ಹೊಸಪೇಟೆ:ಹಂಪಿ ಕನ್ನಡ ವಿಶ್ವವಿದ್ಯಾಲಯವು ಎರಡೂವರೆ ದಶಕಗಳಿಂದ ಕರುನಾಡಿನ ಅಸ್ಮಿತೆಯ ಪ್ರತೀಕವಾಗಿ ನಿಂತಿದೆ.
ಕನ್ನಡ ನಾಡು, ನುಡಿ ಸಂಸ್ಕೃತಿ ಉಳಿಸುವ ಕೆಲಸದ ಜತೆ ಜತೆಗೆ ನಾಡಿನ ಎಲ್ಲಾ ರೀತಿಯ ಜ್ಞಾನವನ್ನು ದಾಖಲೀಕರಣ ಮಾಡಿ, ಹೊಸ ತಲೆಮಾರಿಗೆ ಅದನ್ನು ಉಳಿಸುವ ಶ್ರೇಷ್ಠ ಕಸುಬು ಮಾಡುತ್ತಿದೆ.
ಭಾಷೆಗಾಗಿಯೇ ಇರುವ ನಾಡಿನ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಹೊಂದಿರುವ ಇಲ್ಲಿ ದೇಸಿ, ಶಿಷ್ಟ, ಜಾನಪದ, ಪುರಾತತ್ವ, ಶಾಸನಶಾಸ್ತ್ರ ಸೇರಿದಂತೆ ಹಲವು ವಿಷಯಗಳ ಮೇಲೆ ಆಳ ಸಂಶೋಧನೆಗಳು ನಡೆದಿವೆ. ಈಗಲೂ ನಡೆಯುತ್ತಿವೆ. ಪ್ರತಿ ವರ್ಷ ನೂರಾರು ಹೊಸ ಹೊಸ ಸಂಶೋಧಕರು ಈ ಸಂಸ್ಥೆಯಿಂದ ಹೊರ ಬರುತ್ತಿದ್ದಾರೆ. ಪ್ರಸಾರಾಂಗದ ಮೂಲಕ ಉತ್ಕೃಷ್ಟವಾದ ಕನ್ನಡ ಪುಸ್ತಕಗಳನ್ನು ಹೊರತರಲಾಗಿದೆ.
ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಭವಿಸುವ ಬಿಕ್ಕಟ್ಟುಗಳಿಗೆ ವಿಶ್ವವಿದ್ಯಾಲಯ ನಾಡಿನ ಧ್ವನಿಯಾಗಿ ಪ್ರತಿಕ್ರಿಯಿಸುತ್ತ ಬಂದಿದೆ. ವಿಚಾರ ಸಂಕಿರಣ, ಸಂವಾದಗಳ ಮೂಲಕ ಹೊಸ ಪೀಳಿಗೆಯಲ್ಲಿ ಅರಿವು ಮೂಡಿಸಲಾಗುತ್ತಿದೆ.
ವಿಶ್ವವಿದ್ಯಾಲಯಕ್ಕೆ ಸೇರಿದ 80 ಎಕರೆ ಜಾಗವನ್ನು ಅಧಿಕಾರಷಾಹಿ ಕಸಿದುಕೊಳ್ಳಲು ಮುಂದಾದಾಗ, ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ವ್ಯಾಪ್ತಿಗೆ ತರಲು ಚಿಂತನೆ ನಡೆದಾಗ ಅದರ ವಿರುದ್ಧ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು. ನಾಡಿನ ಸಾಹಿತಿಗಳು, ಪ್ರಜ್ಞಾವಂತರು ಕನ್ನಡ ವಿಶ್ವವಿದ್ಯಾಲಯದ ಬೆನ್ನಿಗೆ ನಿಂತು ಅದರ ಅಸ್ಮಿತೆಗೆ ಧಕ್ಕೆ ಬರದಂತೆ ನೋಡಿಕೊಂಡಿದ್ದಾರೆ.
ವಿಶ್ವವಿದ್ಯಾಲಯದ ಮೇಷ್ಟ್ರುಗಳು, ವಿದ್ಯಾರ್ಥಿಗಳ ಮಾರ್ಗದರ್ಶನ, ಬೋಧನೆಗೆ ಸೀಮಿತವಾಗಿಲ್ಲ. ನಾಡಿನ ಪ್ರಮುಖ ಕನ್ನಡ ದಿನಪತ್ರಿಕೆಗಳು, ಬ್ಲಾಗ್‌ಗಳಿಗೆ ನಿತ್ಯ ನಿರಂತರವಾಗಿ ಲೇಖನಗಳನ್ನು ಬರೆದು, ಜನರ ತಿಳಿವಳಿಕೆಯ ಮಟ್ಟ ವಿಸ್ತರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಬರಹಗಳಿಗೆ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಯ ಗೌರವ ಕೂಡ ಸಂದಿದೆ.
‘25 ವರ್ಷ ಪೂರೈಸಿರುವ ವಿಶ್ವವಿದ್ಯಾಲಯವು ಮೊದಲನೇ ಘಟ್ಟದಲ್ಲಿ ಅಂದುಕೊಂಡಿರುವುದಕ್ಕಿಂತ ಹೆಚ್ಚಿನದನ್ನು ಸಾಧಿಸಿದೆ. ಎರಡನೇ ಘಟ್ಟದಲ್ಲಿ ಅನೇಕ ಹೊಸ ಯೋಜನೆಗಳನ್ನು ಹಾಕಿಕೊಂಡಿದೆ. ಪ್ರಸಾರಾಂಗದಿಂದ ಹೊರಬಂದಿರುವ ಕನ್ನಡದ ಪುಸ್ತಕಗಳನ್ನು ಇಂಗ್ಲಿಷ್, ಹಿಂದಿಗೆ ತರ್ಜುಮೆಗೊಳಿಸುವುದು, ಸಂಚಾರ ಪುಸ್ತಕ ಮಳಿಗೆ ಮೂಲಕ ಕಟ್ಟ ಕಡೆಯ ಗ್ರಾಮಗಳಲ್ಲೂ ಓದಿನ ಅಭಿರುಚಿ ಬೆಳೆಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ’ ಎಂದು ಕುಲಪತಿ ಪ್ರೊ. ಸ.ಚಿ. ರಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬರುವ ದಿನಗಳಲ್ಲಿ ವಚನ ಅಧ್ಯಯನ ಕೇಂದ್ರ. ಡಾ.ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನ್ ರಾಂ ಅಧ್ಯಯನ ಪೀಠ ಆರಂಭಿಸಲು ಗಂಭೀರ ಚಿಂತನೆ ನಡೆದಿದೆ. ಇಷ್ಟರಲ್ಲೇ ಬೆಂಗಳೂರಿನ ಕಲಾ ಗ್ರಾಮದಲ್ಲಿ ರಾಜಕುಮಾರ ಅಧ್ಯಯನ ಕೇಂದ್ರ ಆರಂಭಿಸಲಾಗುವುದು’ ಎಂದರು.
‘ಪ್ರಸಕ್ತ ವರ್ಷ ಸಾಂಕೇತಿಕವಾಗಿ ಐದು ಗ್ರಾಮಗಳನ್ನು ಸಾಂಸ್ಥಿಕವಾಗಿ ದತ್ತು ಪಡೆಯಲಾಗಿದೆ. ಆ ಗ್ರಾಮಗಳಲ್ಲಿ ನಾಡು ನುಡಿ, ಸಂಸ್ಕೃತಿ, ಕೃಷಿ, ಆರೋಗ್ಯ, ಶಿಕ್ಷಣದ ಕುರಿತು ಅರಿವು ಮೂಡಿಸಲಾಗುವುದು. ಇದು ಯಶಸ್ವಿಯಾದ ನಂತರ ಇನ್ನಷ್ಟು ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲಾಗುವುದು. ಸಮುದಾಯ ಬಾನುಲಿ ಮೂಲಕ ಕನ್ನಡದ ಎಲ್ಲಾ ಜ್ಞಾನದ ಕುರಿತು ಜನರಿಗೆ ತಿಳಿಸಲಾಗುವುದು. ಆ ನಿಟ್ಟಿನಲ್ಲಿ ಈಗಾಗಲೇ ಭರದ ಕೆಲಸ ನಡೆದಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.