ADVERTISEMENT

ಜಿಂದಾಲ್‌ಗೆ‌ ಭೂಮಿ ಮಾರಾಟ | ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ: ಶಾಸಕ ಕೊಂಡಯ್ಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 6:05 IST
Last Updated 3 ಜೂನ್ 2019, 6:05 IST
–ಸಂಗ್ರಹ ಚಿತ್ರ
–ಸಂಗ್ರಹ ಚಿತ್ರ   

ಬಳ್ಳಾರಿ: ಲೀಸ್ ಕಂ‌ಸೇಲ್ ಅವಧಿ ಮುಗಿದ ‌ಬಳಿಕ‌ ಅದಿರು ಭೂಮಿಯನ್ನು ಜಿಂದಾಲ್‌ಗೆ ಸರ್ಕಾರಮಾರಾಟ ಮಾಡಲು‌ ನಿರ್ಧರಿಸಿರುವುದು ಸರಿಯಾಗಿಯೇ ಇದೆ. ಮತ್ತು ಆ ನಿರ್ಧಾರ ವನ್ನು ಸ್ವಾಗತಿಸುತ್ತೇನೆ' ಎಂದು ಶಾಸಕ ಕೆ.ಸಿ.ಕೊಂಡಯ್ಯ ತಿಳಿಸಿದರು.

ನಗರದಲ್ಲಿ ಸೋಮವಾರ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, '2005ರಲ್ಲಿ 2000.58 ಎಕರೆ ಭೂಮಿಯನ್ನು ಆರು ವರ್ಷದ ಅವಧಿಗೆ‌ ನೀಡಲಾಗಿತ್ತು. 2007ರಲ್ಲಿ 1666.67 ಎಕರೆ ಭೂಮಿಯನ್ನು ಹತ್ತು‌ವರ್ಷದ ಅವಧಿಗೆ‌ ನೀಡಲಾಗಿತ್ತು. ಈ ಒಪ್ಪಂದಗಳನ್ನು ಸೇಲ್ ಡೀಡ್ - ಮಾರಾಟ ಒಪ್ಪಂದವಾಗಿ- ಪರಿವರ್ತಿಸುವಂತೆ ಜೆಎಸ್‌ಡಬ್ಲ್ಯೂ ಸ್ಟೀಲ್ ಕೋರಿತ್ತು. ನಿಯಮಗಳ ಪ್ರಕಾರವೇ ಸರ್ಕಾರ ಈ ‌ಜಮೀನುಗಳನ್ನು ಮಾರಲು ಮುಂದಾಗಿದೆ' ಎಂದರು.

ಗುತ್ತಿಗೆ ಆಧಾರದಲ್ಲಿ ಪಡೆದ ಜಮೀನನ್ನು ಘಟಕವು ಷರತ್ತುಗಳ ಅನ್ವಯವೇ ಬಳಸಿದೆ. ಒಟ್ಟಾರೆ 62,025 ಕೋಟಿ ರೂಪಾಯಿ ಬಂಡವಾಳ ‌ಹೂಡಿದೆ‌. 1997ರಿಂದ 2008ರವರೆಗೆ 86,561 ಕೋಟಿ ರುಪಾಯಿ ತೆರಿಗೆ ಪಾವತಿಸಿದೆ' ಎಂದರು.

ADVERTISEMENT

'ಘಟಕವು 25 ಸಾವಿರ ಮಂದಿಗೆ ನೇರ ಉದ್ಯೋಗ ನೀಡಿದೆ. ಒಟ್ಟು 2 ಲಕ್ಷ ಉದ್ಯೋಗಗಳ ಸೃಷ್ಟಿಯಾಗಿದೆ. ಸರೋಜಿನಿ ಮಹಿಷಿ‌ ವರದಿಯಂತೆ ಕನ್ನಡಿಗರಿಗೆ ಉದ್ಯೋಗಗಳನ್ನೂ ನೀಡಿದೆ' ಎಂದು ಹೇಳಿದರು.

'ಜಮೀನು ಮಾರಾಟದ‌ ವಿರುದ್ಧ ಮಾಜಿ ಸಚಿವ ಎಚ್.ಕೆ.ಪಾಟೀಲ ಅವರ ಹೇಳಿಕೆ ಸರಿಯಲ್ಲ. ಅವರಿಗೆ ಯಾವ ವಿಷಯವೂ ಗೊತ್ತಿಲ್ಲ' ಎಂದರು.

'ಕೈಗಾರಿಕೆಗಳ‌ ಸ್ಥಾಪನೆಯಿಂದ ಸ್ಥಳೀಯರ ಬದುಕು ಉತ್ತಮಗೊಳ್ಳುತ್ತದೆ. ಉಕ್ಕು ಉತ್ಪಾದನೆ ಘಟಕವನ್ನು ಸ್ಥಾಪಿಸಲಿ ಸರ್ಕಾರಕ್ಕೆ ಸಾಧ್ಯವಾಗದಿದ್ದಾಗ ಜಿಂದಾಲ್ ಮುಂದೆ ಬಂತು ಎಂಬುದನ್ನು ಮರೆಯುವಂತಿಲ್ಲ. ಇನ್ನೂ ಏನಾದರೂ ಸ್ಪಷ್ಟನೆ ಗಳು ಬೇಕಿದ್ದರೆ ಘಟಕದ ‌ಪ್ರಮುಖರಿಗೆ ಹೇಳಿ ಸುದ್ದಿಗೋಷ್ಠಿ ಏರ್ಪಡಿಸುತ್ತೇನೆ' ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.