ADVERTISEMENT

ಕಾರಣಿಕ ಗೊರವಯ್ಯನ ಬದಲಾವಣೆ: ವಿರೋಧದ ನಡುವೆ ದೀಕ್ಷೆ; ಕುರುಬರಿಂದ ಪ್ರತಿಭಟನೆ

ಮೈಲಾರ ಸುಕ್ಷೇತ್ರದಲ್ಲಿ ಬಿಗುವಿನ ವಾತಾವರಣ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 12:48 IST
Last Updated 13 ಡಿಸೆಂಬರ್ 2018, 12:48 IST
ಮೈಲಾರ ಸುಕ್ಷೇತ್ರದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಕಾರಣಿಕದ ಗೊರವಯ್ಯನಾಗಿ ನೇಮಕಗೊಂಡ ಸಣ್ಣಪ್ಪನಿಗೆ ಭಂಡಾರದ ದೀಕ್ಷೆ ನೀಡಿದರು
ಮೈಲಾರ ಸುಕ್ಷೇತ್ರದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಕಾರಣಿಕದ ಗೊರವಯ್ಯನಾಗಿ ನೇಮಕಗೊಂಡ ಸಣ್ಣಪ್ಪನಿಗೆ ಭಂಡಾರದ ದೀಕ್ಷೆ ನೀಡಿದರು   

ಹೂವಿನಹಡಗಲಿ: ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಕಾರಣಿಕ ನುಡಿಯುವ ಗೊರವಯ್ಯನ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಸುಕ್ಷೇತ್ರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.

ಎರಡು ವರ್ಷದ ಹಿಂದೆ ಕಾರಣಿಕ ಗೊರವಯ್ಯನಾಗಿ ನೇಮಕವಾಗಿದ್ದ ರಾಮಣ್ಣನ ಬದಲಿಗೆ ಕಾರಣಿಕ ವಂಶಸ್ಥರಲ್ಲಿಯೇ ಒಬ್ಬರಾದ ಸಣ್ಣಪ್ಪನನ್ನು ನೇಮಿಸಲಾಗಿತ್ತು. ಗುರುವಾರ ಬೆಳಿಗ್ಗೆ ಕಪಿಲಮುನಿ ಪೀಠದ ಮುಂಭಾಗದಲ್ಲಿ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಧಾರ್ಮಿಕ ವಿಧಿ ವಿಧಾನಗಳಂತೆ ಸಣ್ಣಪ್ಪನಿಗೆ ಗೊರವ ದೀಕ್ಷೆ ನೀಡಿದರು. ಅದನ್ನು ಕುರುಬ ಸಮಾಜದ ಮುಖಂಡರು ತೀವ್ರವಾಗಿ ವಿರೋಧಿಸಿ, ರಾಮಣ್ಣನನ್ನೇ ಮುಂದುವರಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

ಗಲಾಟೆ ಸಂಭವಿಸುವ ಮುನ್ಸೂಚನೆ ಅರಿತ ಧರ್ಮಕರ್ತರು ನಿಗದಿತ ಸಮಯಕ್ಕಿಂತ ಮುಂಚೆ ಹೊಸ ಗೊರವಯ್ಯನಿಗೆ ದೀಕ್ಷೆ ಕಾರ್ಯ ಮುಗಿಸಿದ್ದರು. ಅದನ್ನು ವಿರೋಧಿಸಿ ದೇವಸ್ಥಾನ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕುರುಬ ಸಮಾಜದ ಮುಖಂಡರು ಧರ್ಮಕರ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ಬರೀ ಗೊರವಯ್ಯನ ಬದಲಾವಣೆ ಮಾಡಿದರೆ ಸಾಲದು ಸರ್ವಾಧಿಕಾರಿಯಂತೆ ವರ್ತಿಸುವ ಧರ್ಮಕರ್ತರನ್ನೂ ಬದಲಾಯಿಸಿ’ ಎಂದು ಒತ್ತಾಯಿಸಿದರು.

ADVERTISEMENT

‘ಕಾರಣಿಕದ ಗೊರವಯ್ಯ ಸೇರಿದಂತೆ ಬಾಬುದಾರರ ನೇಮಕಗೊಳಿಸಲು ಕಪಿಲಮುನಿ ಪೀಠಕ್ಕೆ ಪರಮಾಧಿಕಾರವಿದೆ. 1933ರಲ್ಲಿ ಮದ್ರಾಸ್‌ ಹೈಕೋರ್ಟ್‌ ಪೀಠದ ಹಕ್ಕು ಬಾಧ್ಯತೆಗಳನ್ನು ಖಚಿತಪಡಿಸಿದೆ. ಈ ಹಿಂದೆ ನೇಮಕವಾಗಿದ್ದ ರಾಮಣ್ಣ, ಪೀಠಕ್ಕೆ ವಿಧೇಯರಾಗಿ ನಡೆದುಕೊಳ್ಳದೇ ಸುಕ್ಷೇತ್ರದ ಧಾರ್ಮಿಕ ಪರಂಪರೆಗೆ ಧಕ್ಕೆ ತರುವಂತೆ ವರ್ತಿಸಿದರು. ಆ ಕಾರಣದಿಂದ ರಾಮಣ್ಣನನ್ನು ಬದಲಿಸಿ ಅದೇ ಸಮುದಾಯದ ಸಣ್ಣಪ್ಪನಿಗೆ ದೀಕ್ಷೆ ನೀಡಿದ್ದೇವೆ’ ಎಂದು ವೆಂಕಪ್ಪಯ್ಯ ಒಡೆಯರ್ ಸಮರ್ಥಿಸಿಕೊಂಡರು.

‘ಈ ಹಿಂದೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರಾಮಣ್ಣನ ತಾತ್ಕಾಲಿಕ ನೇಮಕಕ್ಕೆ ಒತ್ತಡ ಹೇರಿತ್ತು. ಜಾತ್ರೆಯಲ್ಲಿ ಗಲಾಟೆ ಆಗಬಾರದೆಂದು ಅದನ್ನು ಒಪ್ಪಿಕೊಂಡಿದ್ದೆವು. ನಮ್ಮ ಹಕಗಳನ್ನು ಜಿಲ್ಲಾಡಳಿತ ಮೊಟಕುಗೊಳಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದೆವು. ಈಗ ತೀರ್ಪು ನಮ್ಮ ಪರವಾಗಿಯೇ ಬಂದಿದ್ದು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ತಿಳಿಸಿ, ಅವರ ಅಭಿಪ್ರಾಯದಂತೆಯೇ ಹೊಸ ಗೊರವಯ್ಯನನ್ನು ನೇಮಿಸಿದ್ದೇವೆ’ ಎಂದು ಅವರು ಹೇಳಿದರು.

ಇತ್ತ ಮಧ್ಯಾಹ್ನದವರೆಗೆ ಪ್ರತಿಭಟನೆ ಮುಂದುವರೆದರೂ ಧರ್ಮಕರ್ತರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದುದರಿಂದ ಪ್ರತಿಭಟನಾಕಾರರು ಕಪಿಲಮುನಿ ಪೀಠಕ್ಕೆ ನುಗ್ಗಿದರು. ಪೀಠದಲ್ಲಿ ಆಸೀನರಾಗಿದ್ದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಒಳಕೋಣೆಗೆ ತೆರಳಿ ರಕ್ಷಣೆ ಪಡೆದರು. ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಸುಕ್ಷೇತ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗುತ್ತಿದ್ದಂತೆ ಪೊಲೀಸ್‌ ಅಧಿಕಾರಿಗಳು ಮಧ್ಯಪ್ರವೇಶಿಸಿ ಕುರುಬ ಸಮುದಾಯದ ಮುಖಂಡರು, ಧರ್ಮಕರ್ತರನ್ನು ಮುಖಾಮುಖಿ ಮಾತುಕತೆಗೆ ಅವಕಾಶ ಮಾಡಿಕೊಟ್ಟು ಸಮಸ್ಯೆಯನ್ನು ಸೌಹಾರ್ದ ಇತ್ಯರ್ಥಕ್ಕೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.