಚ್ಚಿಸುವಂತೆ ಕಳೆದು ಆರು ತಿಂಗಳಿನಿಂದ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಪ್ರತಿ ಬಾರಿ ಟಿಸಿ ಸುಟ್ಟಾಗ ವಾರಗಟ್ಟಲೆ ವಿದ್ಯುತ್ ಇರುವುದಿಲ್ಲ – ನಸರುದ್ದೀನ್ ಪಟ್ಟಣ ಪಂಚಾಯಿತಿ ಸದಸ್ಯ ತೆಕ್ಕಲಕೋಟೆ

ವಸತಿ ಗೃಹಗಳಲ್ಲಿ ಸೌಲಭ್ಯಗಳಿಲ್ಲ

ತೆಕ್ಕಲಕೋಟೆ ಜೆಸ್ಕಾಂ ಕಚೇರಿಯ ಆವರಣದಲ್ಲಿರುವ 5 ವಸತಿ ಗೃಹಗಳಲ್ಲಿ ಸೌಲಭ್ಯಗಳಿಲ್ಲದೆ ಕೆಪಿಟಿಸಿಎಲ್ ಹಾಗೂ ಜೆಸ್ಕಾಂ ಸಿಬ್ಬಂದಿ ಪರದಾಡುವಂತಾಗಿದೆ. ಇಲ್ಲಿನ ವಸತಿಗೃಹದ ಪ್ರದೇಶದಲ್ಲಿ ಒಟ್ಟು 3 ಕುಟುಂಬಗಳು ವಾಸಿಸುತ್ತಿವೆ. ಎರಡು ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿವೆ. ಕಳೆದ 30 ವರ್ಷಗಳ ಹಿಂದೆ ನಿರ್ಮಿಸಿದ್ದ ವಸತಿ ಗೃಹಗಳು ಮಳೆ ಬಂದರೆ ಸಂಪೂರ್ಣ ರಾಡಿಯಾಗುತ್ತವೆ. ವಸತಿ ಗೃಹಗಳಿಗೆ ಒಳಚರಂಡಿ ನೀರು ಹರಿಯಲು ಸೂಕ್ತ ಮಾರ್ಗವಿಲ್ಲದೆ ನಿಂತು ದುರ್ವಾಸನೆ ಹರಡುತ್ತಿದೆ. ಜೆಸ್ಕಾಂ ಕಚೇರಿಗೆ ಬರುವ ಸಾರ್ವಜನಿಕರಿಗೆ ಅಧಿಕಾರಿಗಳಿಗೆ ಶೌಚಾಲಯ ಇಲ್ಲದಂತಾಗಿದೆ. ಗ್ರಾಹಕರು ಸೇರಿದಂತೆ ಅಧಿಕಾರಿಗಳು ಮನೆಗೆ ಅಥವಾ ಬಯಲಿಗೆ ಶೌಚಕ್ಕೆ ತೆರಳುವಂತಾಗಿದೆ. ಮಳೆ ಬಂದರೆ ಸಾಕು ಕಚೇರಿಗಳು ಕೂಡ ತೊಟ್ಟಿಕ್ಕುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.