ADVERTISEMENT

ಕುಮಾರಸ್ವಾಮಿ ಬೆಟ್ಟ: ಯುನೆಸ್ಕೊ ವಿಶ್ವಪಾರಂಪರಿಕ ತಾಣವೆಂದು‌ ಘೋಷಿಸಲು ಸಹಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 15:50 IST
Last Updated 28 ನವೆಂಬರ್ 2023, 15:50 IST
ಸಂಡೂರಿನ ಕುಮಾರಸ್ವಾಮಿ ಹಾಗೂ ಪಾರ್ವತಿ ದೇವಾಲಯ ಒಳಗೊಂಡಂತೆ ಇಡೀ ಬೆಟ್ಟವನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಬೇಕೆಂದು ವಿವಿಧ ಸಂಘಟನೆಗಳಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು
ಸಂಡೂರಿನ ಕುಮಾರಸ್ವಾಮಿ ಹಾಗೂ ಪಾರ್ವತಿ ದೇವಾಲಯ ಒಳಗೊಂಡಂತೆ ಇಡೀ ಬೆಟ್ಟವನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಬೇಕೆಂದು ವಿವಿಧ ಸಂಘಟನೆಗಳಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು   

ಸಂಡೂರು: ಕುಮಾರಸ್ವಾಮಿ‌ ದೇವಾಲಯ, ಪಾರ್ವತಿ ದೇವಾಲಯಗಳು ಭಾರತೀಯ ಪ್ರಾಚ್ಯವಸ್ತು ಇಲಾಖೆಯಡಿ ಸಂರಕ್ಷಿತ ಸ್ಮಾರಕಗಳಾಗಿದ್ದರೂ ಸುತ್ತಮುತ್ತ ನಡೆಯುವ ಗಣಿಗಾರಿಕೆಯಿಂದಾಗಿ ಶಿಥಿಲಾವಸ್ಥೆ ತಲುಪಿವೆ. ಇಲ್ಲಿನ ದೇವಾಲಯಗಳು ಹಾಗೂ ಬೆಟ್ಟವನ್ನು ಮುಂದಿನ ಪೀಳಿಗೆಗೆ ಉಳಿಸುವ ದೃಷ್ಟಿಯಿಂದ ಯುನೆಸ್ಕೊ ವಿಶ್ವಪಾರಂಪರಿಕ ತಾಣವೆಂದು ಘೋಷಿಸಬೇಕೆಂದು ವಿವಿಧ ಸಂಘಟನೆಗಳಿಂದ ಕುಮಾರಸ್ವಾಮಿ ಜಾತ್ರೆಗೆ ಬಂದ ಭಕ್ತರಿಂದ ಸಹಿ‌ಸಂಗ್ರಹ ನಡೆಸಲಾಯಿತು.

ಜಾತ್ರೆಯ ಎರಡನೇ ದಿನವಾದ ಮಂಗಳವಾರ ಇಲ್ಲಿನ ಕುಮಾರಸ್ಚಾಮಿ ಪಾದಗಟ್ಟೆಯಿಂದ ಜನಸಂಗ್ರಾಮ ಪರಿಷತ್, ಸಮಾಜಮುಖಿ ಬಳಗ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಾಥಾ ನಡೆಸಿ ಸಹಿ ಸಂಗ್ರಹಿಸಲಾಯಿತು.

ಕಾರ್ತಿಕೇಯ ದೇಗುಲ, ಪಾರ್ವತಿ ದೇವಾಲಯ, ಹರಿಶಂಕರ, ನವಿಲುಸ್ವಾಮಿ ದೇವಾಲಯಗಳ ಬಳಿ‌ ಇರುವ ನೀರಿನ ಮೂಲ ಕುಸಿದಿದೆ. ಇದರಿಂದ ಪ್ರಾಣಿಪಕ್ಷಿಗಳ ಉಳಿವಿಗೂ ಕಷ್ಟವಾಗುತ್ತಿದೆ. ಈ ಪ್ರದೇಶವು ಸೂಕ್ಷ್ಮ ವಲಯವಾಗಿದ್ದು, ಆಮ್ಲಜನಕ ಉತ್ಪಾದನೆಯ ಪ್ರಮುಖ ಮೂಲವೂ ಹೌದು. ಹಾಗಾಗಿ ಕುಮಾರಸ್ವಾಮಿ ಬೆಟ್ಟವನ್ನು ಮುಂದಿನ ಪೀಳಿಗೆಗೆ ಮತ್ತು ವನ್ಯಜೀವಿ ಸಂಕುಲದ ಸಂರಕ್ಷಣೆಗಾಗಿ ಯುನೆಸ್ಕೊದ ವಿಶ್ವಪಾರಂಪರಿಕ ತಾಣವೆಂದು ಘೋಷಿಸಬೇಕೆಂದು ಸಂಘಟನೆಗಳು ಒತ್ತಾಯಿಸಿದವು.

ADVERTISEMENT

ಸ್ಮಯೋರ್ ಸಂಸ್ಥೆಯ ಗಣಿವಿಭಾಗದ ನಿರ್ದೇಶಕರಾದ ಅಬ್ದುಲ್‌ ಸಲೀಂ, ಸಂಡೂರಿನ ವಿರಕ್ತ ಮಠದ ಪ್ರಭುಸ್ವಾಮೀಜಿ ಸೇರಿದಂತೆ ಸಾವಿರಾರು ಭಕ್ತರು ಸಹಿ ಮಾಡುವ ಮೂಲಕ ಅಭಿಯಾನ ಬೆಂಬಲಿಸಿದ್ದಾರೆ ಎಂದು ವಕೀಲರಾದ ಟಿ.ಎಂ‌ಶಿವಕುಮಾರ್ ತಿಳಿಸಿದರು.

ಸಹಿ ಸಂಗ್ರಹ ಅಭಿಯಾನದಲ್ಲಿ ಸಮಾಜಮುಖಿ ಬಳಗದ ಚಂದ್ರಕಾಂತ್ ವಡ್ಡು, ಚಾಗನೂರು ಮಲ್ಲಿಕಾರ್ಜುನ‌ರೆಡ್ಡಿ, ಕರೂರು ಮಾಧವರೆಡ್ಡಿ ,ನಾಗಲೀಕರ್ ವಿಶ್ವನಾಥ್, ಅರವಿಂದ ಪಾಟೀಲ, ಮಲ್ಲಿಸ್ವಾಮಿ, ಪೆನ್ನಪ್ಪ, ಮಾರಣ್ಣ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.