ADVERTISEMENT

ಬಳ್ಳಾರಿಗೆ ‘ಕಲ್ಯಾಣ ಸಂಪುಟ’ ನಿರಾಸೆ

ಸಂಪುಟ ಸಭೆ ನಿರ್ಣಯದಲ್ಲಿ ಕಲಬುರಗಿ, ಬೀದರ್‌ ಜಿಲ್ಲೆಗೆ ಸಿಂಹಪಾಲು

ಆರ್. ಹರಿಶಂಕರ್
Published 19 ಸೆಪ್ಟೆಂಬರ್ 2024, 5:04 IST
Last Updated 19 ಸೆಪ್ಟೆಂಬರ್ 2024, 5:04 IST
ಪನ್ನ ರಾಜ್‌
ಪನ್ನ ರಾಜ್‌   

ಬಳ್ಳಾರಿ: ಕಲ್ಯಾಣ ಕರ್ನಾಟಕದ ಕಲ್ಯಾಣದ ನಿರೀಕ್ಷೆಯ ಭಾರ ಹೊತ್ತು ಕಲಬುರಗಿಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯು ಬಳ್ಳಾರಿ ಜಿಲ್ಲೆಗೆ ಯಾವುದೇ ಮಹತ್ವದ ಯೋಜನೆಯಾಗಲಿ, ಕಾರ್ಯಕ್ರಮಗಳನ್ನು ನೀಡುವಲ್ಲಿ ವಿಫಲವಾಗಿದೆ. 

ಸಚಿವ ಸಂಪುಟ ಸಭೆಗೆ ಬಳ್ಳಾರಿ ಜಿಲ್ಲೆಯಿಂದ ಹಲವು ಮಹತ್ವದ ಪ್ರಸ್ತಾವಗಳು ಸಲ್ಲಿಕೆಯಾಗಿದ್ದವು. ಇದೇ ಕಾಂಗ್ರೆಸ್‌ ಪಕ್ಷದ ವರಿಷ್ಠ ನಾಯಕ ಭರವಸೆ ನೀಡಿದ್ದ ಜೀನ್ಸ್‌ ಪಾರ್ಕ್‌ ನಿರ್ಮಾಣ, ಬಳ್ಳಾರಿಗೆ ಸ್ವಂತದ ವಿಮಾನ ನಿಲ್ದಾಣ, ಒಣ ಮೆಣಸಿನಕಾಯಿ ಮಾರುಕಟ್ಟೆ, ಕಂಪ್ಲಿ–ಕುರುಗೋಡು ತಾಲೂಕುಗಳಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಸರ್ಕಾರಕ್ಕೆ ತಿಳಿಸಿತ್ತು. ಇದರ ಜತೆಗೆ ಇಲಾಖೆಗಳೂ ಸರ್ಕಾರಕ್ಕೆ ಪ್ರತ್ಯೇಕವಾಗಿ ಪ್ರಸ್ತಾವ ಸಲ್ಲಿಸಿದ್ದವು. 

ಬಳ್ಳಾರಿ ಜಿಲ್ಲೆಯಲ್ಲಿ ದಶಕಗಳಿಂದಲೂ ಬಾಕಿ ಉಳಿದಿರುವ ಕಾಮಗಾರಿಗಳು, ಯೋಜನೆಗಳು, ಜಿಲ್ಲೆಗೆ ಏನು ಅಗತ್ಯವಿದೆ ಎಂಬುದರ ಬಗ್ಗೆ ಮಾಧ್ಯಮಗಳು ಸರಣಿ ವರದಿಯನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದವು.

ADVERTISEMENT

ಸಂಪುಟದಲ್ಲಿ ಸಿಕ್ಕಿದ್ದಿಷ್ಟು: 

ಬಳ್ಳಾರಿ ಕೋಟೆಗೆ ಸಾರ್ವಜನಿಕ–ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ರೋಪ್‌-ವೇ ಅಭಿವೃದ್ಧಿಪಡಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಜಿಲ್ಲೆಯಲ್ಲಿ ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲು ಹಾಗೂ ಬಳ್ಳಾರಿಯ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ₹10.07 ಕೋಟಿ ವೆಚ್ಚದಲ್ಲಿ ಟೆಸ್ಲಾ ಸಂಸ್ಥೆಯ ಎಂಆರ್‌ಐ 1.5 ಯಂತ್ರ ನೀಡಲು ನಿರ್ಧರಿಸಿದೆ. ಆದರೆ ಬೀದರ್‌, ಕಲಬುರಗಿ ಜಿಲ್ಲೆಗಳಿಗೆ ಹೆಚ್ಚಿನ ಸವಲತ್ತು ನೀಡಲಾಗಿದೆ.

‘ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಸೇರಲು ಅಖಂಡ ಬಳ್ಳಾರಿ ಜಿಲ್ಲೆ ಹೋರಾಟ ಮಾಡಬೇಕಾಯಿತು. ಹಾಗೆಯೇ ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಯೋಜನೆಗಳನ್ನು ಪಡೆಯುವಲ್ಲಿಯೂ ತಾರತಮ್ಯ ಎದುರಿಸುತ್ತಿದೆ. ಈ ಭಾಗಕ್ಕೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಒಂದು ಹೊರೆ ಎಂಬಂತೆ ಜನಪ್ರತಿನಿಧಿಗಳು ವರ್ತಿಸುತ್ತಾರೆ’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು. 

‘ಬಳ್ಳಾರಿ ಜಿಲ್ಲೆಗೆ ಬೇಕಾದ್ದನ್ನು ಪ್ರತಿಪಾದಿಸಿ ಪಡೆದುಕೊಂಡು ಬರುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸುವುದಿಲ್ಲ’ ಎಂದು ಮತ್ತೊಬ್ಬ ಅಧಿಕಾರಿ ಬೇಸರ ವ್ಯಕ್ತಪಡಿಸಿದರು.

ಜಮೀರ್ ಅಹಮದ್ ಖಾನ್
ಕಲ್ಯಾಣ ಕರ್ನಾಟಕ ಮತ್ತು ಇಡೀ ರಾಜ್ಯಕ್ಕಾಗಿ ಸರ್ಕಾರ ಹಲವು ನಿರ್ಣಯಗಳನ್ನು ಸರ್ಕಾರ ಘೋಷಿಸಿದೆ. ಅದರ ಲಾಭ ಬಳ್ಳಾರಿಗೂ ಆಗಲಿದೆ
ಬಿ. ಝಡ್‌. ಜಮೀರ್‌ ಅಹಮದ್‌ ಖಾನ್‌ ಜಿಲ್ಲಾ ಉಸ್ತುವಾರಿ ಸಚಿವ
‘ಕಲ್ಯಾಣ’ ಎರಡು ಭಾಗ ಮಾಡಿ
ಬಳ್ಳಾರಿ ಜಿಲ್ಲೆ ಹೊಸ ತಾಲ್ಲೂಕುಗಳಿಗೆ ಮೂಲಸೌಕರ್ಯವಾದ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಬಳ್ಳಾರಿಯಿಂದ ಕಲಬುರಗಿ ರಸ್ತೆ ನನೆಗುದಿಗೆ ಬಿದ್ದಿದೆ. ಕೌಶಲಾಭಿವೃದ್ಧಿಗೆ ಅನುದಾನ ಕೊಡದಿರುವುದು ದುರಂತ. ಕಲಬುರಗಿ ಜಿಲ್ಲೆಗೆ ಸಿಂಹಪಾಲು ಕೊಡಲಾಗಿದೆ. ವಸತಿಯಲ್ಲಿ ಬಳ್ಳಾರಿಗೆ ಸೊನ್ನೆ. ಹೆಚ್ಚು ಉದ್ಯೋಗ ಸೃಷ್ಟಿಸಬಲ್ಲ ಎಂಎಸ್‌ಎಂಇ ಕ್ಷೇತ್ರಕ್ಕೆ ಬಿಡಿಗಾಸು ನೀಡಿದಿರುವುದು ದುಃಖಕರ. ಕಂದಾಯ ಇಲಾಖೆಯಲ್ಲೂ ಹೊಸ ತಾಲ್ಲೂಕುಗಳಿಗೆ ಸಹಾಯಹಸ್ತ ಇಲ್ಲ. ಕಲ್ಯಾಣ ಕರ್ನಾಟಕದ ಪರಿಕಲ್ಪನೆಯಲ್ಲಿ ಬೀದರ್‌ ಕಲಬುರಗಿ ಜಿಲ್ಲೆಗಳು ಹೆಚ್ಚಿನ ಲಾಭ ಪಡೆಯುತ್ತಿವೆ. ಹೀಗಾಗಿ ಕಲ್ಯಾಣ ಕರ್ನಾಟಕವನ್ನು ಎರಡು ಭಾಗವಾಗಿ ಮಾಡಿ ಬಳ್ಳಾರಿ ರಾಯಚೂರು ವಿಜಯನಗರ ಕೊಪ್ಪಳವನ್ನು ಪ್ರತ್ಯೇಕ ವಿಭಾಗವಾಗಿ ಮಾಡುವುದು ಲೇಸು-ಪನ್ನರಾಜ್‌ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.