ADVERTISEMENT

ಜಿಂದಾಲ್ 2 ಸಾವಿರ ಹಾಸಿಗೆ ಸೌಕರ್ಯ ಕಲ್ಪಿಸಿಕೊಡಲಿ: ಶಾಸಕ ಜಿ.ಸೋಮಶೇಖರ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 7:15 IST
Last Updated 8 ಆಗಸ್ಟ್ 2020, 7:15 IST
ಶಾಸಕ ಜಿ.ಸೋಮಶೇಖರ ರೆಡ್ಡಿ
ಶಾಸಕ ಜಿ.ಸೋಮಶೇಖರ ರೆಡ್ಡಿ   

ಬಳ್ಳಾರಿ: ಜಿಂದಾಲ್‌ನಿಂದಾಗಿಯೇ ಜಿಲ್ಲೆಯಲ್ಲಿ‌ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಜಿಂದಾಲ್ ಶೀಘ್ರ ಕನಿಷ್ಠ 2 ಸಾವಿರ ಹಾಸಿಗೆ ಸೌಕರ್ಯ‌ ಕಲ್ಪಿಸದಿದ್ದರೆ ಬಳ್ಳಾರಿಯಿಂದ ಪಾದಯಾತ್ರೆ ನಡೆಸಲಾಗುವುದು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದರು.

ಜಿಂದಾಲ್‌ನಲ್ಲಿ ದಿನವೂ ಎಷ್ಟು ಮಂದಿಗೆ ಸೋಂಕು ದೃಢಪಡುತ್ತಿದೆ. ಸೋಂಕಿತರ ಚಿಕಿತ್ಸೆಗೆ ಏನೇನು ವ್ಯವಸ್ಥೆ ಮಾಡಲಾಗುತ್ತಿದೆ ಎಂಬ ಕುರಿತೂ ಸರಿಯಾದ ಮಾಹಿತಿಗಳಿಲ್ಲ. ಜಿಂದಾಲ್ ತನ್ನ ಜವಾಬ್ದಾರಿ ಅರಿತು ಸ್ಪಂದಿಸಬೇಕು ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಿಲ್ಲೆಯಲ್ಲಿ ಐಸೊಲೇಷನ್‌ನಲ್ಲಿರುವ ಸೋಂಕಿತರಿಗೆ ಸೂಕ್ತ‌ ಸಲಹೆ, ಚಿಕಿತ್ಸೆ ಸಿಗುತ್ತಿಲ್ಲ. ತುರ್ತು ಇರುವವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲು ವೆಂಟಿಲೇಟರ್‌ಗಳ‌ ಕೊರತೆಯೂ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.

ADVERTISEMENT

ಎಲ್ಲರಿಗೂ ಚಿಕಿತ್ಸೆ ದೊರಕುವಂತಾಗಲು ಜಿಲ್ಲಾಡಳಿತ ಗಣಿ ಉದ್ಯಮಿಗಳ ಸಹಕಾರ ಪಡೆಯಬೇಕು. ಬೆಂಗಳೂರಿನಲ್ಲಿ ಹತ್ತು ಸಾವಿರ ಹಾಸಿಗೆ‌ ಸೌಕರ್ಯ ಕಲ್ಪಿಸಿದಂತೆ ಬಳ್ಳಾರಿಯಲ್ಲೂ‌ ಕಲ್ಪಿಸಬೇಕು. ಜ್ವರ, ಕೆಮ್ಮು, ನೆಗಡಿ ಔಷಧಿಗಳು ಎಲ್ಲ‌ ಕಡೆಯೂ‌ ಸುಲಭವಾಗಿ ಸಿಗುವಂತಾಗಬೇಕು. ಮನೆಗಳಿಗೆ ತೆರಳಿ ಸಿಬ್ಬಂದಿ ವಿತರಿಸುವ ಹೊತ್ತಿಗೆ ಪರಿಸ್ಥಿತಿ‌ ವಿಕೋಪಕ್ಕೆ‌ ಹೋಗಿರುತ್ತದೆ ಎಂದರು.

ಸೋಂಕಿನ‌ ಲಕ್ಷಣಗಳಿಲ್ಲದ ನಗರದ ಓಂಕಾರೇಶ್ವರಿ ಎಂಬ ಮಹಿಳೆ ಹೆಣ್ಣು ಮಗುವಿಗೆ ಜನ್ಮನೀಡಿದ ಬಳಿಕ ಜ್ವರಪೀಡಿತರಾಗಿದ್ದರು. ಅವರನ್ನು ವಿಮ್ಸ್‌ನಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಎಂದರೂ ಅಧಿಕಾರಿಗಳು ಶೀಘ್ರಗತಿಯಲ್ಲಿ ಸ್ಪಂದಿಸದೇ ಮಹಿಳೆ ಮೃತಪಟ್ಟರು. ವಿಮ್ಸ್ ಗೆ ದಾಖಲಾದರೆ ಸಾವು ಖಚಿತ ಎಂಬ ಅಭಿಪ್ರಾಯ ಜನರಲ್ಲಿ ದಟ್ಟವಾಗಿ ಮೂಡಿದೆ. ವಿಮ್ಸ್‌ನಲ್ಲಿ ಹೆಚ್ಚಿನ ಸುಧಾರಣೆಗಳಾಗಬೇಕು ಎಂದು ಆಗ್ರಹಿಸಿದರು.

ವಿಮ್ಸ್‌ನಲ್ಲಿ ನುರಿತ ವೈದ್ಯರು ಸೋಂಕಿತರ‌ ಬಳಿಗೆ‌ ಹೋಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರುಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ 50 ಹಾಸಿಗೆ‌ಗಳನ್ನು ಮೀಸಲಿಡಬೇಕು. ಹದಿನೈದು ದಿನ ಜಿಲ್ಲೆಯನ್ನು ಲಾಕ್‌ಡೌನ್ ಮಾಡಬೇಕು.‌ ಆ ಅವಧಿಯಲ್ಲಿ ಬಡವರಿಗೆ ದಿನಸಿ ಕೊಡಬೇಕು. ಈ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆಯುವೆ ಎಂದರು.

'ಜಿಲ್ಲೆಯಲ್ಲಿ ಸೋಂಕಿತರಿಗಾಗಿ ಹಾಸಿಗೆ ಎಷ್ಟು ಖಾಲಿ‌ ಇದೆ ಎಂಬ ಮಾಹಿತಿ ಜನರಿಗೆ ಇಲ್ಲ. ವಿವಿಧ ಕಾಯಿಲೆಗಳಿರುವವರನ್ನು ಕೋವಿಡ್ ವರದಿ ತನ್ನಿ ಎಂದು ಸುತ್ತಾಡಿಸುವ ಪರಿಪಾಠ ನಿಲ್ಲಬೇಕು. ಅವರಿಗೆ ತಕ್ಷಣ ಅಗತ್ಯವಿರುವ ಚಿಕಿತ್ಸೆ, ಔಷಧ ಕೊಡಬೇಕು ಎಂದು ಆಗ್ರಹಿಸಿದರು.

'ವೆಂಟಿಲೇಟರ್ ಸೌಕರ್ಯ ಇರುವ ಎರಡು ಆಂಬುಲೆನ್ಸ್ ಜಿಲ್ಲೆಗೆ ಬರಲಿದೆ. ಜನಸಾಮಾನ್ಯರ ಆರೋಗ್ಯ ಸಮಸ್ಯೆಗಳ ಕುರಿತು ಗಮನ ಸೆಳೆಯಲು ಅಧಿಕಾರಿಗಳು ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಸದಾ ಕಾಲ ವಿಡಿಯೊ ಸಂವಾದದಲ್ಲಿಯೇ ಇದ್ದರೆ ಯಾರಿಗೆ ಪ್ರಯೋಜನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ದಮ್ಮೂರು ಶೇಖರ್, ವೀರಶೇಖರ ರೆಡ್ಡಿ, ಮಲ್ಲನಗೌಡ, ಶ್ರೀನಿವಾಸ ಮೋತ್ಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.