ಕಂಪ್ಲಿ: ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಪುರಸಭೆಯವರು ಲಕ್ಷ ವೆಚ್ಚ ಮಾಡಿ ಅಭಿವೃದ್ಧಿಪಡಿಸಿದ ಉದ್ಯಾನಗಳು ನಿರ್ವಹಣೆ ಇಲ್ಲದೆ ಸೊರಗಿದ್ದರೆ, ಇನ್ನು ಕೆಲ ಕಡೆ ಉದ್ಯಾನ ಸ್ಥಳ ಒತ್ತುವರಿ ತಡೆಯಲು ನಿರ್ಮಿಸಿದ ಕಾಂಪೌಂಡ್ ಒಳಗೆ ಹಸಿರಲ್ಲದೆ ಕಳೆಗುಂದಿವೆ.
ಇಲ್ಲಿಯ ವಿವಿಧ ವಾರ್ಡ್‍ಗಳಲ್ಲಿ ಬಡಾವಣೆ ರಚಿಸುವ ಸಂದರ್ಭದಲ್ಲಿ ಉದ್ಯಾನಕ್ಕಾಗಿ ಸುಮಾರು 33 ಸ್ಥಳಗಳನ್ನು ಕಾಯ್ದಿರಿಸಿದೆ. ಆದರೆ, ಅದರಲ್ಲಿ ಬೆರಳೆಣಿಕೆಯಷ್ಟು ಅಭಿವೃದ್ಧಿ ಮಾಡಲಾಗಿತ್ತು. ಅವು ಇಂದು ಹೆಸರಿಗೆ ಉದ್ಯಾನ, ಒಳೆಗೆಲ್ಲ ಅಧ್ವಾನ ಎನ್ನುವಂತಾಗಿದ್ದು, ಮತ್ತೆ ಕಾಯಕಲ್ಪಕ್ಕಾಗಿ ಎದುರು ನೋಡುತ್ತಿವೆ.
ಪಟ್ಟಣದ ಮಾರುತಿನಗರ ಬಲಭಾಗದಲ್ಲಿರುವ ಉದ್ಯಾನ, 16ನೇ ವಾರ್ಡ್‍ನಲ್ಲಿರುವ ಉದ್ಯಾನದಲ್ಲಿ ಮಕ್ಕಳ ಆಟಿಕೆ ಸಾಮಾನುಗಳು ತುಕ್ಕು ಹಿಡಿದಿವೆ. ಇನ್ನು ಕೊಟ್ಟಾಲು ರಾಜ್ಯ ಹೆದ್ದಾರಿ ಪಕ್ಕದ ಸಾಯಿಬಾಬ ಉದ್ಯಾನದಲ್ಲಿ ಸುಮಾರು ₹ 4.96 ಲಕ್ಷ ವೆಚ್ಚದಲ್ಲಿ ಅಳವಡಿಸಿದ ಮಕ್ಕಳ ಆಟಿಕೆ ಸಾಮಾನುಗಳು ಬಳ್ಳಾರಿ ಜಾಲಿಯಲ್ಲಿ ಕಾಣದಂತೆ ಮಾಯವಾಗಿವೆ.
ಇನ್ನು ಸೋಮಪ್ಪ ಕೆರೆ ಪಕ್ಕದಲ್ಲಿ ಕಳೆದ ವರ್ಷ ಅಳವಡಿಸಿದ ಆಟಿಕೆ ಸಾಮಾನುಗಳು ಹಾಳಾಗಿವೆ. ಇಂಥ ಉದ್ಯಾನಗಳಲ್ಲಿ ನೆಪ ಮಾತ್ರಕ್ಕೆ ಇರುವ ಆಟಿಕೆಗಳಲ್ಲಿ ಆಟವಾಡಲು ಮಕ್ಕಳು ಬರುತ್ತಿಲ್ಲ. ಅದರಿಂದ ಉದ್ಯಾನದಲ್ಲಿ ಮಕ್ಕಳ ಕಲರವ ಮರೀಚಿಕೆಯಾಗಿದೆ.
ಸ್ಥಳೀಯ ಎಂ.ಡಿ ಕ್ಯಾಂಪ್, ಅಲೆಮಾರಿ ಗ್ರಂಥಾಲಯ ಎದುರಿಗೆ, ಹೌಸಿಂಗ್ ಬೋರ್ಡ್ ಸೇರಿದಂತೆ ನಾಲ್ಕೈದು ಕಡೆ ಕಾಯ್ದಿರಿಸಿದ ಉದ್ಯಾನ ಸ್ಥಳದ ಸುತ್ತ ಕಾಂಪೌಂಡ್ ನಿರ್ಮಿಸಿ ಗೇಟ್ ಅಳವಡಿಸಿದ್ದು ಬಿಟ್ಟರೆ ಮತ್ತಿನೇನು ಆಗಿಲ್ಲ. ಶಿಬಿರದಿನ್ನಿ ಬಲಭಾಗದ ಉದ್ಯಾನ ಕಾಂಪೌಂಡ್ ಕಾಮಗಾರಿ ಇನ್ನು ಪೂರ್ಣವಾಗಬೇಕಿದೆ.
ದಶಕಗಳ ಹಿಂದೆ ವಸತಿ ವಿನ್ಯಾಸ ರಚಿಸುವ ಸಂದರ್ಭದಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟಿದ್ದ ಸ್ಥಳಗಳ ಒತ್ತುವರಿ ತಡೆಯಲು ಹಂತ ಹಂತವಾಗಿ ಕಾಂಪೌಂಡ್ ನಿರ್ಮಿಸಲು ಪುರಸಭೆ ನಿರ್ಧರಿಸಿದೆ. ಇತ್ತೀಚೆಗೆ ವಸತಿ ವಿನ್ಯಾಸ ರಚಿಸುವ ಮಾಲೀಕರೆ ಉದ್ಯಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಉಳಿದಂತೆ ಉದ್ಯಾನದ ಒಳಗಿನ ಅಭಿವೃದ್ಧಿ ಕಾರ್ಯ ಪುರಸಭೆ ಕೈಗೊಳ್ಳಬೇಕಿದೆ.
‘ಪುರಸಭೆಗೆ 15ನೇ ಹಣಕಾಸು ಯೋಜನೆಯಡಿ ಮಂಜೂರಾಗುವ ಅನುದಾನದಲ್ಲಿ ಶೇ 15ರಷ್ಟು ಉದ್ಯಾನಗಳ ಅಭಿವೃದ್ಧಿಗಾಗಿ ಮೀಸಲಿರಿಸಿದ್ದು, ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಸೋಮಪ್ಪಕೆರೆ ಪ್ರದೇಶದ ಅಭಿವೃದ್ಧಿ ಪೂರ್ಣಗೊಂಡ ನಂತರ ಕೆರೆ ಪಕ್ಕದಲ್ಲಿರುವ ಉದ್ಯಾನದ ಆಟಿಕೆ ಸಾಮಾನುಗಳನ್ನು ದುರಸ್ತಿಪಡಿಸಲಾಗುವುದು. ಸೋಮಪ್ಪಕೆರೆ ವಾಯುವಿಹಾರಿಗಳಿಗೆ ಮುಂದಿನ ದಿನ ಸಮಯ ನಿಗದಿಪಡಿಸಿ ಹಗಲು, ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗುವುದು’ ಎಂದು ಮುಖ್ಯಾಧಿಕಾರಿ ಕೆ. ದುರುಗಣ್ಣ ಹೇಳಿದರು.
Quote - ಪುರಸಭೆಯಲ್ಲಿ ಖಾಲಿಯಿರುವ ಗಾರ್ಡನರ್ ಹುದ್ದೆ ಭರ್ತಿಗೆ ಮತ್ತು ಉದ್ಯಾನಗಳ ಪ್ರಗತಿ ಜೊತೆಗೆ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಿ ವಾಯುವಿಹಾರಕ್ಕೆ ಬರುವವರಿಗೆ ಅನುಕೂಲ ಮಾಡಬೇಕು. ಕೆ.ಎಂ. ಹೇಮಯ್ಯಸ್ವಾಮಿ ಪುರಸಭೆ ಮಾಜಿ ಸದಸ್ಯ ಕಂಪ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.