ADVERTISEMENT

ಬಳ್ಳಾರಿ | ಸ್ವಚ್ಛತೆಯ ಜಾಗೃತಿ ಇರಲಿ: ಮೇಯರ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 15:40 IST
Last Updated 2 ಅಕ್ಟೋಬರ್ 2024, 15:40 IST
ಬುಡಾ ಕಚೇರಿ ಆವರಣದ ಉದ್ಯಾನವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶರಣಪ್ಪ ಸಂಕನೂರ, ಮೇಯರ್‌ ಮುಲ್ಲಂಗಿ ನಂದೀಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್‌ ಝುಬೇರ ಶ್ರಮದಾನ ಮಾಡಿದರು. 
ಬುಡಾ ಕಚೇರಿ ಆವರಣದ ಉದ್ಯಾನವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶರಣಪ್ಪ ಸಂಕನೂರ, ಮೇಯರ್‌ ಮುಲ್ಲಂಗಿ ನಂದೀಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್‌ ಝುಬೇರ ಶ್ರಮದಾನ ಮಾಡಿದರು.    

ಬಳ್ಳಾರಿ: ‘ಪರಿಸರ ಸ್ವಚ್ಛ ಇದ್ದಾಗ ಮಾತ್ರ ಆರೋಗ್ಯವಾಗಿ ಜೀವಿಸಲು ಸಾಧ್ಯ. ಸಾರ್ವಜನಿಕರು ಶುಚಿತ್ವದ ಕುರಿತು ಜಾಗೃತಿ ಹೊಂದಬೇಕು’ ಎಂದು ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.

ಬುಡಾ ಕಚೇರಿ ಆವರಣದ ಉದ್ಯಾನವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಚತಾ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಾನಗರ ಪಾಲಿಕೆಯ ಸಿಬ್ಬಂದಿ ನಸುಕಿನ ಮುಂಜಾನೆ ವೇಳೆಯಲ್ಲೇ ನಗರ ಸ್ವಚ್ಚತೆ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಸಾರ್ವಜನಿಕರು ಕಸದ ತ್ಯಾಜ್ಯವನ್ನು ವಿಂಗಡಿಸಿ ಪಾಲಿಕೆಯ ವಾಹನಗಳಿಗೆ ನೀಡಬೇಕು ಎಂದರು.

ADVERTISEMENT

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ‘ಸ್ವಚ್ಛತೆ ಒಂದು ಸೇವೆಯಾಗಿದ್ದು, ಪ್ರತಿಯೊಬ್ಬರೂ ಆಂತರಿಕ ಮತ್ತು ಬಹಿರಂಗವಾಗಿಯೂ ಸ್ವಚ್ಚವಾಗಬೇಕಿದೆ. ಸ್ವಚ್ಚತೆ ಕಾರ್ಯವೂ ಒಂದೇ ದಿನಕ್ಕೆ ಸೀಮಿತವಾಗದೆ, ದೈನಂದಿನ ಚಟುವಟಿಕೆಗಳಲ್ಲಿ ಮತ್ತು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛತೆಯಿಂದ ಕಾಪಾಡುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ’ ಎಂದು ಹೇಳಿದರು.

‘ಜಿಲ್ಲೆಯಾದ್ಯಂತ ಕಳೆದ 15 ದಿನಗಳಿಂದ ಸ್ವಚ್ಚತಾ ಆಂದೋಲನ ಕೈಗೊಳ್ಳಲಾಗಿದೆ. ಎಲ್ಲರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು’ ಎಂದರು. 

ಇದೇ ವೇಳೆ ಸ್ವಚ್ಚತೆ ಕುರಿತ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್.ಎನ್ ಝುಬೇರ್ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು, ಸಾರ್ವಜನಿಕರು ಮತ್ತು ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.