ಸಿರುಗುಪ್ಪ (ಬಳ್ಳಾರಿ): ತಾಲ್ಲೂಕಿನ ಕುಡುದರಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ರಂಗಮಂದಿರ ಇಲ್ಲವೇ ಬಯಲಲ್ಲಿ ಅವರು ಪಾಠ ಆಲಿಸಬೇಕು. ಅಲ್ಲಿಯೇ ಅವರಿಗೆ ಬಿಸಿಯೂಟ ನೀಡಲಾಗುತ್ತದೆ.
ಶಾಲೆಯಲ್ಲಿ 1 ರಿಂದ 10ನೇ ತರಗತಿಯವರೆಗೆ 564 ವಿದ್ಯಾರ್ಥಿಗಳು ಇದ್ದಾರೆ. 10 ಕೊಠಡಿಗಳ ಪೈಕಿ 5 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಯಾವಾಗ ಕುಸಿಯುವುದೋ ಎಂಬ ಆತಂಕ ಶಿಕ್ಷಕರು, ಮಕ್ಕಳಲ್ಲಿದೆ.
3 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಯ ವರಾಂಡ, ಬಯಲು ರಂಗಮಂದಿರ ಮತ್ತು ಮೈದಾನದಲ್ಲಿ ಪಾಠ ಮಾಡಲಾಗುತ್ತದೆ. 1 ಮತ್ತು 2ನೇ ತರಗತಿಯವರಿಗೆ ಒಂದೇ ಕೊಠಡಿಯಲ್ಲಿ ನಲಿಕಲಿ ಬೋಧಿಸಲಾಗುತ್ತದೆ. ಒಂದು ಕೊಠಡಿಯಲ್ಲಿ ಬಿಸಿಯೂಟ ಸಿದ್ಧಪಡಿಸಲಾಗುತ್ತದೆ. ಮಳೆಯಾದಾಗ, ಕೊಠಡಿ ಸೋರುತ್ತದೆ. ಉಳಿದ ದಿನಗಳಲ್ಲಿ ಸಿಮೆಂಟ್‌ನ ಚೂರುಗಳು ಉದುರುತ್ತವೆ.
‘ಶಾಲೆಗೆ ಹೊಂದಿಕೊಂಡಂತೆ ಅಂಗನವಾಡಿ ಕೇಂದ್ರ ಹಾಗೂ ಆರೋಗ್ಯ ಕೇಂದ್ರ ಇದೆ. ನಿತ್ಯವೂ ಜನರ ಓಡಾಟ ಹೆಚ್ಚು. ಇದರಿಂದ ಬಯಲಲ್ಲಿ ಪಾಠ ಮಾಡುವದು ಕಷ್ಟ. ಆದರೂ ಅನಿವಾರ್ಯ’ ಎಂದು ಶಿಕ್ಷಕರು ತಿಳಿಸಿದರು.
‘ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ ಜಾಗ ಮಂಜೂರಾಗಿದ್ದು, ₹1.25 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ ಈ ಅನುದಾನದಲ್ಲಿ ಕಟ್ಟಡ ನಿರ್ಮಾಣ ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರಿಂದ ಹೊಸದಾಗಿ ಅಂದಾಜು ಪಟ್ಟಿ ತಯಾರಿಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಲ್ಲಿಸಲಾಗಿದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗುರಪ್ಪ ತಿಳಿಸಿದರು.
ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು ಅಲ್ಲಿ ಪಾಠ ಮಾಡುವುದು ಕಷ್ಟ. ಈ ಸಮಸ್ಯೆಯನ್ನು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.- ದೊಡ್ಡಬಸಪ್ಪ ಮುಖ್ಯಶಿಕ್ಷಕ ಹಿರಿಯ ಪ್ರಾಥಮಿಕ ವಿಭಾಗ.
ಚಾವಣಿಯ ಸಿಮೆಂಟ್ ಆಗಾಗ್ಗೆ ಉದುರುತ್ತದೆ. ಕಟ್ಟಡ ಯಾವಾಗ ಕುಸಿಯುತ್ತೋ ಎಂಬ ಭೀತಿ ಕಾಡುತ್ತದೆ. ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಿಸಿದರೆ ಅನುಕೂಲ ಆಗುತ್ತದೆ.–ಶಾಲಾ ವಿದ್ಯಾರ್ಥಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.