ADVERTISEMENT

ಬಳ್ಳಾರಿ: ಜಮೀನು ಕಳೆದುಕೊಂಡು ಕಚೇರಿಗಳಿಗೆ ಅಲೆದಾಡಿದ್ದ ಅಯ್ಯಮ್ಮ

ಆರ್. ಹರಿಶಂಕರ್
Published 15 ಫೆಬ್ರುವರಿ 2024, 2:21 IST
Last Updated 15 ಫೆಬ್ರುವರಿ 2024, 2:21 IST
ಅಯ್ಯಮ್ಮ 
ಅಯ್ಯಮ್ಮ    

ಬಳ್ಳಾರಿ: ಬೆಣಕಲ್‌ ಗ್ರಾಮದ ತಮ್ಮ ಆಸ್ತಿ ಕಳೆದುಕೊಂಡ ಅಯ್ಯಮ್ಮ ಎಂಬವರು ನ್ಯಾಯ ಕೋರಿ 15 ದಿನ ಸರ್ಕಾರಿ ಕಚೇರಿ, ಪೊಲೀಸ್‌ ಠಾಣೆ ಅಲೆದಾಡಿದರು. ವಂಚನೆಗೆ ಒಳಗಾಗಿದ್ದು ತಡವಾಗಿ ಗೊತ್ತಾಯಿತು.

ನಕಲಿ ದಾಖಲೆ ಸೃಷ್ಟಿಸಿ ತಮ್ಮ 1 ಎಕರೆ 80 ಸೆಂಟ್ಸ್‌ ಕೃಷಿ ಭೂಮಿಯನ್ನು ನೋಂದಣಿ ಮಾಡಿದ್ದಾರೆ ಎಂದು ಆರೋಪಿಸಿ ಅಯ್ಯಮ್ಮ ಅವರು ಬಳ್ಳಾರಿಯ ಉಪನೋಂದಣಾಧಿಕಾರಿ ರವಿಕುಮಾರ್‌ ಆರ್‌, ಕಂದಾಯ ಇನ್‌ಸ್ಪೆಕ್ಟರ್‌ ರಾಜೇಶ್‌ ಕುಮಾರ್‌, ಗ್ರಾಮ ಲೆಕ್ಕಿಗ ಶಿವಕುಮಾರ್‌ ಸೇರಿ 8 ಜನರ ವಿರುದ್ಧ ವಂಚನೆ, ಫೋರ್ಜರಿ ಪ್ರಕರಣ ದಾಖಲಿಸಿದ್ದಾರೆ.

‘ಕಳೆದ ಜನವರಿಯಲ್ಲಿ ಆಕಸ್ಮಿಕವಾಗಿ ಪಹಣಿ ಪರಿಶೀಲನೆ ವೇಳೆ ತಮ್ಮ ಜಮೀನು ಅನ್ಯರಿಗೆ  ಪರಾಭಾರೆಗೊಂಡು ಹದಿನೈದು ದಿನಗಳು ಆಗಿವೆ’ ಎಂಬ ವಿಷಯ ಗೊತ್ತಾಯಿತು.

ADVERTISEMENT

ಜಮೀನು ಕಳೆದುಕೊಂಡು ಆಘಾತಕ್ಕೆ ಒಳಗಾದ ಅಯ್ಯಮ್ಮ ಅವರು ನೋಂದಣಿಗೆ ಬಳಸಿದ ದಾಖಲೆಗಳನ್ನು ಸರ್ಕಾರಿ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಯಿತು. ಜಮೀನು ಬರೆದುಕೊಟ್ಟ ಅಯ್ಯಮ್ಮ ಎಂಬ ಮಹಿಳೆಯೂ ನಕಲಿ ಎಂದು ಮನವರಿಕೆಯಾಯಿತು.

ಪ್ರಮಾದದ ಬಗ್ಗೆ ಅಯ್ಯಮ್ಮ ಉಪ ನೋಂದಣಾಧಿಕಾರಿ, ಗ್ರಾಮ ಲೆಕ್ಕಿಗ ಮತ್ತು ಕಂದಾಯ ಇನ್‌ಸ್ಪೆಕ್ಟರ್‌ ಬಳಿ ತೆರಳಿ ವಿಚಾರಿಸಿದರು. ಸರ್ಕಾರಿ ಕಚೇರಿಗಳಿಗೆ ಅಲೆದಾಡಿದರು. ಆಗ ಕೆಲ ಅಧಿಕಾರಿಗಳು ಸಬೂಬು ಹೇಳಿದರೆ, ಇನ್ನೂ ಕೆಲವರು ದಿಕ್ಕು ತಪ್ಪಿಸಿದರು. ಕೆಲ ಅಧಿಕಾರಿಗಳು ಕ್ರಮ ಜರುಗಿಸಲು ವಿಳಂಬ ಮಾಡಿದರು ಎಂಬುದು ಗೊತ್ತಾಗಿದೆ.

‘ನಡೆದಿರುವ ಅಕ್ರಮದ ಬಗ್ಗೆ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅವರಿಗೆ ತಿಳಿಸಿದಾಗ, ಕ್ರಿಮಿನಲ್‌  ಪ್ರಕರಣ ದಾಖಲಿಸಲು ಸಲಹೆ ಸಿಕ್ಕಿದೆ. ಆದರೆ, ಪ್ರಕರಣ ದಾಖಲಾಗದಂತೆ ತಡೆಯಲು ಹಲವು ಪ್ರಯತ್ನಗಳು ನಡೆದವು. ಪೊಲೀಸ್ ಠಾಣೆಗಳಿಗೆ ಅಲೆದಾಡಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಎಲ್ಲಿಯೂ ಸ್ಪಂದನೆ ಸಿಗದಿದ್ದಾಗ ಜನಸ್ಪಂದನಕ್ಕೆ ತೆರಳಿ ಮನವಿ ಸಲ್ಲಿಸಿದೆ. ಅಲ್ಲಿ ದೂರಿನ ಪ್ರತಿಯ ಮೇಲೆ ಮುಖ್ಯಮಂತ್ರಿ ಮತ್ತು ಅಧಿಕಾರಿಗಳ ಸಹಿ ಬಿದ್ದ ಮರು ದಿನವೇ ಮೋಕಾ ಠಾಣೆಯ ಪೊಲೀಸ್‌ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡರು’ ಎಂದು ಅಯ್ಯಮ್ಮ ತಿಳಿಸಿದರು.

‘ಜಮೀನಿನ ವಿಷಯದಲ್ಲಿ ಈ ಹಿಂದೆಯೂ ನ್ಯಾಯಾಂಗ ಹೋರಾಟ ಮಾಡಿದ್ದೆ. ಇದು ನನಗೆ ಸೇರಿದೆ ಎಂದು ನ್ಯಾಯಾಲಯ ಆದೇಶ ನೀಡಿದೆ. ಇದನ್ನು ಸಹಿಸದ ಕೆಲ ವ್ಯಕ್ತಿಗಳೇ ನಕಲಿ ದಾಖಲೆ ಸೃಷ್ಟಿಸಿ, ಭೂಮಿಯನ್ನು ಅಕ್ರಮವಾಗಿ ಪಡೆಯಲು ಯತ್ನಿಸಿದ್ದಾರೆ. ದಾಖಲೆ ಪತ್ರಗಳಲ್ಲಿ ಅವರದ್ದೇ ಸಹಿ ಇರುವ ಅನುಮಾನಗಳಿವೆ’ ಎಂದರು.

ದಾಖಲೆ ವಶಕ್ಕೆ ಪಡೆಯದ ಪೊಲೀಸರು: ಆಗಿರುವ ಅನ್ಯಾಯವನ್ನು ಅಯ್ಯಮ್ಮ ಅವರು ಬುಧವಾರ ಲೋಕಾಯುಕ್ತ ಕುಂದು ಕೊರತೆ ಸಭೆಯಲ್ಲೂ ಪ್ರಸ್ತಾಪಿಸಿದರು. ‘ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆಯೇ’ ಎಂದು ಲೋಕಾಯುಕ್ತರು ಪ್ರಶ್ನಿಸಿದಾಗ, ಪೊಲೀಸರು ‘ಇಲ್ಲ’ ಎಂದರು.

ಪಹಣಿಗೆ ಆಧಾರ್‌ ಲಿಂಕ್‌ಗೆ ಚಿಂತನೆ
‘ಘಟನೆ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಸದ್ಯ ಕ್ರಿಮಿನಲ್‌ ಪ್ರಕರಣ ದಾಖಲಾಗಿರುವ ಕಾರಣ ತನಿಖೆ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.  ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಬಳಸಿ ಭೂಮಿ ಕಬಳಿಸುತ್ತಿರುವ ಪ್ರಕರಣಗಳು ಬಯಲಾಗುತ್ತಿವೆ. ಇದನ್ನು ತಪ್ಪಿಸಲು ಪಹಣಿ ಜತೆಗೆ ಆಧಾರ್‌ ಜೋಡಿಸುವ ಬಗ್ಗೆ ಚಿಂತನೆ ನಡೆದಿದೆ. ಅದು ಯಶಸ್ವಿಯಾದರೆ ಭೂಮಿಯ ಅಕ್ರಮ ಪರಾಭಾರೆಗೆ ತಡೆ ಬೀಳಲಿದೆ’ ಎಂದು ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್ ಮಿಶ್ರಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.