ತೆಕ್ಕಲಕೋಟೆ: ಸಮೀಪದ ಬಲಕುಂದಿ ಗ್ರಾಮದ ರೈತ ಮಹಿಳೆ ಬಿ.ಎಂ ಸುನೀತಾ ರುದ್ರಮುನಿ 2 ಎಕರೆಯಲ್ಲಿ ಪೇರಲ ಬೆಳೆದಿದ್ದು, ಮೊದಲ ಯತ್ನದಲ್ಲೆ ಉತ್ತಮ ಫಸಲು ಪಡೆದು ಹುಬ್ಬೇರುವಂತೆ ಮಾಡಿದ್ದಾರೆ.
ಕಳೆದ ಬಾರಿ ದಾಳಿಂಬೆ ಬೆಳೆದು ಕೈತುಂಬಾ ಆದಾಯ ಗಳಿಸಿದ್ದ ಇವರು ಈ ಬಾರಿ ಪೇರಲ ಬೆಳೆಯುವ ಮೂಲಕ ಈ ಬೆಳೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ನೀರಾವರಿ ಸೌಕರ್ಯ ಇಲ್ಲದ ಬರಡು ನಾಡಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಬದುಕು ಹಸನಾಗಿಸಿಕೊಂಡ ಮಾದರಿ ರೈತ ಮಹಿಳೆ ಇವರು.
13 ತಿಂಗಳ ಹಿಂದೆ ಸೀಮಾಂಧ್ರದಿಂದ ತೈವಾನ್ ಪಿಂಕ್ ತಳಿಯ 1,200 ಗಿಡಗಳನ್ನು ₹45ಕ್ಕೆ ಒಂದರಂತೆ ತಂದು 2 ಎಕರೆಯಲ್ಲಿ ಪೇರಲ ಕೃಷಿ ಕೈಗೊಂಡಿದ್ದರು. ಸಾಲಿನಿಂದ ಸಾಲಿಗೆ 10 ಅಡಿ, ಗಿಡದಿಂದ ಗಿಡಕ್ಕೆ 6 ಅಡಿ ಅಂತರದಲ್ಲಿ ನಾಟಿ ಮಾಡಿದರು. 8 ರಿಂದ 9 ತಿಂಗಳಲ್ಲಿ ಬಂದ ಮೊದಲ ಮೊಗ್ಗು ಕತ್ತರಿಸಿ ಗಿಡ ಬೆಳೆಯಲು ಬಿಟ್ಟರು. ಈಗ ಇಳುವರಿ ಬರುತ್ತಿದ್ದು 4 ಟನ್ ಪೇರಲ ಮಾರುಕಟ್ಟೆಗೆ ಸಾಗಿಸಿದ್ದಾರೆ.
‘ಪೇರಲ ಸಸಿ, ನಾಟಿ, ಔಷಧೋಪಚಾರ, ಕೂಲಿ ಸೇರಿದಂತೆ ಸುಮಾರು ₹1.10 ಲಕ್ಷ ಖರ್ಚಾಗಿದೆ. ಮೊದಲ ಕಟಾವಿಗೆ ಹಾಕಿದ ಬಂಡವಾಳ ವಾಪಸ್ಸು ಬಂದಿದ್ದು, ಮುಂದಿನ ಕಟಾವು ಏನಿದ್ದರೂ ಲಾಭ. ದೂರದ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ ಹಾಗೂ ಆಂಧ್ರದಿ೦ದಲೂ ಪೇರಲಕ್ಕೆ ಬೇಡಿಕೆ ಇರುವುದರಿಂದ ಮಾರುಕಟ್ಟೆ ಸಮಸ್ಯೆ ಇಲ್ಲ ಎನ್ನುತ್ತಾರೆ’ ಸುನೀತಾ .
ಬಲಕುಂದಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯೂ ಆಗಿರುವ ಬಿ.ಎಂ.ಸುನೀತಾ ಸುತ್ತಲಿನ ಹಳ್ಳಿಗಳ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಮಹಿಳೆಯರಿಗಾಗಿ ಕೃಷಿ ಇಲಾಖೆಯ ಸಹಯೋಗದಲ್ಲಿ ಲಾಭದಾಯಕ ಕೃಷಿ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸುತ್ತಾರೆ. ‘ಸಮಗ್ರ ಕೃಷಿ ಪದ್ಧತಿಗೆ ಹೊಂದಿಕೊಳ್ಳುವ ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೇಕೆ ಜೇನು ಸಾಕಾಣಿಕೆಯಂತಹ ಉಪ ಕಸುಬುಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳುತ್ತಾರೆ.
ಶ್ರೀಸಿದ್ಧಗಂಗಾ ಸಂಜೀವಿನಿ ಸ್ವಸಹಾಯ ಗುಂಪಿನ ಮೂಲಕ ₹4 ಲಕ್ಷ ಸಾಲ ಪಡೆದು ಸಮಗ್ರ ಕೃಷಿಯಲ್ಲಿ ಉತ್ತಮ ಇಳುವರಿ ಪಡೆದಿದ್ದಾರೆ. ಇವರು ಬೆಳೆದ ಪೇರಲಕ್ಕೆ ಫಾಸೈ ಮೂಲಕ ಗುಣಮಟ್ಟದ ಚಿನ್ಹೆ ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು.–ಅಜೀಂ, ತಾಲ್ಲೂಕು ವ್ಯವಸ್ಥಾಪಕ ಎನ್‌ಆರ್‌ಎಲ್‌ಎಂ
ಸಮಗ್ರ ಕೃಷಿ ಪದ್ದತಿ ಅಳವಡಿಕೆ
ಕೃಷಿ ಸಂಶೋಧನಾ ಕೇಂದ್ರ ಸಿರುಗುಪ್ಪ ತೋಟಗಾರಿಕೆ ಕೃಷಿ ಇಲಾಖೆ ಮತ್ತು ಅರಣ್ಯ ಇಲಾಖೆಯವರೊಂದಿಗೆ ಚರ್ಚಿಸಿ ತಮ್ಮ 10.5 ಎಕರೆಯಲ್ಲಿ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು 2 ಎಕರೆಯಲ್ಲಿ ಮಹಾಗನಿ ಮತ್ತು ತಾಳೆ 2 ಎಕರೆಯಲ್ಲಿ ಪಪ್ಪಾಯ ಮತ್ತು ಮಹಾಗನಿ 4.5 ಎಕರೆಯಲ್ಲಿ ದಾಳಿಂಬೆ ಚೆಂಡು ಹೂ ಚಿಯಾ ಸೋಯಾ ಅವರೆ ಈರುಳ್ಳಿಯನ್ನು ಅಂತರ ಬೆಳೆಯನ್ನಾಗಿ ಬೆಳೆಯುತ್ತಿದ್ದಾರೆ. ‘ಬದುಗಳಲ್ಲಿ 2೦೦ ತೇಗ 15 ನಿಂಬೆ 150 ನುಗ್ಗೆ 5೦ ಶ್ರೀಗಂಧ 2೦ ತೆಂಗು 2೦೦ ಹೆಬ್ಬೇವು ಗಿಡಗಳನ್ನು ಬೆಳೆಸುತ್ತಿದ್ದೇವೆ. ನೀರಿನ ಸೌಕರ್ಯಕ್ಕಾಗಿ 5 ಕೊಳವೆ ಬಾವಿ ಕೊರೆಸಿದ್ದು ಹನಿ ನೀರಾವರಿ ಪದ್ದತಿ ಅನುಸರಿಸುತ್ತೇವೆ. ಮಳೆ ನೀರು ಸಂಗ್ರಹಕ್ಕಾಗಿ ಕೃಷಿ ಹೊಂಡ ನಿರ್ಮಿಸಿದ್ದು ಅಧಿಕ ಇಳುವರಿಗೆ ಸಹಾಯಕವಾಗಿದೆ’ ಎನ್ನುತ್ತಾರೆ ಸುನೀತ ಅವರ ಪತಿ ರೈತ ಬಿ.ಎಂ.ರುದ್ರಮುನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.