ADVERTISEMENT

ತೆಕ್ಕಲಕೋಟೆ: 3 ವರ್ಷ ಕಳೆದರೂ ಮುಗಿಯದ ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿ

ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 6:13 IST
Last Updated 16 ಅಕ್ಟೋಬರ್ 2024, 6:13 IST
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಿರುವ ಹೆಚ್ಚುವರಿ ಕೊಠಡಿಗಳ ಕಟ್ಟಡ
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಿರುವ ಹೆಚ್ಚುವರಿ ಕೊಠಡಿಗಳ ಕಟ್ಟಡ   

ತೆಕ್ಕಲಕೋಟೆ : ಸಮೀಪದ ಕರೂರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಹೆಚ್ಚುವರಿ ಕೊಠಡಿಗಳ ಕಾಮಗಾರಿ ಆರಂಭವಾಗಿ ಮೂರು ವರ್ಷ ಕಳೆದರೂ ಪೂರ್ಣಗೊಳ್ಳದೆ ಆಸ್ಪತ್ರೆಗೆ ಬರುವ ರೋಗಿಗಳು ನಿತ್ಯವೂ ಪರದಾಡುವಂತಾಗಿದೆ.

2019-20ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದ ಅಡಿಯಲ್ಲಿ ₹40 ಲಕ್ಷ ವೆಚ್ಚದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳದ ಕಾರಣ ಹೆಚ್ಚುವರಿ ಅನುದಾನ ₹ 6.75 ಲಕ್ಷ ಬಿಡುಗಡೆ ಆಗಿದ್ದರೂ, ರೋಗಿಗಳು ಬೆಡ್ ಸಿಗದೆ ನೆಲದ ಮೇಲೆ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುತ್ತಲಿನ 18 ಗ್ರಾಮಗಳ ಸಾರ್ವಜನಿಕರು ಚಿಕಿತ್ಸೆ ಪಡೆಯಲು ಬರುವುದು ಸಾಮಾನ್ಯ, ಅಲ್ಲದೆ ತಿಂಗಳಿಗೆ 25-30 ಹೆರಿಗೆ, ದಿನಕ್ಕೆ ಕನಿಷ್ಠ 200ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಾರೆ. ಆದರೆ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಮುಗಿಯದೇ ನಿತ್ಯವೂ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ADVERTISEMENT

ಕಟ್ಟಡ ಕಾಮಗಾರಿ ವಿಳಂಬ ಕುರಿತಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಮಿಶ್ರ ಅವರಿಗೆ ದೂರು ಸಲ್ಲಿಸಿದ್ದರು.
ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಮರು ಟೆಂಡರ್ ಕರೆದು 2024 ಮಾರ್ಚ್ ಒಳಗೆ ಕಾಮಗಾರಿಯನ್ನು ಮುಗಿಸುವಂತೆ ಜಿ.ಪಂ. ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಜಿಲ್ಲಾಧಿಕಾರಿಗಳ ಸೂಚನೆಯ ನಂತರವೂ ಕಾಮಗಾರಿ ಮುಗಿಯದೆ ಕೊಠಡಿಗಳ ಬಣ್ಣ ಹಚ್ಚುವುದು, ನೀರಿನ ಸೌಲಭ್ಯ, ವಿದ್ಯುತ್, ಫ್ಯಾನ್‌, ಬಾಗಿಲು ಅಳವಡಿಸುವ ಕಾರ್ಯ ಮುಗಿಯದೆ ಹೆಚ್ಚುವರಿಯಾಗಿ ನೀಡಿದ ₹ 6.75 ಲಕ್ಷ ಅನುದಾನವೂ ನಿರರ್ಥಕ ಎಂಬಂತಾಗಿದೆ.

2024 ರ ಮಾರ್ಚ್ ಒಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದ ಜಿ.ಪಂ. ಎಂಜಿನಿಯರಿಂಗ್ ಉಪ-ವಿಭಾಗದ ಇಲಾಖೆಯ ಅಧಿಕಾರಿಗಳು ಈಗ ಇತ್ತ ಸುಳಿಯುತ್ತಲೆ ಇಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇದರಿಂದಾಗಿ ನಿತ್ಯವೂ ವಿವಿಧ ಗ್ರಾಮಗಳಿಂದ ಬರುವ ರೋಗಿಗಳು, ಗರ್ಭಿಣಿಯರು, ಬಾಣಂತಿಯರು ಸಮಸ್ಯೆ ಅನುಭವಿಸುವಂತಾಗಿದೆ.

ವಾರದೊಳಗೆ ಬಾಕಿ ಕಾಮಗಾರಿ ಮುಗಿಸಿ ಆಸ್ಪ್ಪತ್ರೆಗೆ ಹಸ್ತಾಂತರ ಮಾಡುವುದಾಗಿ ಜಿ.ಪಂ. ಇಲಾಖೆಯ ಜೆ.ಇ. ಕಾಂತರಾಜ್ ತಿಳಿಸಿದ್ದಾರೆ. ಅಪೂರ್ಣ ಕಾಮಗಾರಿಯಿಂದ ಹೊಸ ಕಟ್ಟಡವನ್ನು ಹಸ್ತಾಂತರ ಮಾಡಿಕೊಂಡಿಲ್ಲ ಶೀಘ್ರ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಟಿ.ಹೆಚ್.ಒ. ಡಾ.ವೀರೇಂದ್ರ ಕುಮಾರ್
ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಆಸ್ಪತ್ರೆಗೆ ಹಸ್ತಾಂತರ ಮಾಡಬೇಕು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಅಪೂರ್ಣವಾಗಿದ್ದು ದಿನನಿತ್ಯ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನಾನುಕೂಲವಾಗುತ್ತಿದೆ.
ವೈ.ಕೃಷ್ಣರೆಡ್ಡಿ ಕರೂರು ಗ್ರಾಮಸ್ಥ
ಕರೂರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಹೆಚ್ಚುವರಿ ಕೊಠಡಿಗಳಲ್ಲಿ ಫ್ಯಾನ್‌ಗಳನ್ನು ಅಳವಡಿಸಿದೆ ನೆಲದ ಮೇಲೆ ಇಟ್ಟಿರುವುದು
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಿರುವ ಹೆಚ್ಚುವರಿ ಕೊಠಡಿಗಳ ಕಟ್ಟಡದ ಒಳಾಂಗಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.