ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಪ್ರಮುಖ ಇಲಾಖೆಗಳಲ್ಲಿ ಪ್ರಭಾರ ಅಧಿಕಾರಿಗಳದ್ದೇ ಪಾರುಪತ್ಯ. ಒಂದಿಬ್ಬರು ಅಧಿಕಾರಿಗಳಿಗೆ ಎರಡು ತಾಲ್ಲೂಕುಗಳ ಹೊಣೆ ಹೊರಿಸಲಾಗಿದೆ. ಇಡೀ ದಿನ ಕೇಂದ್ರ ಸ್ಥಾನದಲ್ಲಿಯೇ ಇದ್ದು ಪೂರ್ಣಾವಧಿ ಕೆಲಸ ಮಾಡಬೇಕಿದ್ದ ಜವಾಬ್ದಾರಿಯುತ ಇಲಾಖೆಗಳಿಗೆ ಅನ್ಯ ತಾಲ್ಲೂಕಿನ ಅಧಿಕಾರಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಇದರಿಂದಾಗಿ ಆಡಳಿತ ಯಂತ್ರ ಕುಸಿದ ಪರಿಣಾಮವಾಗಿ ಸಾರ್ವಜನಿಕರಿಗೆ ಸೌಲಭ್ಯಗಳು ಮರೀಚಿಕೆಯಾಗಿವೆ.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವರ್ಗಾವಣೆಗೊಂಡು ಮೂರು ತಿಂಗಳಾಗಿದೆ. ಹೂವಿನ ಹಡಗಲಿ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆನಂದ್ ಡೊಳ್ಳಿನ್ ಅವರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಅವರು ವಾರಕ್ಕೆರಡು ದಿನ ಮಧ್ಯಾಹ್ನದ ಬಳಿಕ ಭೇಟಿ ನೀಡುತ್ತಿದ್ದಾರೆ. ಆದರೂ ಆಡಳಿತ ಯಂತ್ರ ಸಂಪೂರ್ಣ ನೆಲ ಕಚ್ಚಿದೆ ಎಂದು ಹೆಸರಳೇಲು ಇಚ್ಛಿಸದ ಸಿಬ್ಬಂದಿಯೊಬ್ಬರ ದೂರಾಗಿದೆ. ಇದು ವರ್ಗಾವಣೆಗೊಂಡಿರುವ ಎಲ್ಲ ಇಲಾಖೆಗಳ ಸಮಸ್ಯೆಯೂ ಆಗಿದೆ.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗಳಿಗೆ ಕಾಯಂ ಅಧಿಕಾರಿಗಳಿಲ್ಲ. ಪಟ್ಟಣದ ಜಿವಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯರ ಹುದ್ದೆ ಹಲವು ವರ್ಷಗಳಿಂದ ಪ್ರಭಾರದಲ್ಲಿಯೇ ಮುಂದುವರೆದಿದೆ. ಅರಣ್ಯ ಇಲಾಖೆಗೆ ಸೇರಿದ 7 ಸಾವಿರ ಹೆಕ್ಟೇರ್ ಪ್ರದೇಶ ಅರಣ್ಯ ಪ್ರದೇಶ ಇದ್ದರೂ, ಜತೆಗೆ ರಾಮ್‍ಸರ್ ಸೈಟ್ ಹೆಗ್ಗಳಿಕೆ ಹೊಂದಿರವ ಕಲ್ಯಾಣ ಕರ್ನಾಟಕ ಏಕೈಕ ಪಕ್ಷಿಧಾಮ ಅಂಕಸಮುದ್ರ ಗ್ರಾಮದಲ್ಲಿದ್ದರೂ ಇಲ್ಲಿನ ಕಾರ್ಯನಿರ್ವಹಿಸಬೇಕಿದ್ದ ವಲಯ ಅರಣ್ಯ ಕಚೇರಿ ಬೇರೆಡೆಗೆ ಸ್ಥಳಾಂತರಗೊಂಡಿದೆ.
ತಾಲ್ಲೂಕಿನಲ್ಲಿರುವ ಅರಣ್ಯ ಪ್ರದೇಶವನ್ನು ಆಡಳಿತ್ಮಕವಾಗಿ ಹೂವಿನ ಹಡಗಲಿ ಮತ್ತು ಹೊಸಪೇಟೆಗೆ ಹರಿದು ಹಂಚಿರುವುದು ಅವೈಜ್ಞಾನಿಕವಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಸಿಬ್ಬಂದಿ ಕೊರತೆ ಉಂಟಾಗಿ ಅರಣ್ಯ ಪ್ರದೇಶ ನಾಶದ ಆತಂಕ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.