ADVERTISEMENT

ಮೈಲಾರಲಿಂಗೇಶ್ವರ ಕಾರಣಿಕ: ‘ಸಂಪಾಯಿತಲೇ ಪರಾಕ್’

ಏನಿದರ ಅರ್ಥ?

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 1:13 IST
Last Updated 12 ಫೆಬ್ರುವರಿ 2020, 1:13 IST
ಮೈಲಾರ ಸುಕ್ಷೇತ್ರದಲ್ಲಿ ಕಾರಣಿಕ ನುಡಿಯುತ್ತಿರುವ ಗೊರವಯ್ಯ ರಾಮಣ್ಣ–ಪ್ರಜಾವಾಣಿ ಚಿತ್ರ: ನಾಗೇಶ್‌ ಬಾರ್ಕಿ
ಮೈಲಾರ ಸುಕ್ಷೇತ್ರದಲ್ಲಿ ಕಾರಣಿಕ ನುಡಿಯುತ್ತಿರುವ ಗೊರವಯ್ಯ ರಾಮಣ್ಣ–ಪ್ರಜಾವಾಣಿ ಚಿತ್ರ: ನಾಗೇಶ್‌ ಬಾರ್ಕಿ   

ಮೈಲಾರ (ಹೂವಿನಹಡಗಲಿ ತಾಲ್ಲೂಕು): ‘ಸಂಪಾಯಿತಲೇ ಪರಾಕ್’ ಇದು ಐತಿಹಾಸಿಕ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಮಂಗಳವಾರ ಮೊಳಗಿದ ಮೈಲಾರಲಿಂಗೇಶ್ವರ ಕಾರಣಿಕ ಉಕ್ತಿ.

ಪೌರಾಣಿಕ ಹಿನ್ನೆಲೆಯ ಮೈಲಾರದ ಡೆಂಕನಮರಡಿಯಲ್ಲಿ ಲಕ್ಷಾಂತರ ಭಕ್ತರ ಜಯಘೋಷ, ಹರ್ಷೋದ್ಗಾರದ ನಡುವೆ ಪ್ರಸಕ್ತ ಸಾಲಿನ ಕಾರಣಿಕ ಜರುಗಿತು.

ಈ ಹಿಂದೆ ವಿಜಯನಗರ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ ಮೂರ್ತಿಗಳು ಹಾಗೂ ಸುಕ್ಷೇತ್ರದ ಪರಂಪರೆಯ ಸಂಕೇತವಾಗಿರುವ ಬಿಲ್ಲನ್ನು ಗೊರವ ಪರಿವಾರ ಭವ್ಯ ಮೆರವಣಿಗೆಯಲ್ಲಿ ಕರೆ ತಂದರು. ಈ ವೇಳೆ ‘ಏಳುಕೋಟಿ ಏಳುಕೋಟಿ ಚಾಂಗ್ ಬಲೋ..‘ ಎಂಬ ಹರ್ಷೋದ್ಗಾರಮುಗಿಲುಮುಟ್ಟಿತು.

ADVERTISEMENT

ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಶ್ವಾರೋಢರಾಗಿ ಡೆಂಕನಮರಡಿಗೆ ಆಗಮಿಸಿ ಕಾರಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ಸುಕ್ಷೇತ್ರದ ಪರಂಪರೆಯ ಸಂಕೇತವಾಗಿರುವ ಬಿಲ್ಲನ್ನು ಗೊರವ ಪರಿವಾರ ಭವ್ಯ ಮೆರವಣಿಗೆಯಲ್ಲಿ ಕರೆ ತಂದರು.

ಜಯಘೋಷಗಳ ನಡುವೆ ಸಂಜೆ 5.30ಕ್ಕೆ ಬಿಲ್ಲು ಏರಿದ ಗೊರವಯ್ಯ ರಾಮಣ್ಣ, ಶೂನ್ಯವನ್ನು ದಿಟ್ಟಿಸಿ ಬಳಿಕ ಮೇಲಿನಂತೆ ಕಾರಣಿಕ ನುಡಿದು ಹಿಮ್ಮುಖವಾಗಿ ಜಿಗಿದರು. ನೆರೆದಿದ್ದ ಗೊರವ ಸಮೂಹ ಅವರನ್ನು ಕಂಬಳಿಯಲ್ಲಿ ಹಿಡಿದರು.

‘ಪ್ರಸಕ್ತ ವರ್ಷದ ಕಾರಣಿಕ ನುಡಿಯು ಶುಭ ಸೂಚಕವಾಗಿದೆ’ ಎಂದು ಭಕ್ತರು ಅರ್ಥೈಸುತ್ತಿದ್ದರು. ಈ ವರ್ಷ ಮಳೆ, ಬೆಳೆ ಸಮೃದ್ಧವಾಗಿ ರೈತರ ಬದುಕು ಹಸನಾಗಲಿದೆ. ಗೂಡಾರ್ಥದಿಂದ ಕೂಡಿದ ಸ್ವಾಮಿಯ ಭವಿಷ್ಯವಾಣಿಯಲ್ಲಿ ಎಲ್ಲ ರಂಗಗಳಿಗೂ ಒಳಿತಾಗುವ ಆಶಯದ ನುಡಿಯಾಗಿದೆ ಎಂದು ಹಿರಿಯರು ವ್ಯಾಖ್ಯಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.