ತೇರದಾಳ: ಪಟ್ಟಣದಲ್ಲಿ ಈಚೆಗೆ ನಡೆದ ಜನತಾ ದರ್ಶನದಲ್ಲಿ ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳ ವಿಚಾರಣೆ ಕುರಿತು ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಶುಕ್ರವಾರ ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅಧ್ಯಕ್ಷತೆಯಲ್ಲಿ ಇಲ್ಲಿನ ಪುರಸಭೆಯಲ್ಲಿ ಜರುಗಿತು.
ಹಾಜರಿದ್ದ ಇಲಾಖೆ ಅಧಿಕಾರಿಗಳಿಂದ ಅರ್ಜಿಗಳ ಕುರಿತು ಮಾಹಿತಿ ಪಡೆದರು. ಹೆಚ್ಚು ಅರ್ಜಿ ಬಂದಿದ್ದ ತೇರದಾಳ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಸಿಬ್ಬಂದಿಗೆ ಶೀಘ್ರ ಅವುಗಳ ಇತ್ಯರ್ಥಕ್ಕೆ ಸೂಚಿಸಿದರು. ಉಳಿದ ಇಲಾಖೆಗಳಿಗೂ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು ಎಂದು ಸೂಚನೆ ನೀಡಿದರು.
ನಿಮ್ಮ ವ್ಯಾಪ್ತಿಯಲ್ಲಿ ಇದ್ದರೆ ಯಾವುದೇ ನೆಪ ಹೇಳದೆ ಕೆಲಸ ಮಾಡಬೇಕು. ಸರ್ಕಾರದ ಮಟ್ಟದಲ್ಲಿದ್ದರೆ ಪ್ರಸ್ತಾವ ಸಲ್ಲಿಸಬೇಕು. ಸಭೆಗೆ ಗೈರಾದ ಸಿಡಿಪಿಒ, ಆರೋಗ್ಯ, ಪಶುಸಂಗೋಪನಾ, ಬಿಇಒ, ಅಲ್ಪಸಂಖ್ಯಾತರ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಶೀಲ್ದಾರ್ ಅವರಿಗೆ ಎಸಿ ಸೂಚನೆ ನೀಡಿದರು.
ಕಂದಾಯ, ಕೃಷ್ಣಾ ಮೇಲ್ದಂಡ ಯೋಜನೆ, ಲೋಕಪಯೋಗಿ, ಜಿಎಲ್‌ಬಿಸಿ, ಕೃಷಿ, ಉಪನೋಂದಣಿ, ರಬಕವಿ-ಬನಹಟ್ಟಿ ನಗರಸಭೆ, ತೇರದಾಳ ಮತ್ತು ಮಹಾಲಿಂಗಪುರ ಪುರಸಭೆ ಅಧಿಕಾರಿಗಳು ತಮಗೆ ಬಂದ ಅರ್ಜಿಗಳ ಕುರಿತು ಹಾಗೂ ಕೈಗೊಂಡ ಕ್ರಮದ ಕುರಿತು ಎಸಿ ಅವರಿಗೆ ವಿವರಣೆ ನೀಡಿದರು.
ತಹಶೀಲ್ದಾರ್ ಗಿರೀಶ ಸ್ವಾದಿ, ಗ್ರೇಡ್ –2 ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಉಪತಹಶೀಲ್ದಾರ್ ಶ್ರೀಕಾಂತ ಮಾಯನ್ನವರ, ಜಿಎಲ್‌ಬಿಸಿ ಎಇಇ ಚೇತನ ಅಂಬಿಗೇರ, ಪೌರಾಯುಕ್ತ ಜಗದೀಶ ಈಟಿ, ಈರಣ್ಣ ದಡ್ಡಿ, ಆನಂದ ಕೆಸರಗೊಪ್ಪ, ರಾಘವೇಂದ್ರ ಕುಲಕರ್ಣಿ, ಎಸ್.ಎಲ್.ಕಾಗಿಯವರ, ಪ್ರಕಾಶ ಮಠಪತಿ, ಎಸ್.ಬಿ.ಮಾತಾಳಿ, ಎಫ್.ಬಿ.ಗಿಡ್ಡಿ, ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಮಲ್ಲಿಕಾರ್ಜುನ ಖವಟಕೊಪ್ಪ, ಪಿ.ಎಸ್.ವಂದಾಲ, ಪ್ರತಾಪ ಕೊಡುಗೆ, ಇರ್ಫಾನ್ ಝಾರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.