ADVERTISEMENT

ಕನಕದಾಸರು ನ್ಯಾಯ-ಸಾಹಿತ್ಯದ ಪ್ರತೀಕ: ಶಾಸಕ ನಾರಾ ಭರತ್ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 15:43 IST
Last Updated 18 ನವೆಂಬರ್ 2024, 15:43 IST
ರಂಗಮಂದಿರ ವೃತ್ತದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಗೌರವ ಸಮರ್ಪಿಸುತ್ತಿರುವ ಮಾಜಿ ಸಚಿವ ಶ್ರೀರಾಮುಲು 
ರಂಗಮಂದಿರ ವೃತ್ತದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಗೌರವ ಸಮರ್ಪಿಸುತ್ತಿರುವ ಮಾಜಿ ಸಚಿವ ಶ್ರೀರಾಮುಲು    

ಬಳ್ಳಾರಿ: ‘ದಾಸ ಶ್ರೇಷ್ಠ ಕನಕರ ಕೀರ್ತನೆಗಳು ಜನ ಸಾಮಾನ್ಯರಲ್ಲಿ ಇಂದಿಗೂ ಅಚ್ಚಳಿಯದೆ, ಅಜರಾಮರವಾಗಿವೆ. ಕನಕದಾಸರು ನ್ಯಾಯ, ಸಾಹಿತ್ಯದ ಪ್ರತೀಕ’ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸರ ಜಯಂತಿಯಲ್ಲಿ ಮಾತನಾಡಿದ ಅವರು, ‘ಕನಕದಾಸರು ಜಾತ್ಯತೀತ ತತ್ವವನ್ನು ಆಗಿನ ಕಾಲದಲ್ಲಿಯೇ ಪ್ರತಿಪಾದಿಸಿದ್ದರು. ಸಂಗೊಳ್ಳಿ ರಾಯಣ್ಣನವರು ಕೂಡ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಇಡೀ ದೇಶವೇ ಮೆಚ್ಚುವ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು. ರಾಯಣ್ಣನವರ ಧೈರ್ಯ, ಶೌರ್ಯ ಪ್ರತಿಯೊಬ್ಬರಿಗೂ ಮಾದರಿ‘ ಎಂದರು. 

ಉಪನ್ಯಾಸಕ ಕೆ.ಸುಂಕಪ್ಪ ಮಾತನಾಡಿ, ‘ದಾಸ ಶ್ರೇಷ್ಠ ಕನಕದಾಸರು ಭಾವನಾ ಜೀವಿಯಾಗಿದ್ದರು. ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮನುಷ್ಯತ್ವದ ಪರ ನಿಲುವು ಪ್ರಕಟಿಸಿ, ಕೀರ್ತನೆ ಸಾಹಿತ್ಯಕ್ಕೆ ಪುಷ್ಠಿ ನೀಡಿದವರು’ ಎಂದರು. 

ADVERTISEMENT

‘ಕಾಗಿನೆಲೆ ಆದಿಕೇಶವರ ದಾಸರಾಗಿದ್ದ ಕನಕ ದಾಸರು ಭಕ್ತಿ ಮಾರ್ಗವನ್ನು ಅನುಸರಿಸಿ ಮುಕ್ತ ಮಾರ್ಗದೆಡೆಗೆ ಸಾಗಿದರು. ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡ ಅವರು ನೂರಾರು ಸಮಾಜಮುಖಿ ಕೀರ್ತನೆಗಳನ್ನು ರಚಿಸಿದರು. ಕೀರ್ತನೆಗಳೆಲ್ಲವೂ ಗುಣಮಟ್ಟ ಮತ್ತು ಅತ್ಯಂತ ಮೌಲ್ಯಯುತ ಎನಿಸಿಕೊಂಡಿವೆ’ ಎಂದರು. 

‘ಕನಕದಾಸರು ಸ್ವಾರ್ಥಕ್ಕಾಗಿ ಏನನ್ನೂ ಬಯಸದೇ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಾ ಜನ ಸೇವಕರಾಗಿದ್ದರು‘ ಎಂದು ತಿಳಿಸಿದರು. 

ಇದೇ ವೇಳೆ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಭಕ್ತ ಕನಕದಾಸರ ಜಯಂತಿ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಅನಾವರಣಗೊಂಡಿದ್ದ ಪ್ರತಿಮೆಯನ್ನು ಮರಳಿ ಮುಚ್ಚಿರುವುದು 
ನಗರದ ಕನಕದಾಸರ ಪ್ರತಿಮೆಗೆ ಸಂಸದ ಇ ತುಕಾರಾಂ ಅವರು ಸೋಮವಾರ ಮಾಲಾರ್ಪಣೆ ಮಾಡಿದರು. 

ರಾಯಣ್ಣ ಪ್ರತಿಮೆ ವಿವಾದ 

ನಾನಾ ಕಾರಣಗಳಿಂದ ಅನಾವರಣಗೊಳ್ಳದೇ ಇದ್ದ ನಗರದ ರಂಗಮಂದಿರ ಬಳಿಯ ರಾಯಣ್ಣ ಪ್ರತಿಯಮೆಯನ್ನು ಸೋಮವಾರ ಗುಂಪೊಂದು ಏಕಾಏಕಿ ಅನಾವರಣಗೊಳಿಸಿತು. ಇದಕ್ಕೆ ಮಾಜಿ ಸಚಿವ ಶ್ರೀರಾಮುಲು ಮತ್ತು ಸಂಸದ ‌ತುಕಾರಾಂ ಗೌರವ ಸಮರ್ಪಣೆ ಮಾಡಿದರು. ಇದಾದ ಕೆಲವೇ ಗಂಟೆಗಳಲ್ಲಿ ಪ್ರತಿಮೆಯನ್ನು ಪಾಲಿಕೆಯು ಮತ್ತೆ ಮುಚ್ಚಿತು. ಇದು ವಿವಾದಕ್ಕೆ ಕಾರಣವಾಯಿತು. ಪ್ರತಿಮೆ ಮುಚ್ಚಬಾರದು ಎಂದು ಒಂದು ಗುಂಪು ಸೂಕ್ತ ಗೌರವ ಕೊಟ್ಟು ಅನಾವರಣ ಮಾಡಬೇಕು ಎಂದು ಮತ್ತೊಂದು ಗುಂಪು ವಾಗ್ವಾದ ನಡೆಸಿದವು.

ಬಳಿಕ ಪೊಲೀಸರ ಮಧ್ಯಪ್ರವೇಶದಲ್ಲಿ ಪರಿಸ್ಥಿತಿ ತಿಳಿಗೊಳಿಸಲಾಯಿತಾದರೂ ಪ್ರತಿಮೆಯನ್ನು ಮತ್ತೆ ಮುಚ್ಚಲಾಯಿತು. ಇದೇ ವಿವಾದ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮವನ್ನೂ ಪ್ರವೇಶಿಸಿತು. ಪ್ರತಿಮೆಯನ್ನು ಅನಾವರಣಗೊಳಿಸಬೇಕು ಎಂದು ಗುಂಪೊಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿತು. ಆಗ ಮಧ್ಯಪ್ರವೇಶಿಸಿದ ನಗರ ಶಾಸಕ ನಾರಾ ಭರತ್‌ ರೆಡ್ಡಿ ‘ಇಡೀ ಕರ್ನಾಟಕವೇ ನೋಡುವಂತಹ ಕಾರ್ಯಕ್ರಮ ಮಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸುವುದು ನನ್ನ ಜವಾಬ್ದಾರಿ’ ಎಂದು ಹೇಳಿದರು. ಪೊಲೀಸರ ಮಧ್ಯ ಪ್ರವೇಶದ ಬಳಿಕ ಕಾರ್ಯಕ್ರಮ ಆರಂಭವಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.