ADVERTISEMENT

ದೇವದಾರಿ: ವರದಿ ನೀಡಲು ಪಿಸಿಸಿಎಫ್‌ಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 16:16 IST
Last Updated 7 ಜುಲೈ 2024, 16:16 IST

ಬಳ್ಳಾರಿ: ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಬ್ಲಾಕ್‌ನ ದೇವದಾರಿ ಶ್ರೇಣಿಯಲ್ಲಿ ಗಣಿಗಾರಿಕೆ ನಡೆಸಲು ಕುದುರೆಮುಖ ಐರನ್‌ ಓರ್‌ ಕಂಪನಿಗೆ (ಕೆಐಒಸಿಎಲ್‌) ಅರಣ್ಯ ತೀರುವಳಿ ಗುತ್ತಿಗೆ ಪತ್ರ ನೀಡುವುದನ್ನು ಮತ್ತು ಅರಣ್ಯ ಭೂಮಿ ಹಸ್ತಾಂತರಿಸುವುದನ್ನು ತಡೆಯಲು ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ (ಪಿಸಿಸಿಎಫ್‌) ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ. 

ಅರಣ್ಯ ಸಚಿವ ಬಿ.ಈಶ್ವರ ಖಂಡ್ರೆ ಜೂನ್‌ 21ರಂದು ಇಲಾಖೆಗೆ ಟಿಪ್ಪಣಿ ನೀಡಿದ್ದರು. ಅದರ ಆಧಾರದಲ್ಲಿ ಜುಲೈ 1ರಂದು ಪಿಸಿಸಿಎಫ್‌ಗೆ ಸೂಚನೆ ನೀಡಿರುವ ಸರ್ಕಾರ, ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆಯೂ ತಿಳಿಸಿದ್ದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ‘ಪ್ರಜಾವಾಣಿ’ಗೆ ದಾಖಲೆ ಲಭ್ಯವಾಗಿದೆ. 

‘ಸಚಿವರು ಟಿಪ್ಪಣಿ ಬರೆದ ಮೇಲೆ ಅಧಿಕಾರಿಗಳು ನಂತರದ ಪ್ರಕ್ರಿಯೆಗಳನ್ನು ಜಾರಿಗೊಳಿಸಬೇಕು. ಕೆಲವು ಆದೇಶಗಳು ಟಿಪ್ಪಣಿಗಷ್ಟೇ ಸೀಮಿತವಾಗುತ್ತವೆ. ಈ ಪ್ರಕರಣದಲ್ಲಿಯೂ ಹಾಗೆಯೇ ಆಗುವ ಆತಂಕ ಪರಿಸರ ಪ್ರೇಮಿಗಳಿಗಿತ್ತು. ಈಗ ಸಚಿವರ ಟಿಪ್ಪಣಿ ಅಧಿಕೃತವಾಗಿ ಆದೇಶದ ರೂಪ ಪಡೆದಿರುವುದು ಸಮಾಧಾನ ನೀಡಿದೆ’ ಎಂದು ಜನಸಂಗ್ರಾಮ ಪರಿಷತ್‌ನ ಮುಖಂಡ ಶ್ರೀಶೈಲ ಸಂತಸ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.