ADVERTISEMENT

‘ಬುಡಾ’ದಲ್ಲೂ ಅಕ್ರಮದ ಆರೋಪ

ಸ್ವಪಕ್ಷೀಯರ ಮುಸುಕಿನ ಗುದ್ದಾಟ| ಇಬ್ಬರು ಶಾಸಕರಿಂದ ದೂರು| ಸಭಾ ನಡಾವಳಿಗಳು ರದ್ದು

ಆರ್. ಹರಿಶಂಕರ್
Published 4 ಅಕ್ಟೋಬರ್ 2024, 6:36 IST
Last Updated 4 ಅಕ್ಟೋಬರ್ 2024, 6:36 IST
ಬಳ್ಳಾರಿ ಬೈಪಾಸ್‌ನಲ್ಲಿ ಬುಡಾ ಅಭಿವೃದ್ಧಿಪಡಿಸುತ್ತಿರುವ ಶ್ರೀ ಗುರು ಸಿದ್ದರಾಮೇಶ್ವರ ಬಡಾವಣೆ
ಬಳ್ಳಾರಿ ಬೈಪಾಸ್‌ನಲ್ಲಿ ಬುಡಾ ಅಭಿವೃದ್ಧಿಪಡಿಸುತ್ತಿರುವ ಶ್ರೀ ಗುರು ಸಿದ್ದರಾಮೇಶ್ವರ ಬಡಾವಣೆ   

ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ‌ಲ್ಲಿ (ಬುಡಾ) ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಪ್ರಾಧಿಕಾರದ ಎರಡು ಸಭಾ ನಡಾವಳಿಗಳನ್ನು ರದ್ದುಪಡಿಸಿರುವ ನಗರಾಭಿವೃದ್ಧಿ ಇಲಾಖೆಯು ಅಕ್ರಮದ ಪರಿಶೀಲನೆ ಆರಂಭಿಸಿದೆ.   

ಕಾಂಗ್ರೆಸ್‌ನವರೇ ಆದ ಜೆ.ಆಂಜನೇಯುಲು ಬುಡಾಕ್ಕೆ ಅಧ್ಯಕ್ಷರಾಗಿದ್ದು, ಅವರ ವಿರುದ್ಧ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ನಾರಾ ಭರತ್‌ ರೆಡ್ಡಿ ಮತ್ತು ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಈಚೆಗೆ ಸರ್ಕಾರಕ್ಕೆ ಲಿಖಿತವಾಗಿ ದೂರು ನೀಡಿದ್ದರು.

‘ಬುಡಾದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ನಮ್ಮನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ. ಆಂಜನೇಯಲು ಏಕಪಕ್ಷೀಯವಾಗಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ದೂರಿದ್ದರು ಎಂದು ಗೊತ್ತಾಗಿದೆ.  

ADVERTISEMENT

ಇಬ್ಬರೂ ಶಾಸಕರ  ದೂರಿನ ಹಿನ್ನೆಲೆಯಲ್ಲಿ ಸೆ.26ರಂದು ಇಲಾಖೆ ಅಧಿಕಾರಿಗಳಿಗೆ ಟಿಪ್ಪಣಿ ಬರೆದಿದ್ದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಸೂಕ್ತ ಕ್ರಮಕ್ಕೆ ಸೂಚಿಸಿದ್ದರು.

ಟಿಪ್ಪಣಿಯ ಮರುದಿನವೇ ‘ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ’ದ ಆಯುಕ್ತರಿಗೆ ಪತ್ರ ಬರೆದಿರುವ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ‘2024ರ ಮಾರ್ಚ್‌ 7 ಮತ್ತು ಜುಲೈ 8ರ ಬುಡಾ ಸಭಾ ನಡಾವಳಿಗಳಲ್ಲಿ ನಡೆದಿರುವ ಅಕ್ರಮಗಳನ್ನು ಪರಿಶೀಲಿಸುವಂತೆ ಮತ್ತು ನಡಾವಳಿಗಳನ್ನು ರದ್ದುಪಡಿಸುವ ಕುರಿತು ಪರಿಶೀಲಿಸುವಂತೆ, ಏಳು ದಿನಗಳ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ತಿಳಿಸಿದ್ದಾರೆ.  

ಇಲಾಖೆಯ ಸೂಚನೆ ಮೇರೆಗೆ ಕ್ರಮಕ್ಕೆ ಮುಂದಾಗಿರುವ ಧಾರವಾಡ ವಲಯದ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದ ಹೆಚ್ಚುವರಿ ನಿರ್ದೇಶಕರು ಬುಡಾದಲ್ಲಿ ಪರಿಶೀಲನೆ ಆರಂಭಿಸಿದ್ದಾರೆ.  

‘ಎರಡೂ ಸಭೆಗಳ ನಡಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಭಾರಿ ಪ್ರಮಾಣದ ದಾಖಲೆಗಳನ್ನು ಪರಾಮರ್ಶೆ ನಡೆಸುತ್ತಿರುವುದರಿಂದ ಸಮಯ ಹೆಚ್ಚು ಬೇಕಾಗುತ್ತದೆ’ ಎಂದು ಧಾರವಾಡ ವಲಯ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

‘ಪ್ರಾಧಿಕಾರ ಸ್ವಾಯತ್ತ ಸಂಸ್ಥೆ. ಅದರಲ್ಲಿ 18 ಮಂದಿ ಸದಸ್ಯರಿರುತ್ತಾರೆ. ಶಾಸಕರೂ ಅದರಲ್ಲಿ ಸದಸ್ಯರು. ಹೀಗಿದ್ದಾಗ ಅವರನ್ನು ಬಿಟ್ಟು ನಿರ್ಧಾರ ಕೈಗೊಳ್ಳಲು ಸಾಧ್ಯವಿರುವುದಿಲ್ಲ. ಇದರ ಹಿಂದೆ ಬೇರೆಯದ್ದೇ ಉದ್ದೇಶ ಅಡಗಿದೆ’ ಎಂದು ಬುಡಾ ಮಾಜಿ ಅಧ್ಯಕ್ಷರೊಬ್ಬರು ಮಾಹಿತಿ ನೀಡಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಬುಡಾ ಅಧ್ಯಕ್ಷ ತನಿಖೆಗೆ ಸಹಕರಿಸುವುದಾಗಿಯೂ, ದಾಖಲೆ ಪತ್ರಗಳನ್ನು ಅಧಿಕಾರಿಗಳಿಗೆ ನೀಡುವುದಾಗಿಯೂ ತಿಳಿಸಿದ್ದಾರೆ. ಇನ್ನು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ. 

ಮುಸುಕಿನ ಗುದ್ದಾಟ: ದಾಳಿಯಿಂದ ಬಯಲು 

ಕಳೆದ ಏಪ್ರಿಲ್‌ನಲ್ಲಿ ಪ್ರಾಧಿಕಾರದ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಆಯುಕ್ತರೂ ಸೇರಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬುಡಾ ಆಡಳಿತ, ವ್ಯವಹಾರಕ್ಕೆ ಸಂಬಂಧಿಸಿದಂತೆ ಅಂದಿನಿಂದಲೂ ಕಾಂಗ್ರೆಸ್‌ ನಾಯಕರ ನಡುವೆ ಮುಸುಕಿನ ಗುದ್ದಾಟಗಳು ನಡೆಯುತ್ತಲೇ ಇದ್ದವು. ಸದ್ಯ ಈ ಪತ್ರದ ಮೂಲಕ ಬಹಿರಂಗವಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.