ಹೊಸಪೇಟೆ: ‘ಹಲವು ವರ್ಷಗಳ ಹಿಂದೆ ಜ್ಞಾನದ ಗುರುತ್ವ ಕೇಂದ್ರ ಮೈಸೂರು ವಿಶ್ವವಿದ್ಯಾಲಯವಾಗಿತ್ತು. ಈಗ ಅದು ಕನ್ನಡ ವಿಶ್ವವಿದ್ಯಾಲಯದತ್ತ ಮುಖ ಮಾಡಿದೆ’ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದರು.
ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯವು ಸೋಮವಾರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2018–19ನೇ ಸಾಲಿನ ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳ ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕನ್ನಡ ವಿಶ್ವವಿದ್ಯಾಲಯದಲ್ಲಿ ಉತ್ಕೃಷ್ಟವಾದ ಪ್ರಾಧ್ಯಾಪಕರ ಪಡೆ ಇದೆ. ಬೇರೆ ವಿಶ್ವವಿದ್ಯಾಲಯಗಳಲ್ಲಿ ಇದು ಕಂಡು ಬರುವುದಿಲ್ಲ. ದೂರಸಿಕ್ಷಣದ ಮೂಲಕ ದೊರೆಯುವ ಶಿಕ್ಷಣವು ಬಹಳ ಮುಕ್ತ, ಜನಪರವಾಗಿದೆ. ಭಕ್ತಿ ಪಂಥದಲ್ಲಿ ಭಗವಂತನು ಭಕ್ತವತ್ಸಲನಾಗಿ ಭಕ್ತನಿರುವ ಜಾಗಕ್ಕೆ ಬರುತ್ತಾನೆ. ಅದೇ ರೀತಿ ವಿದ್ಯಾವತ್ಸಲ ನೀತಿ ದೂರಶಿಕ್ಷಣದ್ದಾಗಿದೆ’ ಎಂದು ವ್ಯಾಖ್ಯಾನಿಸಿದರು.
‘ದೂರಶಿಕ್ಷಣದ ಮೂಲಕ ಸುಲಭವಾಗಿ ಪದವಿ ಪಡೆಯಬಹುದು ಎಂಬ ಸಡಿಲ ಪ್ರವೃತ್ತಿಗೆ ಅವಕಾಶ ಕೊಡದಿದ್ದರೆ ಜ್ಞಾನದ ಗುಣಮಟ್ಟ ಹೆಚ್ಚಿಸಬಹುದು. ಅಡ್ಡ ಪ್ರವೃತ್ತಿಗೆ ಅವಕಾಶ ನೀಡದೇ ದೂರಶಿಕ್ಷಣದ ಗುಣಮಟ್ಟವನ್ನು ಕಾಪಾಡಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹತ್ತಿರವಿಲ್ಲದಿದ್ದರೂ ಹತ್ತಿರ ಇರುವಂತೆ ವಿಡಿಯೊ ಕಾನ್ಫರೆನ್ಸ್ ಮೂಲಕ ದೂರಶಿಕ್ಷಣ ವಿದ್ಯಾರ್ಥಿಗಳೊಂದಿಗೆ ತರಗತಿ, ಸಂವಾದ ಮಾಡಬಹುದು’ ಎಂದರು.
‘ಚಲನಶೀಲ ಚಿಂತನ ವ್ಯಕ್ತಿಗಳು ಕನ್ನಡ ವಿಶ್ವವಿದ್ಯಾಲಯದಲ್ಲಿದ್ದಾರೆ. ನಿಮ್ಮ ಪದವಿ ಪ್ರಮಾಣ ಪತ್ರಗಳನ್ನು ತೋರಿಸಿದಾಗ ಕನ್ನಡ ವಿಶ್ವವಿದ್ಯಾಲಯಕ್ಕೆ ಗೌರವ ಸಿಗಬೇಕು. ಶ್ರೇಷ್ಠ ಮಾನದಂಡದ ವಿಶ್ವವಿದ್ಯಾಲಯ ಎಂದು ನಿಮ್ಮ ಮೂಲಕ ನಾಡು ನುಡಿಗೆ ಕೊಡುಗೆ ನೀಡಬೇಕು. ಸಮಾಜವನ್ನು ಹೊರತುಪಡಿಸಿದ ಸಾಹಿತ್ಯವೇ ಇಲ್ಲ. ಸಮಾಜದ ಎಲ್ಲ ವಿಷಯಗಳನ್ನು ಅರಿಯಲು ಪ್ರಯತ್ನಿಸಿರಿ. ಪದವಿ ಮುಖ್ಯವಲ್ಲ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ, ‘ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ದೂರಶಿಕ್ಷಣ ನಿರ್ದೇಶನಾಲಯವು ಶಿಕ್ಷಣ ಕೊಡುತ್ತಿದೆ. ಶಿಕ್ಷಣ ಪಡೆದ ನಂತರ ಉದ್ಯೋಗಕ್ಕಾಗಿ ಕಾಯದೆ ಉದ್ಯಮಿಯಾಗಬೇಕು’ ಎಂದು ತಿಳಿಸಿದರು.
‘ಕನ್ನಡ ವಿಶ್ವವಿದ್ಯಾಲಯವು ಅನ್ನದ ವಿಶ್ವವಿದ್ಯಾಲಯವಾಗಿದೆ. ಜ್ಞಾನದ ಜೊತೆಗೆ ಬದುಕು ಕಟ್ಟಿಕೊಡುವ ಕೆಲಸ ಈ ವಿಶ್ವವಿದ್ಯಾಲಯ ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸ.ಚಿ. ರಮೇಶ, ‘ಆನ್‍ಲೈನ್ ಮೂಲಕ ದೂರಶಿಕ್ಷಣದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಿಂದ ಕುಳಿತಲ್ಲೇ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಬಹುದು. ದೂರಶಿಕ್ಷಣದ ವಿದ್ಯಾರ್ಥಿಗಳು ರೆಗ್ಯುಲರ್ ವಿದ್ಯಾರ್ಥಿಗಳ ಸಾಲಿಗೆ ನಾವು ಸೇರುತ್ತೇವೋ ಇಲ್ಲವೋ ಎಂದು ಚಿಂತಿಸುವ ಅಗತ್ಯವಿಲ್ಲ’ ಎಂದು ಹೇಳಿದರು.
ಕುಲಸಚಿವ ಎ.ಸುಬ್ಬಣ್ಣರೈ, ಸಂಪರ್ಕ ತರಗತಿಗಳ ಸಂಚಾಲಕ ಕೆ.ಎಂ. ಮೇತ್ರಿ,ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ವೀರೇಶ ಬಡಿಗೇರ,ಕನ್ನಡ ಸಾಹಿತ್ಯ ಸಂಪರ್ಕ ತರಗತಿಗಳ ಸಂಚಾಲಕ ಶಿವಾನಂದ ಎಸ್. ವಿರಕ್ತಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.