ಕೊಟ್ಟೂರು: ‘ಪಟ್ಟಣದಲ್ಲಿ ಅಲ್ಪ ಮಳೆಯಾದರೂ ನಮ್ಮೂರ ಕೆರೆ ತುಂಬದಿದ್ದರೂ ಬಸ್ ನಿಲ್ದಾಣದ ಆವರಣ ಮಾತ್ರ ಗ್ಯಾರಂಟಿ ತುಂಬುತ್ತದೆ’..
ಹೀಗೆ ಬೇಸರದಿಂದಲೇ ಹೇಳುತ್ತಾರೆ ಕೊಟ್ಟೂರು ಪಟ್ಟಣ ನಿವಾಸಿಗಳು. ಪಟ್ಟಣವು ವರ್ಷದಿಂದ ವರ್ಷಕ್ಕೆ ಬೆಳೆದರೂ ಬಸ್ ನಿಲ್ದಾಣ ಮಾತ್ರ ಅಭಿವೃದ್ಧಿ ವಂಚಿತವಾಗಿದೆ.
ಪ್ರತಿದಿನ 300ಕ್ಕೂ ಹೆಚ್ಚು ಬಸ್ಸುಗಳು, ಸಾವಿರಾರು ಸಂಖ್ಯೆಯ ಪ್ರಯಾಣಿಕರು ಈ ಬಸ್ ನಿಲ್ದಾಣದ ಮೂಲಕ ಸಂಚರಿಸುತ್ತಾರೆ. ಬಸ್ ನಿಲ್ದಾಣವು ಮೂಲ ಸೌಕರ್ಯಗಳಿಂದ ವಂಚಿತ ಆಗಿರುವ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ.
ಬಸ್ ನಿಲ್ದಾಣದ ಮುಂಭಾಗದಲ್ಲಿ ಹಾದು ಹೋಗಿರುವ ಚಳ್ಳಕೆರೆ– ಅರಭಾವಿ ರಾಜ್ಯ ಹೆದ್ದಾರಿ ರಸ್ತೆಯು ಬಸ್ ನಿಲ್ದಾಣಕ್ಕಿಂತ ಎತ್ತರ ಮಟ್ಟದಲ್ಲಿ ನಿರ್ಮಿಸಿರುವ ಕಾರಣ ಮಳೆ ನೀರು ಸಹಜವಾಗಿ ನಿಲ್ದಾಣದ ಆವರಣಕ್ಕೆ ನುಗ್ಗುತ್ತದೆ. ಅಲ್ಲದೆ, ಬಸ್ ನಿಲ್ದಾಣ ಮುಂಭಾಗದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ರಾಜಕಾಲುವೆಯಿಂದ ತ್ಯಾಜ್ಯವು ಸಹ ಮಳೆ ನೀರಿನೊಂದಿಗೆ ಸೇರಿ ನಿಲ್ದಾಣದ ಆವರಣದಲ್ಲಿ ತುಂಬಿಕೊಳ್ಳುತ್ತದೆ.
ಬಸ್ ನಿಲ್ದಾಣದ ಗೋಡೆಗೆ ತಾಗಿಕೊಂಡಿರುವ ಚರಂಡಿ ನಿರ್ಮಾಣ ಕಳಪೆಯಿಂದ ಕೂಡಿವೆ. ಚರಂಡಿ ಮೇಲೆ ಕೆಲವು ಕಡೆ ಮುಚ್ಚದ ಕಾರಣ ಮಳೆ ವೇಳೆ ಚರಂಡಿ ಕಾಣದೆ ಪ್ರಯಾಣಿಕರು ಇಲ್ಲಿ ಬೀಳುವಂತಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ತಾಯಿ ಮತ್ತು ಮಗು ಚರಂಡಿಯಲ್ಲಿ ಬಿದ್ದಂತಹ ಘಟನೆಯೇ ಇದಕ್ಕೆ ಸಾಕ್ಷಿ.
ಆಸನದ ಕೊರತೆ: ‘ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಬೆರಳೆಣಿಕೆ ಆಸನಗಳು ಮಾತ್ರ ಇವೆ. ಮಹಿಳೆಯರು ಹಾಗೂ ಮಕ್ಕಳು ಗಂಟೆಗಟ್ಟಲೇ ನಿಂತು ಬಸ್ಸುಗಳನ್ನು ಕಾಯುವಂತಹ ಪರಿಸ್ಥಿತಿ ಇದೆ. ವೃದ್ಧರ ಪಾಡು ಹೇಳತೀರದು’ ಎಂದು ಹಿರಿಯ ನಾಗರಿಕ ನಾಗಯ್ಯ ಬೇಸರ ವ್ಯಕ್ತಪಡಿಸಿದರು.
ಶಾಸಕರು ಹಾಗೂ ಸಾರಿಗೆ ಅಧಿಕಾರಿಗಳು ಬಸ್ ನಿಲ್ದಾಣದ ಅಭಿವೃದ್ಧಿ ಭರವಸೆ ನೀಡುತ್ತಾ ಬಂದಿದ್ದಾರೆ. ಭರವಸೆ ಕಾರ್ಯರೂಪಕ್ಕೆ ಬರಲಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.