ADVERTISEMENT

ಸಂಡೂರು, ಶಿಗ್ಗಾವಿ: ಶಾಂತಿಯುತ ಮತದಾನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 15:52 IST
Last Updated 13 ನವೆಂಬರ್ 2024, 15:52 IST
ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಹುಲಗೂರಿನಲ್ಲಿ ವೃದ್ಧೆಯೊಬ್ಬರು ಗಾಲಿಕುರ್ಚಿಯಲ್ಲಿ ಮತಗಟ್ಟೆಗೆ ಬಂದು, ಮತ ಚಲಾಯಿಸಿದರು – ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ
ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಹುಲಗೂರಿನಲ್ಲಿ ವೃದ್ಧೆಯೊಬ್ಬರು ಗಾಲಿಕುರ್ಚಿಯಲ್ಲಿ ಮತಗಟ್ಟೆಗೆ ಬಂದು, ಮತ ಚಲಾಯಿಸಿದರು – ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ   

ಸಂಡೂರು/ಶಿಗ್ಗಾವಿ: ಬಳ್ಳಾರಿ ಜಿಲ್ಲೆಯ ಸಂಡೂರು ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬುಧವಾರ ಶಾಂತಿಯುತ ಮತದಾನ ನಡೆಯಿತು.

ಒಟ್ಟು 2,36,402 ಮತದಾರರ ಪೈಕಿ 1,80,189 ಮತದಾನ ಮಾಡಿದ್ದಾರೆ. ಇದರಲ್ಲಿ 90,922 ಮಂದಿ ಪುರುಷ ಮತ್ತು 89,252 ಮಂದಿ ಮಹಿಳಾ ಮತದಾರರು, 12 ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ.  

ಇದೇ ಕ್ಷೇತ್ರದಲ್ಲಿ, 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ವೇಳೆ ಶೇ 77.07ರಷ್ಟು ಮತದಾನವಾಗಿತ್ತು. ಕಳೆದ ಲೋಕಸಭಾ ಚುನಾವಣೆ ವೇಳೆ ಶೇ.75.16 ರಷ್ಟು ಮತದಾನವಾಗಿತ್ತು. 

ADVERTISEMENT

ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ, ಸಂಸದ ಇ.ತುಕಾರಾಂ ಕುಟುಂಬ ಸಮೇತರಾಗಿ ಪಟ್ಟಣದ‌ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಕಚೇರಿಯಲ್ಲಿ ಮತದಾನ ಮಾಡಿದರು. ಕಾರ್ಮಿಕ‌ ಸಚಿವ ಸಂತೋಷ್ ಲಾಡ್ ತಾಯಿ ಶೈಲಜಾ ಎಸ್.ಲಾಡ್ ಹಾಗೂ ಸಹೋದರಿ ಸುಜಾತಾ ಲಾಡ್ ಕೂಡ ಇದೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರು ಮತಗಟ್ಟೆಗಳನ್ನು ಪರಿಶೀಲಿಸಿದರು.

ಶಿಗ್ಗಾವಿಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮತ ಚಲಾಯಿಸುವವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿತ್ತು. ಸವಣೂರು ಪಟ್ಟಣದ ದಂಡಿನಪೇಟೆಯ 50ಕ್ಕೂ ಹೆಚ್ಚು ಮತದಾರರು, ‘ನಮಗೆ ಮನೆಯ ಹಕ್ಕುಪತ್ರ ನೀಡಿಲ್ಲ’ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿದರು. ಇದನ್ನು ತಿಳಿದ ತಹಶೀಲ್ದಾರ್‌, ಸ್ಥಳಕ್ಕೆ ಬಂದು ಮತದಾರರ ಮನವೊಲಿಸಿದರು. ಆಗ ಕೆಲವರು ಮತ ಚಲಾಯಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ, ಶಿಗ್ಗಾವಿ ಪಟ್ಟಣದಲ್ಲಿರುವ ಮತಗಟ್ಟೆ ಸಂಖ್ಯೆ–104ರಲ್ಲಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ತಮ್ಮ ತಂದೆ ಸಂಸದ ಬಸವರಾಜ ಬೊಮ್ಮಾಯಿ ಜೊತೆ ಶಿಗ್ಗಾವಿಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ-1ರ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.