ADVERTISEMENT

ಕಾರ್ಚಿಕಾಯಿಗೆ ಹೆಚ್ಚಿದ ಬೇಡಿಕೆ

ಕೆ.ಜಿಗೆ ₹150, ಸೇರಿಗೆ ₹50ಕ್ಕೆ ಮಾರಾಟ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 6:29 IST
Last Updated 6 ಜುಲೈ 2024, 6:29 IST
ಸಿರುಗುಪ್ಪ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾರ್ಚಿಕಾಯಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು
ಸಿರುಗುಪ್ಪ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾರ್ಚಿಕಾಯಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು   

ಸಿರುಗುಪ್ಪ: ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾರ್ಚಿಕಾಯಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ವ್ಯಾಪರ ಜೋರಾಗಿದೆ. ಗ್ರಾಹಕರಿಂದ ಸಾಕಷ್ಟು ಬೇಡಿಕೆಯೂ ಇದೆ.

ತಾಲ್ಲೂಕಿನಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ಹೊಲವನ್ನು ಹದಗೊಳಿಸಿರುವ ರೈತರು ಬಿತ್ತನೆಗೆ ಸಿದ್ಧಗೊಳಿಸಿದ ಹೊಲಗಳಲ್ಲಿ ಮೊದಲ ಮಳೆ ಬೀಳುತ್ತಿದ್ದಂತೆ ಕಾರ್ಚಿಕಾಯಿ ಬಳ್ಳಿ ಹುಟ್ಟಿಕೊಳ್ಳುತ್ತದೆ. ಈ ಬಳ್ಳಿಯು ಭೂಮಿಯಲ್ಲಿ ನೈಸರ್ಗಿಕವಾಗಿಯೇ ಹುಲುಸಾಗಿ ಬೆಳೆಯುತ್ತದೆ.

ಕೆಲವು ರೈತರು ಈ ಬೆಳೆಯನ್ನು ಕಿತ್ತೆಸೆಯಲು ನಿರ್ಲಕ್ಷಿಸುತ್ತಿದ್ದಾರೆ. ರೈತ ಮಹಿಳೆಯರು ಇದರ ಮಹತ್ವವನ್ನು ಅರಿತು ಹೊಲಗಳಿಗೆ ತೆರಳಿ ಬಳ್ಳಿಯಲ್ಲಿರುವ ಕಾಯಿಗಳನ್ನು ಕಿತ್ತುಕೊಂಡು ಬಂದು ನಗರದ ಸೇರಿದಂತೆ ತಾಲ್ಲೂಕಿನಾದ್ಯಂತ ಮಾರಾಟ ಮಾಡುತ್ತಾರೆ. ಒಂದು ಕೆ.ಜಿ ಕಾರ್ಚಿಕಾಯಿಗೆ ₹150 ಮತ್ತು ಒಂದು ಸೇರ್‌ಗೆ ₹ 50 ದರವಿದೆ. ಇದರಿಂದ ಆದಾಯವೂ ಹೆಚ್ಚಿದೆ.

ADVERTISEMENT

ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿವರ್ಷ ಜೂನ್ ಮತ್ತು ಜುಲೈ ತಿಂಗಳ ಮಳೆಗಾಲದಲ್ಲಿ ಸಿಗುವ ಕಾರ್ಚಿಕಾಯಿಯನ್ನು ತರಕಾರಿ ಪ್ರಿಯರು ಹುಡುಕಿಕೊಂಡು ಬಂದು ಖರೀದಿಸುವುದರಿಂದ ಇತ್ತೀಚಿನ ದಿನಗಳಲ್ಲಿ ಭಾರಿ ಬೇಡಿಕೆ ಬಂದಿದ್ದು, ದಾಖಲೆ ಬೆಳೆಯಲ್ಲಿ ಮಾರಾಟವಾಗುತ್ತಿದೆ.

ಸೇವನೆ ವಿಧಾನ: ದೊಡ್ಡ ಗಾತ್ರದ ಕಾರ್ಚಿಕಾಯಿಯಲ್ಲಿ ಬಿಳಿಬಣ್ಣದ ಬೀಜಗಳು ಕಂಡುಬರುತ್ತವೆ. ಈ ಕಾಯಿಯನ್ನು ಎಣ್ಣೆಯಲ್ಲಿ ಹುರಿದು ನೀರು ಬೆರೆಸದೇ ಪಲ್ಯ ಸಿದ್ಧಪಡಿಸಿ,ಜೋಳದ ರೊಟ್ಟಿಯ ಜೊತೆಗೆ ತಿನ್ನುತ್ತಾರೆ. ಇದು ಹಾಗಲಕಾಯಿ ಜಾತಿಗೆ ಸೇರಿದ್ದರೂ ಅದರಷ್ಟು ಕಹಿ ಇರುವುದರಿಲ್ಲ.

‘ಕೆ.ಜಿಗೆ ₹160, ಒಂದು ಸೇರಿಗೆ ₹50 ರಂತೆ  ಕಾರ್ಚಿಕಾಯಿ ಮಾರಾಟ ಮಾಡುತ್ತಿದ್ದೇವೆ. ಜನರು ಕಾರ್ಚಿಕಾಯಿ ಖರೀದಿಗೆ ಹುಡುಕಿಕೊಂಡು ಬರುತ್ತಿದ್ದಾರೆ. ಇದರಿಂದಾಗಿ ಉತ್ತಮ ವ್ಯಾಪಾರವಾಗುತ್ತಿದೆ’ ಎಂದು ವ್ಯಾಪಾರಿ ಸಿದ್ದಮ್ಮ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.