ADVERTISEMENT

ಸಾಕ್ಷಾತ್‌ ಸಮೀಕ್ಷೆ – ಬಳ್ಳಾರಿ : ಕಾಂಗ್ರೆಸ್‌– ಬಿಜೆಪಿ ಜಿದ್ದಾಜಿದ್ದಿ

ಗಣಿನಾಡಿನಲ್ಲಿ ಗಣಿ ಧಣಿಗಳ ಪಕ್ಷ ಖಾತೆ ತೆರೆಯುವುದೇ?

ಹೊನಕೆರೆ ನಂಜುಂಡೇಗೌಡ
Published 5 ಮೇ 2023, 19:30 IST
Last Updated 5 ಮೇ 2023, 19:30 IST
   

ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪದ ಬಳಿಕ ಬಳ್ಳಾರಿ ಜಿಲ್ಲೆ ಗಣಿಗಳು ಬಹುತೇಕ ಸ್ಥಗಿತಗೊಂಡಿದ್ದರೂ ರಾಜಕಾರಣ ಬಲು ಜೋರಾಗಿದೆ. ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಬಳ್ಳಾರಿ ಗ್ರಾಮೀಣ ಮತ್ತು ಬಳ್ಳಾರಿ ನಗರ ಕ್ಷೇತ್ರಗಳ ಪೈಪೋಟಿ  ಕುತೂಹಲ ಕೆರಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ, ಬಿಜೆಪಿಯ ಬಿ. ಶ್ರೀರಾಮುಲು ಮತ್ತು ಶಾಸಕ ಕಾಂಗ್ರೆಸ್‌ನ ನಾಗೇಂದ್ರ ನಡುವಣ ನೇರ ಹಣಾಹಣಿಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರ ಸಾಕ್ಷಿಯಾಗಲಿದೆ. ಜಿಲ್ಲೆಯಲ್ಲಿ ವಾಲ್ಮೀಕಿ ಬಹುಸಂಖ್ಯಾತ ಸಮುದಾಯ. ಶ್ರೀರಾಮುಲು ಈ ಸಮುದಾಯದ ದೊಡ್ಡ ನಾಯಕ.

2018ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮುಲು ಮೊಳಕಾಲ್ಮೂರಿನಿಂದ ಗೆದ್ದಿದ್ದರು. ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲೂ  ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ದಶಕದ ಬಳಿಕ ತವರು ಕ್ಷೇತ್ರಕ್ಕೆ ಮರಳಿದ್ದಾರೆ. ಶ್ರೀರಾಮುಲು ಸೋಲಿನ ಭಯದಿಂದ ವಾಪಸ್‌ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. 

ADVERTISEMENT

ಶ್ರೀರಾಮುಲುಗೆ ಇಲ್ಲಿ ಗೆಲುವಿನ ಹಾದಿ ಸುಲಭವಲ್ಲ ಎಂಬ ವಾತಾವರಣವಿದೆ. ನಾಗೇಂದ್ರ ಭಾರಿ ಪೈಪೋಟಿಯೊಡ್ಡುತ್ತಿರುವುದೇ ಇದಕ್ಕೆ ಕಾರಣ. ಬಳ್ಳಾರಿಯವರಾದ ನಾಗೇಂದ್ರ 2018ರಲ್ಲಿ ಇಲ್ಲಿಂದ ಆಯ್ಕೆಯಾಗಿದ್ದಾರೆ. ಕೂಡ್ಲಿಗಿಯಿಂದ ಎರಡು ಸಲ ಶಾಸಕರಾಗಿದ್ದರು. ನಾಗೇಂದ್ರ ಅವರೂ ವಾಲ್ಮೀಕಿ ಸಮಾಜದವರು. ಆರಂಭದಲ್ಲಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಆನಂತರ, ಕ್ಷೇತ್ರ ಬಿಟ್ಟು ಕದಲಲಿಲ್ಲ. ಬಿಜೆಪಿ–ಕಾಂಗ್ರೆಸ್‌ ಸಮಬಲದ ಪೈಪೋಟಿ ನೀಡುವಂತೆ  ಕಂಡುಬರುತ್ತಿದೆ.

ಬಳ್ಳಾರಿ ನಗರಕ್ಕೆ ಹೊಂದಿಕೊಂಡ ಕೌಲ್‌ ಬಜಾರ್‌ನ 11 ವಾರ್ಡ್‌ಗಳಲ್ಲಿ ಮುಸ್ಲಿಮರು, ಕ್ರೈಸ್ತರ ಮತಗಳು ನಿರ್ಣಾಯಕ. ಮುಸ್ಲಿಮರ ಮತಗಳನ್ನು ಸೆಳೆಯಲು ಶ್ರೀರಾಮುಲು ಕಸರತ್ತು ಮಾಡುತ್ತಿದ್ದಾರೆ.  

ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಹಣಾಹಣಿ ಇದೆ. ಶ್ರೀರಾಮುಲು ಅವರ ಅಳಿಯ, ಮಾಜಿ ಶಾಸಕ ಸುರೇಶ್‌ಬಾಬು ಬಿಜೆಪಿ ಅಭ್ಯರ್ಥಿ. ಶಾಸಕ ಜೆ.ಎನ್‌. ಗಣೇಶ್‌ ಕಾಂಗ್ರೆಸ್‌ನಿಂದ, ರಾಜು ನಾಯ್ಕ ಜೆಡಿಎಸ್‌ನಿಂದ ಕಣದಲ್ಲಿದ್ದಾರೆ.

ಕುರುಗೋಡು ಕಾಂಗ್ರೆಸ್‌ ಮುಖಂಡರಲ್ಲಿ ಕೆಲವರು ಬಿಜೆಪಿಗೆ ವಲಸೆ ಹೋಗಿದ್ದಾರೆ. ಹಿರಿಯ ನಾಯಕರೂ ಗಣೇಶ್ ಪರ ಕೆಲಸ ಮಾಡುತ್ತಿಲ್ಲವೆಂಬ ಮಾತುಗಳಿವೆ. ಗಣೇಶ್‌ ಜನರ ನಡುವೆ ಇರುತ್ತಾರೆ. ವಿರೋಧ ಪಕ್ಷದಲ್ಲಿದ್ದರೂ, ಕೆಲವು ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಸುರೇಶ್‌ ಬಾಬು ಜನರ ಕೈಗೇ ಸಿಗುವುದಿಲ್ಲ ಎಂಬ ದೂರುಗಳಿವೆ.

ಸಿರುಗುಪ್ಪ ಕ್ಷೇತ್ರದಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಬಿಜೆಪಿ ಶಾಸಕ ಸೋಮಲಿಂಗಪ್ಪ, ಮಾಜಿ ಶಾಸಕ ಕಾಂಗ್ರೆಸ್‌ನ ಬಿ.ಎಂ. ನಾಗರಾಜ್‌, ಅರಣ್ಯ ಇಲಾಖೆ ನಿವೃತ್ತ ಸರ್ವೇಯರ್‌ ಧರಪ್ಪ ನಾಯಕ ಕೆಆರ್‌ಪಿಪಿಯಿಂದ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮುರಳಿ ಕೃಷ್ಣ, ಅವರ ಬೆಂಬಲಿಗರು ಕಾಂಗ್ರೆಸ್‌ ಪರ ಕೆಲಸ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಕೆಆರ್‌ಪಿಪಿಯ ಧರಪ್ಪ ನಾಯಕ ಯಾವ ಪಕ್ಷದ ಮತಗಳಿಗೆ ಕೈ ಹಾಕುವರು ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.  

ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ತುಕಾರಾಂ ನಾಲ್ಕನೇ ಸಲ ಮರು ಆಯ್ಕೆ ಬಯಸಿದ್ದಾರೆ. ಶಿಲ್ಪಾ ರಾಘವೇಂದ್ರ ಬಿಜೆಪಿ ಅಭ್ಯರ್ಥಿ. 2018ರ ಚುನಾವಣೆಯಲ್ಲಿ ಸಂಡೂರಿನಲ್ಲಿ ಸೋತಿದ್ದ ರಾಘವೇಂದ್ರ ಕೋವಿಡ್‌ನಿಂದ ಮೃತಪಟ್ಟರು. ಅನುಕಂಪವನ್ನೇ ಬಂಡವಾಳ ಮಾಡಿಕೊಳ್ಳಲು ಬಿಜೆಪಿ ಶಿಲ್ಪಾ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕೆ.ಎಸ್‌. ದಿವಾಕರ್‌ ಕೆಆರ್‌‍ಪಿಪಿ ಅಭ್ಯರ್ಥಿ.

ಜೆಡಿಎಸ್‌ ಎಲ್ಲರಿಗಿಂತ ಮೊದಲೇ ಸೋಮಪ್ಪ ಅವರನ್ನು ಕಣಕ್ಕಿಳಿಸಿದೆ. ಸಾಮಾನ್ಯ ಕುಟುಂಬದವರಾದ ಸೋಮಪ್ಪ ಅವರಿಗೆ ಮತದಾರರು ಅಲ್ಪಸ್ವಲ್ಪ ದೇಣಿಗೆ ನೀಡಿದ್ದಾರೆ. ದಿವಾಕರ್‌ ಸ್ಪರ್ಧೆಯಿಂದ ತುಕಾರಾಂಗೆ ಲಾಭ ಆಗಬಹುದೇ? ಶಿಲ್ಪಾ ಅನುಕಂಪದ ಅಲೆಯಲ್ಲಿ ತೇಲಿ ದಡ ಸೇರುವರೇ? ಮತದಾರರು ದಿವಾಕರ ಕೈ ಹಿಡಿಯುವರೇ? ಅಥವಾ ಜೆಡಿಎಸ್‌ ಪರ ‘ಪವಾಡ’ ನಡೆಯುವುದೇ? ಎನ್ನುವ ಕುತೂಹಲ ಉಳಿದಿದೆ.

ಕೋಟ್ಯಧಿಪತಿಗಳ ಕಾಳಗ

ಬಳ್ಳಾರಿ ನಗರ ಎರಡು ಕಾರಣಕ್ಕೆ ಪ್ರತಿಷ್ಠೆ ಕಣವಾಗಿದೆ. ಒಂದು, ಬಿಜೆಪಿ ಅಭ್ಯರ್ಥಿ, ಶಾಸಕ ಸೋಮಶೇಖರೆಡ್ಡಿ, ಕಾಂಗ್ರೆಸ್‌ನ ಭರತ್‌ ರೆಡ್ಡಿ, ಕೆಆರ್‌ಪಿಪಿ ಲಕ್ಷ್ಮೀ ಅರುಣಾ ಮತ್ತು ಮಾಜಿ ಶಾಸಕ ಜೆಡಿಎಸ್‌ ಅಭ್ಯರ್ಥಿ ಅನಿಲ್‌ ಲಾಡ್‌ ಎಲ್ಲರೂ ‘ಭಾರಿ ಕುಳ’ಗಳು. ಲಾಡ್‌ ಬಿಟ್ಟರೆ ಮಿಕ್ಕವರು ರೆಡ್ಡಿ ಸಮುದಾಯದವರು.

ಎರಡನೆಯದು, ಸೋಮಶೇಖರ ರೆಡ್ಡಿ ಮತ್ತು ಲಕ್ಷ್ಮೀ ಅರುಣಾ (ಜನಾರ್ದನ ರೆಡ್ಡಿ ಪತ್ನಿ) ಬಾವ ಹಾಗೂ ಸೊಸೆ. ಒಂದೇ ಕುಟುಂಬದ ಇಬ್ಬರ ಸ್ಪರ್ಧೆಯಿಂದ ಈ ಕ್ಷೇತ್ರ ಗಮನ ಸೆಳೆದಿದೆ. ಕೆಲವರಿಗೆ ಗೆಲ್ಲುವ ಛಲ. ಇನ್ನೂ ಕೆಲವರಿಗೆ  ಎದುರಾಳಿಗಳನ್ನು ಸೋಲಿಸುವ ಹಟ.

ಸೋಮಶೇಖರ ರೆಡ್ಡಿ ಎರಡು ಸಲ, ಅನಿಲ್‌ ಲಾಡ್‌ ಒಮ್ಮೆ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಿಂದ ಟಿಕೆಟ್‌ ವಂಚಿತರಾದ ಲಾಡ್‌ ಈಗ ಜೆಡಿಎಸ್‌ ಅಭ್ಯರ್ಥಿ.

ಪ್ರಬಲ ವಿರೋಧದ ನಡುವೆಯೂ ಕಾಂಗ್ರೆಸ್‌ ಭರತ್‌ ರೆಡ್ಡಿಗೆ ಟಿಕೆಟ್‌ ನೀಡಿದೆ. ಇದರಿಂದಾಗಿ ‘ಬಂಡಾಯದ ಬಿಸಿ’ ತಟ್ಟಿದೆ. ಇದರಿಂದ ಅಸಮಾಧಾನಗೊಂಡಿರುವ ಮಾಜಿ ಸಚಿವ ದಿವಾಕರ ಬಾಬು, ಕೆಆರ್‌ಪಿಪಿಯ ಲಕ್ಷ್ಮೀ ಅರುಣಾ ಅವರನ್ನು ಬೆಂಬಲಿಸಿದ್ದಾರೆ. ಇನ್ನೂ ಅನೇಕ ನಾಯಕರು ಕಾಂಗ್ರೆಸ್‌ನಲ್ಲಿ ಇದ್ದುಕೊಂಡೇ ತೆರೆಮರೆಯಲ್ಲಿ ಎದುರಾಳಿಗಳಿಗೆ ಸಹಾಯ ಮಾಡುತ್ತಿದ್ದಾರೆ ಎನ್ನವ ಮಾತಿದೆ. 

ಚುನಾವಣೆ ಘೋಷಣೆಗೆ ಮೊದಲೇ ಭರತ್‌ ರೆಡ್ಡಿ ತಮ್ಮ ಹುಟ್ಟುಹಬ್ಬದ ಹೆಸರಿನಲ್ಲಿ ಮತದಾರರಿಗೆ ಕುಕ್ಕರ್‌ ಹಂಚಿರುವುದರಿಂದ ಲಾಭವಾಗಬಹುದು. ಕಾಂಗ್ರೆಸ್‌ ಬಂಡಾಯವನ್ನು ಕೆಆರ್‌ಪಿಪಿ ಬಂಡವಾಳ ಮಾಡಿಕೊಳ್ಳಲು ಹೊರಟಿದೆ. ಬಂಡಾಯ ನಾಯಕರ ಮನೆ ಬಾಗಿಲಿಗೆ ಎಡ ತಾಕುತ್ತಿದೆ. ಅದರಲ್ಲಿ ಬಹಳಷ್ಟು ಯಶಸ್ಸನ್ನೂ ಕಂಡಿದೆ.

‘ಜನಾರ್ದನ ರೆಡ್ಡಿ ಜತೆಗಿಲ್ಲದಿರುವುದು ನೋವುಂಟು ಮಾಡಿದೆ’ ಎಂದು ಲಕ್ಷ್ಮೀ ಅರುಣಾ  ಕಣ್ಣೀರು ಹಾಕಿದ್ದು ಅನುಕಂಪದ ಮತಗಳನ್ನು ತಂದುಕೊಡಬಹುದೇ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಬಿಜೆಪಿಯು ಸಾಂಪ್ರದಾಯಿಕ ಮತಗಳ ಜತೆ, ಪ್ರಧಾನಿ ಮೋದಿ ಅವರ ವರ್ಚಸ್ಸನ್ನು ನಂಬಿಕೊಂಡಿದೆ.  ಕಾಂಗ್ರೆಸ್‌, ಕೆಆರ್‌ಪಿಪಿಯ ಅಬ್ಬರದ ನಡುವೆ ಸೋಮಶೇಖರ ರೆಡ್ಡಿ ತಣ್ಣಗೆ ಪ್ರಚಾರ ಮಾಡುತ್ತಿದ್ದಾರೆ. ‘ರೆಡ್ಡಿ, ಕೈಗೆ ಸಿಗುತ್ತಾರೆ. ಕರೆದಾಗ ಬರುತ್ತಾರೆ. ಸಮಸ್ಯೆ ಕೇಳುತ್ತಾರೆ’ ಎಂಬುದು ಅವರಿಗಿರುವ ಸಕಾರಾತ್ಮಕ ಅಂಶಗಳು. 

ಯಾವ ಜಾತಿ ಮತಗಳು ಯಾರಿಗೆ ಬೀಳುತ್ತವೆ ಎಂಬ ಲೆಕ್ಕಾಚಾರ ಬಳ್ಳಾರಿಯಲ್ಲಿ ಜೋರಾಗಿದೆ. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮಧ್ಯೆ  ತೀವ್ರ ಪೈಪೋಟಿ ಇದೆ. ಲಕ್ಷ್ಮೀ ಅರುಣಾ ಬಿಜೆಪಿ ಮತ್ತು ಕಾಂಗ್ರೆಸ್‌ ಮತಗಳಿಗೆ ಕೈಹಾಕಬಹುದು ಎಂದು ಹೇಳಲಾಗುತ್ತಿದೆ. ಜೆಡಿಎಸ್‌ ಅಭ್ಯರ್ಥಿ ಎಷ್ಟು ಮತ ಪಡೆಯಲಿದ್ದಾರೆ. ಅವರು ಪಡೆಯುವುದು ಯಾವ ಪಕ್ಷದ ಮತಗಳು ಎಂಬ ಅಂಶ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.