ADVERTISEMENT

ಬಳ್ಳಾರಿ: ‘ದೇವದಾರಿ’ ಸಿಕ್ಕರೂ ನೀಗದು ಬೇಡಿಕೆ

ಹಣಕಾಸು ಇಲಾಖೆ ಅಧ್ಯಕ್ಷತೆಯಲ್ಲಿ ನಡೆದಿದ್ದ ಪಿಐಬಿ ಸಭೆಯಿಂದ ಮಾಹಿತಿ ಬಹಿರಂಗ

ಆರ್. ಹರಿಶಂಕರ್
Published 15 ಅಕ್ಟೋಬರ್ 2024, 0:47 IST
Last Updated 15 ಅಕ್ಟೋಬರ್ 2024, 0:47 IST
.
.   

ಬಳ್ಳಾರಿ: ‘ಸಂಡೂರಿನ ದೇವದಾರಿ ಕಬ್ಬಿಣದ ಅದಿರು ಗಣಿ’ಗೆ ಅನುಮತಿ ಸಿಕ್ಕರೂ ಕುದುರೆಮುಖ ಕಬ್ಬಿಣ ಅದಿರು ಕಂಪನಿಯ (ಕೆಐಒಸಿಎಲ್‌) ಪಣಂಬೂರು ಪೆಲೆಟ್‌ ಕಾರ್ಖಾನೆಗೆ ಅಗತ್ಯವಿರುವ ಅದಿರು ಪೂರ್ಣಪ್ರಮಾಣದಲ್ಲಿ ಸಿಗುವುದಿಲ್ಲ. ಗಣಿ ಆರಂಭವಾದರೂ ಸಂಡೂರು ಭಾಗದಲ್ಲಿ ಯಾರಿಗೂ ಕಾಯಂ ಉದ್ಯೋಗ ಸಿಗಲ್ಲ’ ಎಂಬ ವಿಷಯವನ್ನು ಕೇಂದ್ರ ಉಕ್ಕು ಸಚಿವಾಲಯವು ಹಣಕಾಸು ಇಲಾಖೆಗೆ ತಿಳಿಸಿದೆ.    

ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಅರಣ್ಯದ 401.57 ಹೆಕ್ಟೇರ್ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣದ ಕಾರ್ಖಾನೆ ‘ದೇವದಾರಿ ಕಬ್ಬಿಣದ ಅದಿರುವ ಗಣಿ’ ನಡೆಸಲು ಉದ್ದೇಶಿಸಿದೆ. ಈ ಗಣಿ ಕುರಿತು ಜೂನ್‌ 6ರಂದು ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಸಭೆ ನವದೆಹಲಿಯಲ್ಲಿ ನಡೆದಿತ್ತು. ಈ ಸಭೆಗೆ ಉಕ್ಕು ಸಚಿವಾಲಯ ಗಣಿ ಅನುಮೋದನೆ ಕೋರಿ ಪ್ರಸ್ತಾವ ಸಲ್ಲಿಸಿತ್ತು.  

ಈ ಸಭೆಯಲ್ಲಿ ನೀತಿ ಆಯೋಗ, ಕೇಂದ್ರದ ವೆಚ್ಚ ವಿಭಾಗಗಳು ಕೇಳಿದ ಪ್ರಶ್ನೆಗಳು, ನೀಡಿದ ಸಲಹೆಗಳು, ಉಕ್ಕು ಇಲಾಖೆ ನೀಡಿದ ಉತ್ತರ ಸೇರಿ ಇಡೀ ನಡಾವಳಿ ಮತ್ತು ದಾಖಲೆಗಳು ಆರ್‌ಟಿಐ ಅಡಿಯಲ್ಲಿ ‘ಪ್ರಜಾವಾಣಿ’ಗೆ ಲಭ್ಯವಾಗಿವೆ.  

ADVERTISEMENT

ನೀಗದು ಬೇಡಿಕೆ: ದೇವದಾರಿ ಗಣಿ ಆರಂಭವಾದರೂ ಅಲ್ಲಿ ಸಿಗುವ ಅದಿರಿನ ಪ್ರಮಾಣ ವರ್ಷಕ್ಕೆ 1.6 ದಶಲಕ್ಷ ಟನ್‌ ಮಾತ್ರ. ಆದರೆ, ಮಂಗಳೂರಿನ ಕೆಐಒಸಿಎಲ್‌ ಪೆಲೆಟ್‌ (ಕಬ್ಬಿಣದ ಸಣ್ಣ ಗುಂಡುಗಳ) ಕಾರ್ಖಾನೆ ನಡೆಯಲು ವಾರ್ಷಿಕ 3.5 ದಶಲಕ್ಷ ಟನ್‌ ಬೇಕು. ಹೀಗಿದ್ದ ಮೇಲೆ ಗಣಿಯು ಕಾರ್ಖಾನೆಯ ಬೇಡಿಕೆಯನ್ನೂ ಪೂರೈಸಬಲ್ಲದೇ? ಅಧಿಕ ಪ್ರಮಾಣದ ರಾಯಧನ ನೀಡಿ ಗಣಿ ಪಡೆಯುವುದಕ್ಕಿಂತಲೂ, ಕಡಿಮೆ ದರದಲ್ಲಿ ಅದಿರು ಕೊಂಡು ಲಾಭ ಮಾಡಬಾರದು ಏಕೆ ಎಂದು ನೀತಿ ಆಯೋಗವು ಉಕ್ಕು ಸಚಿವಾಲಯವನ್ನು ಪ್ರಶ್ನಿಸಿದೆ. 

ಇದಕ್ಕೆ ಉತ್ತರಿಸಿದ ಸಚಿವಾಲಯ, ‘ಮಂಗಳೂರಿನ ಕಾರ್ಖಾನೆಗೆ ಈ ಗಣಿಯು ಭಾಗಶಃ ಕಚ್ಚಾವಸ್ತು ಮಾತ್ರ ಪೂರೈಸಲಿದೆ. ಇನ್ನುಳಿದ ಕಚ್ಚಾವಸ್ತುವನ್ನು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಿಂದ (ಎನ್‌ಎಂಡಿಸಿ) ಪಡೆಯುವುದಾಗಿಯೂ, ಎನ್‌ಎಂಡಿಸಿ ಜತೆಗಿನ ದೀರ್ಘಕಾಲಿನ ಒಪ್ಪಂದವು ಕಂಪನಿಗೆ ನೆರವಾಗುವುದು’ ಎಂದು ಹೇಳಿದೆ. 

ಗುತ್ತಿಗೆ ನೌಕರಿ: ‘ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಸುತ್ತಲ ಪ್ರದೇಶದಲ್ಲಿ ಸಾಮಾಜಿಕ–ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ. ಯೋಜನೆಯು ಸಂಡೂರು ಭಾಗದ 1,200 ಮಂದಿಗೆ ‘ಪರೋಕ್ಷ ಉದ್ಯೋಗ’ ನೀಡುವ ಸಾಧ್ಯತೆಗಳಿವೆ. ಗಣನೀಯ ಪ್ರಮಾಣದ ಜನರಿಗೆ ‘ಗುತ್ತಿಗೆ ಆಧಾರ’ದಲ್ಲಿ ನೌಕರಿ ನೀಡಲಾಗುವುದು’ ಎಂದು ಹೇಳಿದೆ. ಆದರೆ, ಕಾಯಂ ನೌಕರಿ ನೀಡುವ ಬಗ್ಗೆ ತನ್ನ ಪ್ರಸ್ತಾವನೆಯಲ್ಲಿ ಉಕ್ಕು ಸಚಿವಾಲಯ ಯಾವುದೇ ಉಲ್ಲೇಖ ಮಾಡಿಲ್ಲ.  

ಬಂಡವಾಳ ಹಿಂತೆಗೆತದ ಪ್ರಶ್ನೆ?: ಕೆಐಒಸಿಎಲ್‌ನಲ್ಲಿನ ಬಂಡಾವಳ ಹಿಂತೆಗೆತಕ್ಕೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸಿರುವ ಬಗ್ಗೆ ನೀತಿ ಆಯೋಗ ಪ್ರಶ್ನೆ ಮಾಡಿತ್ತು. ಇದಕ್ಕೆ ಉತ್ತರಿಸಿದ್ದ ಕೇಂದ್ರ ಉಕ್ಕು ಸಚಿವಾಲಯದ ಅಧಿಕಾರಿಗಳು, ‘ಕೆಐಒಸಿಎಲ್‌ ಸದ್ಯ ಕಾರ್ಯಸಾಧುವಲ್ಲದ ಸಾರ್ವಜನಿಕ ವಲಯದ ಉದ್ದಿಮೆಗಳ ವಲಯದಲ್ಲಿದೆ. ಭವಿಷ್ಯದಲ್ಲಿ ಸರ್ಕಾರ ಕಂಪನಿಯ ಬಂಡವಾಳ ಹಿಂಪಡೆದರೆ ಮುಂದಿನ ಪ್ರಕ್ರಿಯೆಗಳಿಗೆ ನಾವು ಬದ್ಧವಾಗಿರುತ್ತೇವೆ’ ಎಂದು ಹೇಳಿದೆ.

ಸಾರ್ವಜನಿಕ ಉದ್ದಿಮೆ ಕೆಐಒಸಿಎಲ್‌ ಅನ್ನು ಮಾರಾಟ ಮಾಡಿದರೆ, ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಪ್ರಕಾರ ಸಂಸ್ಥೆ ಜತೆಗೆ ಗಣಿ ಗುತ್ತಿಗೆಯೂ ವರ್ಗಾವಣೆಯಾಗುತ್ತದೆ. 

ಈ ಕುರಿತ ಪ್ರತಿಕ್ರಿಯೆಗಾಗಿ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರ ಸಂಪರ್ಕ ಸಾಧ್ಯವಾಗಲಿಲ್ಲ. 

ಗುತ್ತಿಗೆ ಆಧಾರದ 300 ನೌಕರರಿಗೆ ಪರ್ಯಾಯ ವ್ಯವಸ್ಥೆ ಮಾಡಬಹುದು. ಕಾಯಂಗೊಳಿಸಬಹುದು. ಆದರೆ 99330 ಮರಗಳ ಕಾಡು ಬೆಳೆಸಲು ಕೇಂದ್ರ ಅಥವಾ ಕುಮಾರಸ್ವಾಮಿ ಅವರಿಗೆ ಸಾಧ್ಯವೇ?
ಕರೂರು ಮಾಧವ ರೆಡ್ಡಿ, ಅಧ್ಯಕ್ಷ ರಾಜ್ಯ ರೈತ ಸಂಘ ಬಳ್ಳಾರಿ

₹500 ಕೋಟಿ ಖರ್ಚು: ವಾಣಿಜ್ಯ ನಿರ್ಧಾರ ಎಂದ ಸಚಿವಾಲಯ  

ಯೋಜನೆಗೆ ಅನುಮೋದನೆ ಪಡೆಯಲು ಕೆಐಒಸಿಎಲ್‌ ಈವರೆಗೆ ₹500 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿರುವುದಾಗಿ ಹಣಕಾಸು ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವದಲ್ಲಿ ಹೇಳಿದೆ. ಇದನ್ನು ಗಮನಿಸಿದ ಕೇಂದ್ರ ವೆಚ್ಚ ವಿಭಾಗದ ಸಲಹೆಗಾರರು ‘ಸಾರ್ವಜನಿಕ ಉದ್ಯಮವೊಂದು ಭಾರಿ ಪ್ರಮಾಣದ ಹಣವನ್ನು ಖರ್ಚು ಮಾಡಿದೆ. ಇದಕ್ಕೆ ವಿವರಣೆ ಬೇಕು’ ಎಂದಿತ್ತು.  ಇದಕ್ಕೆ ಪ್ರತಿಕ್ರಿಯಿಸಿದ್ದ ಉಕ್ಕು ಸಚಿವಾಲಯ ‘ನಿಗದಿತ ಅವಧಿಯಲ್ಲಿ ಗಣಿಯನ್ನು ಹೊಂದಲು  ಕೆಐಒಸಿಎಲ್‌ ಕೆಲ ‘ವಾಣಿಜ್ಯ ನಿರ್ಧಾರ’ಗಳನ್ನು ಕೈಗೊಂಡಿದೆ’ ಎಂದು ಹೇಳಿದೆ. ಆದರೆ ‘ಕೆಲ ವಾಣಿಜ್ಯ ನಿರ್ಧಾರ’ಗಳು ಎಂದರೆ ಏನು ಎಂಬುದರ ಬಗ್ಗೆ ಉಕ್ಕು ಸಚಿವಾಲಯ ವಿವರಿಸಿಲ್ಲ. 

‘ಎನ್‌ಎಂಡಿಸಿ ಇರುವಾಗ ಗಣಿ ಏಕೆ?’ 

ಕೇಂದ್ರದ ಉಕ್ಕು ಸಚಿವಾಲಯದಡಿ ಬರುವ ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ’ (ಎನ್‌ಎಂಡಿಸಿ) ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಎರಡು ಗಣಿಗಳನ್ನು ಹೊಂದಿದೆ. ಎರಡರಿಂದಲೂ ವಾರ್ಷಿಕ 15.62 ದಶಲಕ್ಷ ಟನ್‌ ಅದಿರನ್ನು ಉತ್ಪಾದಿಸಲಾಗುತ್ತಿದೆ.  ಜಿಂದಾಲ್‌ ಆರ್ಸೆಲರ್‌ ಮಿತ್ತಲ್‌ ಸೇರಿ ಹೊರರಾಜ್ಯದ ಖಾಸಗಿ ಕಂಪನಿಗಳಿಗೆ ಇದು ಅದಿರು ಮಾರುತ್ತಿದೆ. ಕೆಐಒಸಿಎಲ್‌ಗೂ ಅದಿರು ಪೂರೈಸುತ್ತಿದೆ.   ‘ಕೆಐಒಸಿಎಲ್‌ ಮತ್ತು ಎನ್‌ಎಂಡಿಸಿ ಎರಡೂ ಉಕ್ಕು ಸಚಿವಾಲಯದಡಿ ಬರುವ ಕಂಪನಿಗಳು. ಎನ್‌ಎಂಡಿಸಿ ಬಳಿ ಯಥೇಚ್ಚ ಅದಿರು ಇದೆ. ಕೆಐಒಸಿಎಲ್‌ಗೂ ಅದಿರು ನೀಡುತ್ತಿದೆ. ಖಾಸಗಿ ಸಂಸ್ಥೆಗಳಿಗೂ ಮಾರುತ್ತಿದೆ. ಕೆಐಒಸಿಎಲ್‌ಗೆ ಹೊಸ ಗಣಿ ಹೆಸರಲ್ಲಿ ಭಾರಿ ಪ್ರಮಾಣದ ಅರಣ್ಯ ಪ್ರದೇಶ ನೀಡುವ ಬದಲು ಪೂರ್ಣಪ್ರಮಾಣದ ಅದಿರನ್ನು ಎನ್‌ಎಂಡಿಸಿಯಿಂದಲೇ ಏಕೆ ಪೂರೈಸಬಾರದು’ ಎಂದು ಜನಸಂಗ್ರಾಮ ಪರಿಷತ್‌ನ ಮುಖಂಡ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಗಾರ ಶ್ರೀಶೈಲ ಆಲದಹಳ್ಳಿ ಪ್ರಶ್ನಿಸಿದ್ದಾರೆ.  ‘ಖಾಸಗೀಕರಣದ ಅಂಚಿನಲ್ಲಿರುವ ಕಂಪನಿಯೊಂದಕ್ಕೆ ದಟ್ಟ ಅರಣ್ಯಪ್ರದೇಶದಲ್ಲಿ ಗಣಿ ಒದಗಿಸಿಕೊಟ್ಟರೆ ಮುಂದೊಂದು ದಿನ ಕಂಪನಿಯೊಂದಿಗೆ ಅರಣ್ಯವೂ ಖಾಸಗಿಯವರ ಪಾಲಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.