ADVERTISEMENT

ಹಂಪಿ ಆರ್ಟ್ಸ್‌ ಲ್ಯಾಬ್ಸ್‌ನಲ್ಲಿ ‘ಕೆಂಪು ವಸ್ತ್ರ’ ಪ್ರದರ್ಶನ

50 ದೇಶಗಳ ಕಲಾವಿದರ ಕಥನ ಅನಾವರಣ, ಜೆಎಸ್‌ಡಬ್ಲ್ಯೂ ಪ್ರತಿಷ್ಠಾನದ ವಿಶೇಷ ಉಪಕ್ರಮ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 0:01 IST
Last Updated 17 ನವೆಂಬರ್ 2024, 0:01 IST
‘ವಿಜಯನಗರ ಹಂಪಿ ಆರ್ಟ್ಸ್‌ ಲ್ಯಾಬ್ಸ್‌’ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿರುವ ‘ರೆಡ್‌ ಡ್ರೆಸ್‌ ಪ್ರಾಜೆಕ್ಟ್‌’
‘ವಿಜಯನಗರ ಹಂಪಿ ಆರ್ಟ್ಸ್‌ ಲ್ಯಾಬ್ಸ್‌’ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿರುವ ‘ರೆಡ್‌ ಡ್ರೆಸ್‌ ಪ್ರಾಜೆಕ್ಟ್‌’   

ಬಳ್ಳಾರಿ: ಜಾಗತಿಕ ಸಹಯೋಗದ, ಪ್ರಶಸ್ತಿಗಳಿಗೆ ಪಾತ್ರವಾಗಿರುವ ‘ಕೆಂಪು ವಸ್ತ್ರ ಯೋಜನೆ (ರೆಡ್‌ ಡ್ರೆಸ್‌ ಪ್ರಾಜೆಕ್ಟ್‌) ಅನ್ನು ಜೆಎಸ್‌ಡಬ್ಲ್ಯೂ ಪ್ರತಿಷ್ಠಾನ ಇದೇ ಮೊದಲ ಬಾರಿಗೆ ಭಾರತಕ್ಕೆ ತಂದಿದೆ. 50 ದೇಶಗಳ 367ಕ್ಕೂ ಹೆಚ್ಚು ಮಹಿಳೆಯರ ಕಸೂತಿ ಕಲೆ ಮೇಳೈಸಿರುವ ಈ ವಸ್ತ್ರವನ್ನು ಜೆಎಸ್‌ಡಬ್ಲ್ಯೂನ ‘ವಿಜಯನಗರ ಹಂಪಿ ಆರ್ಟ್ಸ್‌ ಲ್ಯಾಬ್ಸ್‌’ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. 

ಜೆಎಸ್‌ಡ್ಲ್ಯೂ ಪ್ರತಿಷ್ಠಾನದ ಅಧ್ಯಕ್ಷೆ ಸಂಗೀತಾ ಜಿಂದಾಲ್ ಅವರಿಂದ ಸಂಗ್ರಹಿಸಲ್ಪಟ್ಟ, ‘ದ ನಾಟ್ಸ್ ದಟ್ ಬೈಂಡ್ (ಗಂಟುಗಳು ಮೂಲಕ ಕಟ್ಟಿದ ಬಂಧನ)’ ಕಲಾಕೃತಿಯನ್ನೂ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. 

ಬ್ರಿಟಿಷ್ ಕಲಾವಿದೆ ಕ್ರಿಸ್ಟ್ರಿ ಮೆಕ್ಲೋಡ್‌ ಅವರ ಕನಸಿನ ಕೂಸಾಗಿರುವ ಈ ‘ರೆಡ್ ಡ್ರೆಸ್ ಪ್ರಾಜೆಕ್ಟ್’ ಹಂಪಿ ಆರ್ಟ್ ಲ್ಯಾಬ್ಸ್‌ನಲ್ಲಿ ಇದೇ 22ರ ವರೆಗೆ ಪ್ರದರ್ಶನಕ್ಕೆ ಇರಲಿದೆ. 2009 ರಲ್ಲಿ ಪ್ರಾರಂಭವಾದ ‘ದಿ ರೆಡ್ ಡ್ರೆಸ್ ಯೋಜನೆ’ಯಲ್ಲಿ 50ಕ್ಕೂ ಹೆಚ್ಚು ದೇಶಗಳ 367 ಮಹಿಳೆಯರು, 11 ಮಂದಿ ಪುರುಷರು ಪಾಲ್ಗೊಂಡಿದ್ದಾರೆ ಎಂದು ಜೆಎಸ್‌ಡಬ್ಲ್ಯೂ ಪ್ರತಿಷ್ಠಾನ ಹೇಳಿದೆ. 

ADVERTISEMENT

ಈ ವೈವಿಧ್ಯಮಯವಾದ ಉಡುಪು ವಿವಿಧ ದೇಶಗಳ ಕಲಾವಿದರ ಜೀವನ ಶೈಲಿ ಮತ್ತು ಅವರ ಬದುಕಿನ ಕಥೆಗಳನ್ನು ಪ್ರತಿನಿಧಿಸುತ್ತದೆ. ಅದರೊಂದಿಗೆ, ಸಂಗೀತಾ ಜಿಂದಾಲ್ ಅವರ  ‘ದ ನಾಟ್ಸ್ ದಟ್ ಬೈಂಡ್’ ಕಲಾಕೃತಿಯು ಅವರ ಸ್ವಂತ ಸಂಗ್ರಹ ವಿಶೇಷ ವಸ್ತುಗಳನ್ನು ಒಳಗೊಂಡಿದೆ. ಅವುಗಳು, ಸಮುದಾಯ ಮತ್ತು ಪರಂಪರೆಗಳ ಇತಿಹಾಸವನ್ನು ಪ್ರತಿಬಿಂಬಿಸುತ್ತಿವೆ’ ಎಂದು ಪ್ರತಿಷ್ಠಾನ ತಿಳಿಸಿದೆ. 

ಈ ಪ್ರದರ್ಶನದ ಕುರಿತು ಮಾತನಾಡಿದ ಸಂಗೀತಾ ಜಿಂದಾಲ್, ‘ದ ರೆಡ್ ಡ್ರೆಸ್ ಪ್ರಾಜೆಕ್ಟ್’ ಕಲೆ ಮತ್ತು ಸಮುದಾಯಗಳ ಅಭಿವ್ಯಕ್ತಿಯನ್ನು ಮತ್ತು ಅವುಗಳ ಸಂದೇಶವನ್ನು ಪ್ರತಿಬಿಂಬಿಸುತ್ತದೆ. ಹಲವು ಕಾರಣಗಳಿಂದಾಗಿ ಇದು ನನ್ನ ಮನಸ್ಸಿಗೆ ತುಂಬ ಹತ್ತಿರವಾದ ಯೋಜನೆ. ಕಲೆಯನ್ನು ಪ್ರಚಾರಪಡಿಸುವುದು ಮತ್ತು ಮಹಿಳೆಯರ ಸಶಕ್ತೀಕರಣದ ಬಗ್ಗೆ ಈ ಯೋಜನೆ ಮಾತನಾಡುತ್ತದೆ’ ಎಂದರು. 

ಜಗತ್ತಿನ ಹಲವು ಪ್ರಮುಖ ಸಂಗ್ರಹಾಲಯಗಳಲ್ಲಿ ‘ದ ರೆಡ್ ಡ್ರೆಸ್ ಪ್ರಾಜೆಕ್ಟ್‘ ಪ್ರದರ್ಶನಗೊಂಡಿದೆ. ದಕ್ಷಿಣ ಭಾರತದಿಂದ ಆರಂಭವಾದ ಈ ಯೋಜನೆ ಪ್ರಪಂಚ ಪರ್ಯಾಟನೆ ಮಾಡಿ ಮರಳಿ ಇಲ್ಲಿಗೇ ಬಂದಿದೆ. ನನಗೆ ಇದರ ಬಗ್ಗೆ ಹೆಮ್ಮೆ ಇದೆ. ಮರಳಿ ನಮ್ಮ ಮಣ್ಣಿಗೇ ಬರುವಾಗ ಇದು ಕೇವಲ ಕಸೂತಿ ಕಲೆಯನ್ನು ಮಾತ್ರ ಪ್ರದರ್ಶಿಸದೇ, ಜಗತ್ತಿನ ನಾನಾ ಭಾಗಗಳ ಕಲಾವಿದರ ಬದುಕಿನ ಕಥೆಗಳನ್ನು, ಅವರ ಅನುಭವ ಮತ್ತು ಭಾವನೆಗಳನ್ನು ಹೊತ್ತು ತಂದಿದೆ’ ಎಂದು ತಿಳಿಸಿದರು. 

ಬ್ರಿಟಿಷ್‌ ಕಲಾವಿದೆ ಕ್ರಿಸ್ಟ್ರಿ ಮೆಕ್ಲೋಡ್‌ ಮಾತನಾಡಿ, ಭಾರತದಲ್ಲಿ ನಾನು ಕೈಗೊಂಡ ಪ್ರವಾಸವೇ  ‘ದ ರೆಡ್ ಡ್ರೆಸ್ ಪ್ರಾಜೆಕ್ಟ್’ಗೆ ಮುಖ್ಯ ಪ್ರೇರಣೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.