ADVERTISEMENT

ದೇವದಾರಿ ಗಣಿಗಾರಿಕೆ ವಿರೋಧಿಸಿದ್ದ ಅರಣ್ಯ ಇಲಾಖೆ

ಆರ್. ಹರಿಶಂಕರ್
Published 15 ಜೂನ್ 2024, 23:56 IST
Last Updated 15 ಜೂನ್ 2024, 23:56 IST
ಕೆಐಒಸಿಎಲ್‌ ಗಣಿ ನಡೆಸಲಿರುವ ಪ್ರದೇಶದ ಉಪಗ್ರಹ ಚಿತ್ರ 
ಕೆಐಒಸಿಎಲ್‌ ಗಣಿ ನಡೆಸಲಿರುವ ಪ್ರದೇಶದ ಉಪಗ್ರಹ ಚಿತ್ರ    

ಬಳ್ಳಾರಿ: ಸಂಡೂರಿನ ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಕೇಂದ್ರ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಸಮ್ಮತಿಸಿದ್ದಾರೆ. ಆದರೆ, ಈ ಗಣಿಗಾರಿಕೆಗೆ ರಾಜ್ಯ ಅರಣ್ಯ ಇಲಾಖೆ ಈ ಹಿಂದೆಯೇ ತೀವ್ರ ವಿರೋಧ ವ್ಯಕ್ತಪಡಿಸಿದೆ.

‘ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದ ಒಟ್ಟು 485.77 ಹೆಕ್ಟೇರ್‌ (470.40 ಹೆಕ್ಟೇರ್‌–ಗಣಿಗಾರಿಕೆ, ರಸ್ತೆ ನಿರ್ಮಾಣಕ್ಕೆ ಮತ್ತು 15.37 ಹೆಕ್ಟೇರ್‌–ಇತರೆ ಉದ್ದೇಶಕ್ಕೆ) ಅರಣ್ಯ ಪ್ರದೇಶದಲ್ಲಿ ಕುದುರೆಮುಖ ಐರನ್‌ ಓರ್‌ ಕಂಪನಿ (ಕೆಐಒಸಿಎಲ್‌) ಕೈಗೊಳ್ಳುವ ಗಣಿಗಾರಿಕೆ, ರಸ್ತೆ ನಿರ್ಮಾಣ ಮತ್ತು ಪೂರಕ ಚಟುವಟಿಕೆಗಳಿಂದ ಅರಣ್ಯ, ಜೀವವೈವಿಧ್ಯ, ಪರಿಸರ ಹಾಗೂ ಜನಜೀವನಕ್ಕೆ ಹಾನಿಯಾಗಲಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರ ನೀಡಿದ ದಾಖಲೆಗಳಿಂದ ಇದು ಗೊತ್ತಾಗಿದ್ದು, ಆ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.  

ಸ್ವಾಮಿಮಲೈ ಅರಣ್ಯದಲ್ಲಿ ಗಣಿಗಾರಿಕೆಗಾಗಿ ಕೆಐಒಸಿಎಲ್‌ಗೆ  470.40 ಹೆಕ್ಟೇರ್ ಪ್ರದೇಶ ಮೀಸಲಿಟ್ಟು 2017ರ ಜನವರಿ 23ರಂದು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಕಂಪನಿಯು ಅರಣ್ಯ ಅನುಮತಿ (ಎಫ್‌ಸಿ) ಕೋರಿ 2018ರ ಮಾರ್ಚ್‌ 16ರಂದು ಇಲಾಖೆಗೆ ಮನವಿ ಸಲ್ಲಿಸಿತ್ತು. ಅದನ್ನು ಅರಣ್ಯ ಇಲಾಖೆಯ ನೋಡಲ್‌ ಅಧಿಕಾರಿ ಅದೇ ವರ್ಷದ ಆಗಸ್ಟ್ 30ರಂದು ಬಳ್ಳಾರಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ (ಡಿಸಿಎಫ್‌) ರವಾನಿಸಿದ್ದರು.  2019ರ ಜೂನ್‌ 9 ಮತ್ತು ಸೆಪ್ಟೆಂಬರ್ 25ರಂದು ಡಿಸಿಎಫ್‌ ಸ್ಥಳ ಪರಿಶೀಲಿಸಿದ್ದರು. 

ADVERTISEMENT

ನಂತರ ಅವರು, ‘ಈ ಯೋಜನೆಯನ್ನು ಒಪ್ಪಬಾರದು. ಅರಣ್ಯ ಸಂರಕ್ಷಣೆ ಕಾಯ್ದೆ 1980ರಡಿ ಅನುಮತಿ ನೀಡಲು ಪರಿಗಣಿಸಲೂ ಬಾರದು’ ಎಂದು ಸ್ಪಷ್ಟವಾಗಿ ಹೇಳಿ ತಮ್ಮ ವರದಿಯಲ್ಲಿ ಹಲವು ಕಾರಣಗಳನ್ನು ನೀಡಿದ್ದರು. 

ಡಿಸಿಎಫ್‌ ವರದಿ ಆಧರಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) 2019ರ ಡಿಸೆಂಬರ್ 6ರಂದು ಸ್ಥಳ ಪರಿಶೀಲನೆ ನಡೆಸಿ,  ‘ಅಸ್ತಿತ್ವದಲ್ಲಿರುವ ಗಣಿಗಳಿಂದ ಈಗಾಗಲೇ ಈ ಪ್ರದೇಶ ತೀವ್ರ ಹಾನಿಗೀಡಾಗಿದೆ. ಇಲ್ಲಿನ ಅರಣ್ಯ, ವನ್ಯಜೀವಿ, ಜಲ ಭದ್ರತೆ ಮತ್ತು ಮಣ್ಣಿನ ಆರೋಗ್ಯದ ‌ಹಿತದೃಷ್ಟಿಯಿಂದ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ನಾನು ಶಿಫಾರಸು ಮಾಡುತ್ತೇನೆ’ ಎಂದು  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ಎಪಿಸಿಸಿಎಫ್) ವರದಿ ಸಲ್ಲಿಸಿದ್ದರು. 

ಅಂತಿಮವಾಗಿ ಡಿಸಿಎಫ್‌, ಸಿಸಿಎಫ್‌, ಕೆಐಒಸಿಎಲ್‌ ಅಧಿಕಾರಿಗಳು ಮತ್ತು ಇತರರ ಜತೆಗೆ 2020ರ ಜನವರಿ 16ರಂದು ಸ್ಥಳ ಪರಿಶೀಲಿಸಿದ ಎಪಿಸಿಸಿಎಫ್‌, ‘ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಗಣಿಗೆ ಅನುಮತಿ ನೀಡಬಾರದು’ ಎಂದು ಶಿಫಾರಸು ಮಾಡಿದ್ದರು. ಜತೆಗೆ, ಡಿಸಿಎಫ್‌ ಮತ್ತು ಸಿಸಿಎಫ್‌ ನೀಡಿದ್ದ ವರದಿಯನ್ನು ಅವರು ಎತ್ತಿ ಹಿಡಿದಿದ್ದರು. 

ರಾಜ್ಯ ಅರಣ್ಯ ಇಲಾಖೆಯ ಪ್ರತಿರೋಧವನ್ನೂ ಮೀರಿ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಕೆಐಒಸಿಎಲ್‌ನ  ‘ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆಗೆ 2021 ಆಗಸ್ಟ್ 13ರಂದು ಪರಿಸರ ಅನುಮತಿ (ಸ್ಟೇಜ್‌–1) ಮಂಜೂರು ಮಾಡಿತು.  ಅಲ್ಲದೆ, 2022ರ ಡಿಸೆಂಬರ್ 16ರಂದು ಅಂತಿಮ ಅನುಮತಿಯನ್ನೂ (ಸ್ಟೇಜ್‌–2) ನೀಡಿದೆ. 2023ರ ಜನವರಿ 13ರಂದು ರಾಜ್ಯ ಸರ್ಕಾರ ಮತ್ತು ಕೆಐಒಸಿಎಲ್‌ ನಡುವೆ ಗುತ್ತಿಗೆ ಕರಾರು ಕೂಡ ಆಗಿದೆ.  

‘ಗಣಿಗಾರಿಕೆಗೆ ಅನುಮತಿ ನೀಡಿದರೆ ಅಪಾರ ಹಾನಿಯಾಗಲಿದೆ ಎಂದು ರಾಜ್ಯ ಅರಣ್ಯ ಇಲಾಖೆಯ ವಿವಿಧ ಹಂತಗಳ ಅಧಿಕಾರಿಗಳು ವರದಿ ನೀಡಿರುವುದಾಗಿ ಸರ್ಕಾರವೇ ಒದಗಿಸಿದ ದಾಖಲೆಗಳು ಹೇಳುತ್ತಿವೆ. ಈ ವರದಿಗಳು ಏನಾದವು? ಕೇಂದ್ರ ಸರ್ಕಾರ ಯಾವ ಆಧಾರದಲ್ಲಿ ಗಣಿಗಾರಿಕೆಗೆ ಎರಡು ಹಂತದ ಅನುಮತಿ ನೀಡಿದೆ’ ಎಂದು ಪರಿಸರ ಹೋರಾಟಗಾರರು ಪ್ರಶ್ನಿಸಿದ್ದಾರೆ.

ಕೆಐಒಸಿಎಲ್‌ ಗಣಿ ನಡೆಸಲಿರುವ ಪ್ರದೇಶದ ಯೋಜನಾ ವಿವರ 
ಕೆಐಒಸಿಎಲ್‌ ಗಣಿಗಾರಿಕೆಗೆ ಅನುಮತಿ ನೀಡದಂತೆ ಅರಣ್ಯ ಇಲಾಖೆಯ ವಿವಿಧ ಹಂತಗಳ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹೀಗಿದ್ದೂ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲು ಹೇಗೆ ಸಾಧ್ಯ?
ಶ್ರೀಶೈಲ ಆಲದಹಳ್ಳಿ ಜನಸಂಗ್ರಾಮ ಪರಿಷತ್‌
ತೀರ್ಮಾನ ಕೈಗೊಳ್ಳುವ ಅಧಿಕಾರ ಅಧಿಕಾರಿಗಳಿಗೆ ಇರುವುದಿಲ್ಲ. ಅದೇನಿದ್ದರೂ ಸರ್ಕಾರಕ್ಕೆ ಸಂಬಂಧಿಸಿದ ವಿಷಯ. ನಿರ್ಧಾರಗಳ ಬಗ್ಗೆ ಸರ್ಕಾರದ ಹಂತದಲ್ಲೇ ಪರಿಶೀಲಿಸಬೇಕು.
– ಚಂದ್ರಶೇಖರ ನಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ ವೃತ್ತ

ಅರಣ್ಯ ಇಲಾಖೆಯಿಂದ ಏಕೆ ಆಕ್ಷೇಪ?

  • ಉದ್ದೇಶಿತ ಗಣಿ ಪ್ರದೇಶ ಸ್ವಾಮಿಮಲೈ ಮೀಸಲು ಅರಣ್ಯದಲ್ಲಿದೆ  

  • ಗಣಿಗಾರಿಕೆಯಿಂದ 99330 ಮರಗಳು ನೆಲಸಮವಾಗಲಿವೆ

  • ದಟ್ಟ ಕಾಡು ನಾಶವಾದರೆ ಮಣ್ಣಿನ ಸವಕಳಿ ಭೂಕುಸಿತ ಆಗಲಿದೆ

  • ನದಿ ತೊರೆ ಹಳ್ಳ ಜಲಮೂಲಗಳ ಪಥ ಬದಲಾವಣೆಗೆ ಕಾರಣವಾಗಲಿದೆ   

  • ಗಣಿಗಾರಿಕೆ ಅರಣ್ಯನಾಶದಿಂದ ನೀರಿನ ಭದ್ರತೆ ಜನಜೀವನಕ್ಕೆ ಅಪಾಯ ಎದುರಾಗಲಿದೆ 

  • ಅರಣ್ಯ ಪ್ರದೇಶದಲ್ಲಿ ಹೊಸ ಗಣಿ ಗುತ್ತಿಗೆಗೆ ಅನುಮತಿ ನೀಡದಂತೆ 2016ರ ಮಾರ್ಚ್‌ 28ರಂದು ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ

  • ಗಣಿಗಾರಿಕೆ ನಡೆಯಲಿರುವ ಜಾಗ ದರೋಜಿ ಕರಡಿ ಧಾಮದಿಂದ 19.22 ಕಿ.ಮೀ ದೂರದಲ್ಲಿದೆ. ದರೋಜಿ ಜೀವವೈವಿಧ್ಯ ವಲಯದಿಂದ 17.52 ಕಿ.ಮೀ ಗುಡೇಕೋಟೆ ಕರಿಡಿಧಾಮದಿಂದ 14.04 ಕಿ.ಮೀ ಗುಡೇಕೋಟೆ ಜೀವವೈವಿಧ್ಯ ವಲಯದಿಂದ 10.29 ಕಿ.ಮೀ ದೂರದಲ್ಲಿದೆ

  • ಸಸ್ಯ ಮತ್ತು ಜೀವಿ ಸಂಕುಲ ಇಲ್ಲಿ ಹಾಸು ಹೊಕ್ಕಿದೆ. ಮರಗಳು ಉತ್ಕೃಷ್ಟ ಸಂಖ್ಯೆಯಲ್ಲಿ ಬೆಳೆದಿವೆ. ಶ್ರೀಗಂಧ ತೇಗ ಬಿದಿರು ಮೆಳೆ ಆಲ ದಿಂಡಾಲ ಹೊನ್ನೆ ರಕ್ತಭೂತಾಳ ಅಂಟುವಾಳ ಬಿಲ್ವ ಕಲ್ಲುಮಾವು ಅರಳಿ ಕಾಡುಬನ್ನಿ ಸೇರಿದಂತೆ ವಿವಿಧ ರೀತಿಯ ಸಾವಿರಾರು ಮರಗಳಿವೆ

  • ಚಿರತೆ ಕರಡಿ ನರಿ ನಾಲ್ಕು ಕೊಂಬುಗಳ ಹುಲ್ಲೆ ಮೊಲ ಕಾಡುಹಂದಿ ಮುಳ್ಳುಹಂದಿ ಉಡ ನಕ್ಷತ್ರ ಆಮೆ ಪ್ಯಾಂಗೊಲಿನ್‌ (ಇರುವೆ ಭಕ್ಷಕ) ಸೇರಿದಂತೆ ಹಲವು ವನ್ಯಜೀವಿಗಳಿಗೆ ಅಪಾಯವಾಗಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.