ತೋರಣಗಲ್(ಬಳ್ಳಾರಿ): ‘ರಾಜ್ಯದಲ್ಲಿರುವುದು ಅಸಮರ್ಥ ಸರ್ಕಾರ, ಅಸಮರ್ಥ ಮುಖ್ಯಮಂತ್ರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿ ನಂ. 1 ಆಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಸಂಡೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಡೀ ದೇಶದಲ್ಲೇ ಕೇವಲ ಒಂದೂವರೆ ವರ್ಷದಲ್ಲಿ ಜನಪ್ರಿಯತೆ ಕಳೆದುಕೊಂಡ ಯಾವುದಾದರೂ ಸರ್ಕಾರವಿದ್ದರೆ ಅದು ಸಿದ್ದರಾಮಯ್ಯ ಸರ್ಕಾರ. ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಮಾತ್ರ ಓಲೈಸುತ್ತಿದ್ದು, ಹಿಂದುಳಿದವರನ್ನು ಮರೆತಿದ್ದಾರೆ’ ಎಂದು ಟೀಕಿಸಿದರು.
‘ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಮುಡಾದಲ್ಲಿ ₹5 ಸಾವಿರ ಕೋಟಿ ಬೆಲೆಯ ನಿವೇಶನಗಳು ಲೂಟಿಯಾಗಿವೆ. 50:50 ನಿವೇಶನ ಹಿಂಪಡೆಯುವ ಮುಡಾದ ನಿರ್ಣಯ ಇದಕ್ಕೆ ಸಾಕ್ಷಿ. ಹಿಂದಿನ ಮುಡಾ ಆಯುಕ್ತ ದಿನೇಶ್ ಎಂಬುವವರನ್ನು ಬಚ್ಚಿಡಲಾಗಿದೆ’ ಎಂದು ಆರೋಪಿಸಿದರು.
ಕುನ್ಹಾ ವರದಿಯಲ್ಲಿ ಗೊಂದಲ:
‘ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ನೀಡಿರುವ ವರದಿಯಲ್ಲಿ ಗೊಂದಲವಿದೆ. ಚುನಾವಣೆ ಸೋಲಿನ ಭೀತಿಯಿಂದ ಕಾಂಗ್ರೆಸ್ ಹೀಗೆ ಮಾಡಿದೆ’ ಎಂದು ಆರೋಪಿಸಿದರು.
‘ಮಧ್ಯಂತರ ವರದಿಯು 14 ಪುಟಗಳಿದ್ದು, ಒಂದೊಂದು ಪುಟಕ್ಕೆ ಒದೊಂದು ಕೋಟಿಯಂತೆ ₹14 ಕೋಟಿ ಹಗರಣ ಎಂದು ಬರೆದಿದ್ದಾರೆ. ಇಷ್ಟೊಂದು ಆತುರ ಏಕೆ? ಉಪ ಚುನಾವಣೆಯಲ್ಲಿ ಮಧ್ಯಂತರ ವರದಿ ತರುವ ಅಗತ್ಯ ಏನಿದೆ? ತಮ್ಮ ಸರ್ಕಾರದ ಹಗರಣ ಮುಚ್ಚಿ ಹಾಕಲು ಯಡಿಯೂರಪ್ಪ, ಶ್ರೀರಾಮುಲುರನ್ನು ಬೆದರಿಸುವ ಕೆಲಸ ನಡೆಯುತ್ತಿದೆ’ ಎಂದರು.
ಯಡಿಯೂರಪ್ಪ ಶಕ್ತಿ ಏನು ಎನ್ನುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಭಂಡ ಮುಖ್ಯಮಂತ್ರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ.–ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಕಾಂಗ್ರೆಸ್‌ನಲ್ಲಿ ಕಾಣದ ಅಬ್ಬರ
ಸಂಡೂರು(ಬಳ್ಳಾರಿ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆತಂದು ಕಳೆದ ಮೂರು ದಿನಗಳಿಂದ ಕ್ಷೇತ್ರದಲ್ಲಿ ಅಬ್ಬರಿಸಿದ್ದ ಕಾಂಗ್ರೆಸ್ ಭಾನುವಾರ ತಣ್ಣಗೆ ಪ್ರಚಾರ ಕಾರ್ಯದಲ್ಲಿ ತೊಡಗಿತ್ತು. ವಾರಕ್ಕೂ ಹೆಚ್ಚು ಕಾಲ ಕ್ಷೇತ್ರದಲ್ಲೇ ಉಳಿದು ಪ್ರಚಾರ ಮಾಡಿದ್ದ ಸಚಿವ ಸಂತೋಷ್ ಲಾಡ್ ಹೊರಗೆಲ್ಲೂ ಕಾಣಲಿಲ್ಲ. ಅಭ್ಯರ್ಥಿ ಅನ್ನಪೂರ್ಣ ಕುಡುತಿನಿ ಭಾಗದ ಹಳ್ಳಿಗಳಲ್ಲಿ ಪ್ರಚಾರ ನಡೆಸಿದರು. ಇನ್ನೊಂದೆಡೆ ಸಚಿವ ದಿನೇಶ್ ಗುಂಡೂರಾವ್ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಶಾಸಕರಾದ ಅಜಯ್ ಧರ್ಮಸಿಂಗ್ ವೀರೇಂದ್ರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಕೋವಿಡ್ ವೇಳೆ ಮೋಜು ಮಸ್ತಿಯಲ್ಲಿ ತೊಡಗಿದ್ದ ಕಾಂಗ್ರೆಸ್
ಸಂಡೂರು (ಬಳ್ಳಾರಿ): ‘ಕೋವಿಡ್ ಸಂದರ್ಭದಲ್ಲಿ ನಾವು ಜನರ ಜೀವ ಉಳಿಸುತ್ತಿದ್ದರೆ ಕಾಂಗ್ರೆಸ್ಸಿನವರು ಮೋಜು ಮಸ್ತಿಯಲ್ಲಿ ತೊಡಗಿದ್ದರು’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು. ಭಾನುವಾರ ಸಂಡೂರಿನ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ‘ಕೋವಿಡ್ ಸಂದರ್ಭದಲ್ಲಿ ನಾನು ರಾಜ್ಯದ ಎಲ್ಲಾ ಕಡೆ ಹೋಗಿದ್ದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್ ಯಡಿಯೂರಪ್ಪ ಜನರ ಜೀವ ಉಳಿಸುವ ಕೆಲಸ ಮಾಡಿದರು. ನಾವು ರಾತ್ರಿ ಹಗಲು ಕೆಲಸ ಮಾಡಿದ್ದೇವೆ. ನಮ್ಮ ಮೇಲೆ ಆರೋಪ ಮಾಡಿದ್ದಾರೆ. ತನಿಖೆಯನ್ನೂ ಮಾಡಲಿ. ನಾವು ಬಡವರ ಹಣ ಹೊಡೆದಿಲ್ಲ’ ಎಂದರು.
‘ಬಿಜೆಪಿಯವರು ಕೋವಿಡ್ ಸಂದರ್ಭದಲ್ಲಿ ಹೆಣದ ಮೇಲೆ ಹಣ ಮಾಡಿದ್ದಾರೆ. ಹೀಗಾಗಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪಆರೋಗ್ಯ ಸಚಿವ ಶ್ರೀರಾಮುಲು ಮೇಲೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಇಲ್ಲಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.