ADVERTISEMENT

ಅವಕಾಶ ವಂಚಿತರ ಮಠವಾಗಿ ಬೆಳೆಯಲಿ: ಸಿದ್ದರಾಮಯ್ಯ

ಮೈಲಾರದಲ್ಲಿ ಕಾಗಿನೆಲೆ ಶಾಖಾ ಮಠ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಮೇ 2019, 14:34 IST
Last Updated 8 ಮೇ 2019, 14:34 IST
ಹೂವಿನಹಡಗಲಿ ತಾಲ್ಲೂಕು ಮೈಲಾರದಲ್ಲಿ ಕಾಗಿನೆಲೆ ಶಾಖಾ ಮಠವನ್ನು ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಡಮರುಗ ನುಡಿಸಿ ಚಾಲನೆ ಉದ್ಘಾಟಿಸಿದರು
ಹೂವಿನಹಡಗಲಿ ತಾಲ್ಲೂಕು ಮೈಲಾರದಲ್ಲಿ ಕಾಗಿನೆಲೆ ಶಾಖಾ ಮಠವನ್ನು ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಡಮರುಗ ನುಡಿಸಿ ಚಾಲನೆ ಉದ್ಘಾಟಿಸಿದರು   

ಹೂವಿನಹಡಗಲಿ:‘ಕಾಗಿನೆಲೆ ಪೀಠವನ್ನು ಬರೀ ಕುರುಬ ಸಮುದಾಯಕ್ಕಾಗಿ ಕಟ್ಟಿಲ್ಲ. ಶೋಷಿತ ಸಮುದಾಯಗಳ ಹಾಗೂ ಅವಕಾಶವಂಚಿತ ಜನರ ಮಠ ಆಗಬೇಕು ಎಂಬ ಮಹಾತ್ವಾಕಾಂಕ್ಷೆಯಿಂದ ಪೀಠ ಸ್ಥಾಪನೆ ಮಾಡಲಾಗಿದೆ’ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಬುಧವಾರ ಕಾಗಿನೆಲೆ ಶಾಖಾ ಮಠ ‘ಏಳುಕೋಟಿ ಭಕ್ತರ ಕುಟೀರ’ ಹಾಗೂ ದಾನಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಶೋಷಿತರು, ಹಿಂದುಳಿದವರು ಹಣೆಬರಹ ನಂಬಿ ಬದುಕುವ ಬದಲು ಶೈಕ್ಷಣಿಕ, ಸಾಮಾಜಿಕವಾಗಿ ಜಾಗೃತಗೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ತಿಳಿಸಿದರು.

ADVERTISEMENT

‘ಯಾರೂ ನಿರ್ದಿಷ್ಟ ಜಾತಿಗೆ ಅರ್ಜಿ ಹಾಕಿ ಹುಟ್ಟಿ ಬರಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆ ಬಲವಾಗಿ ಬೇರೂರಿರುವುದರಿಂದ ಸಮಾಜದಲ್ಲಿ ಮೇಲು, ಕೀಳು, ಅಸಮಾನತೆ ಹೆಚ್ಚಾಗಿದೆ. ಎಲ್ಲರಿಗೂ ಅಧಿಕಾರದಲ್ಲಿ ಪಾಲು, ಶಿಕ್ಷಣ, ಆರ್ಥಿಕ ಸಮಾನತೆ ಸಿಗುವವರೆಗೂ ಜಾತಿ ವ್ಯವಸ್ಥೆ ಜೀವಂತವಾಗಿ ಇರಲಿದೆ’ ಎಂದರು.

‘ಮೈಲಾರದಲ್ಲಿ ಕಾಗಿನೆಲೆ ಶಾಖಾ ಮಠದಿಂದ ತೆರೆಯಲು ಉದ್ದೇಶಿಸಿರುವ ವಸತಿ ಶಾಲೆಗೆ ಸರ್ಕಾರದಿಂದ ನೆರವು ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ದಾನಿಗಳ ನಾಮಫಲಕ ಅನಾವರಣಗೊಳಿಸಿದ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ‘ಭೀಕರ ಬರಗಾಲದ ಸಂದರ್ಭದಲ್ಲೂ ಭಕ್ತರ ಕಾಣಿಕೆಯ ನೆರವಿನಲ್ಲಿ ಮಠ ನಿರ್ಮಾಣವಾಗಿರುವುದು ಪವಾಡದಂತೆ ಗೋಚರಿಸಿದೆ. ಸಮಾಜದ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿರುವ ಕಾಗಿನೆಲೆ ಸ್ವಾಮೀಜಿಯ ಕೈಂಕರ್ಯದಲ್ಲಿ ಕುರುಬ ಸಮುದಾಯ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗಿದೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ‘ಕಾಗಿನೆಲೆಯ ಮೂಲ ಪೀಠವನ್ನು ಮೈಲಾರದಲ್ಲೇ ಸ್ಥಾಪಿಸುವ ಯೋಚನೆ ಹಿರಿಯರಿಗೆ ಇತ್ತು. ಪೀಠದ ರಜತ ಮಹೋತ್ಸವ ಆಚರಣೆಯ ಬಳಿಕ ಶಾಖಾ ಮಠದ ರೂಪದಲ್ಲಿ ಆ ಸಂಕಲ್ಪ ಈಡೇರಿದೆ’ ಎಂದು ಹೇಳಿದರು.

‘ಧರ್ಮ ಇದ್ದಲ್ಲಿ ಅಧರ್ಮ, ಸತ್ಯ ಇದ್ದಲ್ಲಿ ಅಸತ್ಯ ಇರುವುದು ಸಾಮಾನ್ಯ. ಇಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಮಠ ಕಟ್ಟಿದ್ದೇವೆ. ಸಂಘರ್ಷದ ಬದಲು ಆಂತರಿಕ ಪ್ರೀತಿ ಬೆಳೆಸಿಕೊಂಡಾಗ ಮನಸ್ಸುಗಳನ್ನು ಕಟ್ಟಲು ಸಾಧ್ಯ. ಇಲ್ಲಿ ಶಾಖಾ ಮಠ ನಿರ್ಮಾಣಕ್ಕೆ ಕುರುಬ ಸಮುದಾಯದ ಜತೆಗೆ ಅನ್ಯ ಜಾತಿಯವರು ನೆರವು ನೀಡುವ ಮೂಲಕ ‘ಕುಲ ಕುಲವೆಂದು ಹೊಡೆದಾಡದಿರಿ’ ಎನ್ನುವ ಕನಕದಾಸರ ಕೀರ್ತನೆಗೆ ಬೆಲೆ ಸಿಕ್ಕಿದೆ ಎಂದು ಹೇಳಿದರು.

ಕಾಗಿನೆಲೆ ಶಾಖಾಮಠಗಳ ಈಶ್ವರಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಸಿದ್ದರಾಮನಂದಪುರಿ ಸ್ವಾಮೀಜಿ,ಸಂಸದ ವಿ.ಎಸ್.ಉಗ್ರಪ್ಪ, ಶಾಸಕರಾದ ಭೀಮಾ ನಾಯ್ಕ, ರಾಮಪ್ಪ, ಪ್ರಸನ್ನಕುಮಾರ್,ಹಾವೇರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಕೆ.ಕರಿಯಣ್ಣ,ಕಾರಣಿಕದ ರಾಮಣ್ಣ, ಮುಖಂಡರಾದಗುರುವಿನ ಕೊಟ್ರಯ್ಯ, ವಿರೂಪಾಕ್ಷಪ್ಪ, ಸೋಮಶೇಖರ್, ಬಸವರಾಜ ಶಿವಣ್ಣನವರ, ಬಸವರಾಜ ಹಿಟ್ನಾಳ್, ಬಿ.ಹನುಮಂತಪ್ಪ, ಎಂ.ಪರಮೇಶ್ವರಪ್ಪ, ಗಾಜಿಗೌಡ್ರು, ಜೆ.ಕೃಷ್ಣ ಇದ್ದರು. ಶಾಖಾ ಮಠ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.