ಬಳ್ಳಾರಿ: ಒಳಮೀಸಲಾತಿ ಜಾರಿಗೆ ಅಗತ್ಯವಿರುವ ವೈಜ್ಞಾನಿಕ ಅಂಕಿ ಅಂಶಗಳನ್ನು ನಿರ್ಧರಿಸಲು ಸರ್ಕಾರ ಆಯೋಗ ರಚಿಸುವ ವಿಷಯವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೇಂದ್ರೀಕರಿಸಿವೆ. ಉಪಚುನಾವಣೆಯಲ್ಲಿ ಇದರ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದ್ದು, ಮತದಾರರ ಒಲವು ಗಳಿಸಲು ಪ್ರಯತ್ನ ನಡೆದಿದೆ.
‘ಒಳಮೀಸಲಾತಿ ನೀಡುವ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ. ಅದಕ್ಕೆ ಆಯೋಗ ರಚನೆ ಹೆಸರಿನಲ್ಲಿ ಕಾಲಹರಣ ಮಾಡುತ್ತಿದೆ’ ಎಂದು ಬಿಜೆಪಿ ನಾಯಕರು ಹೇಳಿದರೆ, ‘ಒಳಮೀಸಲಾತಿ ಜಾರಿಗೆಂದೇ ಆಯೋಗ ರಚಿಸಲು ನಿರ್ಧರಿಸಲಾಗಿದೆ’ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ.
ನವೆಂಬರ್ 1ರಿಂದ ಬಳ್ಳಾರಿ ಜಿಲ್ಲೆಯಲ್ಲೇ ಉಳಿದಿರುವ ಚಿತ್ರದುರ್ಗದ ಬಿಜೆಪಿ ಸಂಸದ ಗೋವಿಂದ ಕಾರಜೋಳ ಸಂಡೂರು ಕ್ಷೇತ್ರದಲ್ಲಿ ದಲಿತ ಮುಖಂಡರ ಸಭೆಗಳನ್ನು ನಡೆಸಿದ್ದಾರೆ. ಆಯೋಗ ರಚನೆಯಿಂದ ಒಳಮೀಸಲಾತಿ ಜಾರಿ ತಡವಾಗಲಿದೆ ಎಂಬ ವಿಚಾರವನ್ನು ಮತದಾರರಿಗೆ ದಾಟಿಸುವ ಪ್ರಯತ್ನ ಮಾಡಿದ್ದಾರೆ.
ಈ ಬೆಳವಣಿಗೆಯನ್ನು ಗಮನಿಸುತ್ತಿರುವ ಕಾಂಗ್ರೆಸ್ ಕೂಡ ದಲಿತ ಮುಖಂಡರ ಸಭೆಗಳನ್ನು ನಡೆಸುತ್ತಿದೆ. ಸ್ವತಃ ಸಚಿವ ಸಂತೋಷ ಲಾಡ್ ಅವರು ಸಭೆಯ ನೇತೃತ್ವ ವಹಿಸಿದ್ದು, ‘ನನ್ನ ಹಿಂದೆ ಸುತ್ತ ಬೇಡಿ. ನಿಮ್ಮ ಪ್ರಾಬಲ್ಯ ಇರುವ ಊರುಗಳಿಗೆ ಹೋಗಿ. ಒಳಮೀಸಲಾತಿಯ ವಾಸ್ತವ ಜನರಿಗೆ ತಿಳಿಸಿ’ ಎಂದು ತಿಳಿಸಿದ್ದಾರೆ.
ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ಸಂಡೂರಿನಲ್ಲಿ ದಲಿತ ಸಮುದಾಯದ ಮತಗಳು ಹೆಚ್ಚಿವೆ. ಹೀಗಾಗಿಯೇ ಒಳ ಮೀಸಲಾತಿ ವಿಷಯ ಸಂಡೂರಿನಲ್ಲಿ ರಾಜಕೀಯ ವಿಷಯವಾಗಿ ಮಾರ್ಪಟ್ಟಿದೆ.
ಒಳ ಮೀಸಲಾತಿಗೆ ಸಂಬಂಧಿಸಿದ ಕೋರ್ಟ್ ತೀರ್ಪು ಪಾಲಿಸಲು ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಅವರಿಗೆ ಹೇಳಬೇಕಿತ್ತು. ಆದರೆ, ದಲಿತರು ವೋಟ್ ಬ್ಯಾಂಕ್ ಆಗುವುದು ಅವರಿಗೂ ಬೇಕಿದೆ.ಗೋವಿಂದ ಕಾರಜೋಳ, ಸಂಸದ
ಒಳಮೀಸಲಾತಿಗೆ ಕಾಂಗ್ರೆಸ್ ಬದ್ಧವಿದೆ. ಇದಕ್ಕಾಗಿ ಆಯೋಗ ರಚನೆಗೆ ನಿರ್ಧರಿಸಲಾಗಿದೆ. ನೇಮಕಾತಿ ಪ್ರಕ್ರಿಯೆಗಳನ್ನು ಸರ್ಕಾರ ತಡೆ ಹಿಡಿದಿದೆ. 3 ತಿಂಗಳಲ್ಲಿ ವರದಿ ಸಿದ್ದವಾಗಲಿದ್ದು, ಜಾರಿಯೂ ಆಗಲಿದೆ.ವೆಂಕಟೇಶ ಹೆಗಡೆ, ಕೆಪಿಸಿಸಿ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.