ಹೂವಿನಹಡಗಲಿ: ‘ನವಲಿ ಗ್ರಾಮದ ಸಾರ್ವಜನಿಕ ಸ್ಮಶಾನಕ್ಕೆ ದಾರಿ ಇಲ್ಲದಿರುವುದರಿಂದ ಅಂತ್ಯಸಂಸ್ಕಾರಕ್ಕೆ ತೆರಳಲು ತೊಂದರೆಯಾಗಿದೆ. ತಕ್ಷಣ ಸ್ಮಶಾನಕ್ಕೆ ದಾರಿ ಕಲ್ಪಿಸಿಕೊಡಬೇಕು’ ಎಂದು ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಅಲಿ ಅಕ್ರಂ ಷಾ ಅವರಿಗೆ ಮನವಿ ಮಾಡಿದರು.
ತಾಲ್ಲೂಕಿನ ನವಲಿ ಗ್ರಾಮದಲ್ಲಿ ಬುಧವಾರ ಜಿ.ಪಂ. ಸಿಇಒ ಅಧ್ಯಕ್ಷತೆಯಲ್ಲಿ ಜರುಗಿದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಗ್ರಾಮದ ಟಿ.ಲಕ್ಷ್ಮಣ ವಿಷಯ ಪ್ರಸ್ತಾಪಿಸಿ, ಸಾರ್ವಜನಿಕ ಸ್ಮಶಾನಕ್ಕೆ ಸರ್ಕಾರ ಮೂರು ಎಕರೆ ಜಮೀನು ನೀಡಿದೆ. ಅಲ್ಲಿಗೆ ತೆರಳಲು ದಾರಿ ಇಲ್ಲವಾಗಿದೆ. ಅನಿವಾರ್ಯವಾಗಿ ತುಂಗಭದ್ರಾ ನದಿ ತೀರದಲ್ಲೇ ಮೃತ ದೇಹಗಳನ್ನು ದಹನ ಮಾಡುವುದರಿಂದ ಜಲಮೂಲ ಕಲುಷಿತವಾಗುತ್ತಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್, ಜನಪ್ರತಿನಿಧಿಗಳ ಬಳಿ ಈ ಸಮಸ್ಯೆ ಹೇಳಿಕೊಂಡರೂ ಸ್ಪಂದಿಸಿಲ್ಲ ಎಂದು ಹೇಳಿದರು.
‘ರೈತರ ಮನವೊಲಿಸಿ ಸ್ಮಶಾನಕ್ಕೆ ದಾರಿ ಬಿಡಿಸಿಕೊಳ್ಳಬೇಕಿದೆ. ಇದು ಕಂದಾಯ ಇಲಾಖೆಗೆ ಸಂಬಂಧಿಸಿರುವುದರಿಂದ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿ ತಹಶೀಲ್ದಾರ್ ಜತೆ ಸಭೆ ನಡೆಸಿ ಸ್ಮಶಾನ ರಸ್ತೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ಜಿ.ಪಂ. ಸಿಇಒ ಮಹ್ಮದ್ ಅಲಿ ಅಕ್ರಂ ಷಾ ಭರವಸೆ ನೀಡಿದರು.
‘ನರೇಗಾದಲ್ಲಿ ಗ್ರಾಮದ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಲಾಗುತ್ತದೆ. ಸಾರ್ವಜನಿಕರು ನೀಡಿರುವ ಅರ್ಜಿಗಳನ್ನು ಇಲಾಖೆಗಳ ಸಮನ್ವಯದೊಂದಿಗೆ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
‘ಅಲ್ಲಿಪುರ ನವಗ್ರಾಮದಲ್ಲಿ ಚರಂಡಿಗಳು ಹೂಳು ತುಂಬಿಕೊಂಡಿವೆ. ಚರಂಡಿ ತ್ಯಾಜ್ಯವು ರಸ್ತೆ ಮೇಲೆ ಹರಿಯುವುದರಿಂದ ನೈರ್ಮಲ್ಯ ಹಾಳಾಗಿದೆ. ಅಲ್ಲಿಪುರ ಮುಳುಗಡೆ ಗ್ರಾಮದ ಆಸ್ತಿಗಳಿಗೂ ತೆರಿಗೆ ಕಟ್ಟುವಂತೆ ಗ್ರಾ.ಪಂ.ಯವರು ಒತ್ತಡ ಹೇರುತ್ತಿದ್ದಾರೆ’ ಎಂದು ಗ್ರಾಮದ ಯುವ ಮುಖಂಡ ಸಂತೋಷ ಸಿಇಒ ಗಮನಕ್ಕೆ ತಂದರು. ಈ ಸಮಸ್ಯೆ ಬಗೆಹರಿಸುವುದಾಗಿ ಅವರು ಭರವಸೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ಪಿ.ಸುಶ್ಮಿತಾ, ಜಿ.ಪಂ. ಉಪ ಕಾರ್ಯದರ್ಶಿ ಭೀಮಪ್ಪ, ತಾ.ಪಂ. ಆಡಳಿತಾಧಿಕಾರಿ ಅಶೋಕ ತೋಟದ, ತಾ.ಪಂ. ಇಒ ಎಂ.ಉಮೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.