ADVERTISEMENT

ಹರಪನಹಳ್ಳಿ | ಕಾರ್ಮಿಕರ ಮಂಡಳಿ ಅವ್ಯವಹಾರ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 14:36 IST
Last Updated 23 ಜುಲೈ 2024, 14:36 IST
ಹರಪನಹಳ್ಳಿಯಲ್ಲಿ ರಾಜ್ಯ ಕಾರ್ಮಿಕರ ಸಮನ್ವಯ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು
ಹರಪನಹಳ್ಳಿಯಲ್ಲಿ ರಾಜ್ಯ ಕಾರ್ಮಿಕರ ಸಮನ್ವಯ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು   

ಹರಪನಹಳ್ಳಿ: ‘ಕಾರ್ಮಿಕ ಮಂಡಳಿಯಲ್ಲಿ ನಡೆದಿರುವ ಕೋಟ್ಯಂತರ ಅವ್ಯವಹಾರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಆಗಸ್ಟ್ 5ರಂದು ಮುಖ್ಯಮಂತ್ರಿ ಮನೆ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ಪ್ರಗತಿಪರ ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಪ್ಪಣ್ಣ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ಬಳಿಕ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯ ಕಾರ್ಮಿಕರ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಸೇರಿಸಲಾಗುತ್ತಿದೆ ಎಂದರು.

ADVERTISEMENT

‘2019ರಿಂದ ಇಲ್ಲಿಯವರೆಗೂ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ₹4,500 ಕೋಟಿ ಹಣದ ಅಕ್ರಮ ನಡೆದಿದೆ. ಕೆಲ ವಿದ್ಯಾಸಂಸ್ಥೆಗಳು ಅಧಿಕಾರಿಗಳ ಜೊತೆ ಶಾಮೀಲಾಗಿ ಸಾವಿರಾರು ಅನರ್ಹರಿಗೆ ಕಾರ್ಮಿಕರ ಕಾರ್ಡ್‌ ವಿತರಿಸಿ, ಸ್ಕಾಲರ್ ಶಿಪ್ ಪಾವತಿ, ಮನೆ ನಿರ್ಮಾಣದ ಹೆಸರಿನಲ್ಲಿ ಅಕ್ರಮವಾಗಿ ₹400 ಕೋಟಿ ಹಣ ಸ್ಲಂ ಬೋರ್ಡ್‌ಗೆ ವರ್ಗಾಯಿಸಲಾಗಿದೆ. ಆರೋಗ್ಯ ತಪಾಸಣೆ, ಕಿಟ್ ವಿತರಣೆ, ಅಂಬುಲೆನ್ಸ್ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.

ಕಾರ್ಮಿಕರಿಗಾಗಿ ಜಾರಿಗೆ ತಂದಿರುವ ಆರೋಗ್ಯಶ್ರೀ ಯೋಜನೆಯಿಂದ ಖಾಸಗಿ ಕಂಪನಿಗೆ ಲಾಭ ಆಗಿದೆಯೇ ಹೊರತು ಕಾರ್ಮಿಕರಿಗೆ ಕಿಂಚಿತ್ತೂ ಅನುಕೂಲವಾಗಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯದರ್ಶಿ ಸಂದೇರ ಪರಶುರಾಮ್ ಮಾತನಾಡಿ, ‘ಕಟ್ಟಡ ಕಟ್ಟುವಾಗ ಆಕಸ್ಮಿಕ ಸಂಭವಿಸುವ ಅವಘಡಗಳಿಗೆ ಕಾರ್ಮಿಕರು ಸಾಯುತ್ತಿದ್ದಾರೆ. ಹರಪನಹಳ್ಳಿಯಲ್ಲಿ ಸಾವಿರಾರು ಬೋಗಸ್ ಕಾರ್ಡುಗಳಿವೆ. ಕಾರ್ಮಿಕ ಸಂಘಟನೆಗಳ ಸಭೆ ಕರೆಯದೇ, ಕಿಟ್ ಹಂಚಿಕೆ ಮಾಡಿದ್ದಾರೆ. ಅರ್ಹರಿಗೆ ತಲುಪಿಲ್ಲ’ ಎಂದು‌ ದೂರಿದರು.

ಮುಖಂಡರಾದ ಬಾಲಗಂಗಾಧರ, ಸಂತೋಷ‌ ಗುಳೇದಹಟ್ಟಿ , ದೊಡ್ಡ ಹಾಲಯ್ಯ, ರೆವಣಸಿದ್ದಪ್ಪ, ಪರಸಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.