ADVERTISEMENT

ಕಾವ್ಯ ಜನಮನಕ್ಕೆ ಮುಟ್ಟಲಿ: ಅಲ್ಲಮಪ್ರಭು ಬೆಟ್ಟದೂರು

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 5:03 IST
Last Updated 25 ಜನವರಿ 2021, 5:03 IST
ಮರಿಯಮ್ಮನಹಳ್ಳಿಯ ನಿವೃತ್ತ ಮುಖ್ಯಶಿಕ್ಷಕ ಹಾಗೂ ಸಾಹಿತಿ ಎಸ್.ಕಾಸಿಂ ಸಾಹೇಬ್ ಅವರ ‘ಹೇಳಲಾರೆ ಹೇಳದಿರಲಾರೆ’ ಕವನ ಸಂಕಲನವನ್ನು ಭಾನುವಾರ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಬಿಡುಗಡೆ ಮಾಡಿದರು
ಮರಿಯಮ್ಮನಹಳ್ಳಿಯ ನಿವೃತ್ತ ಮುಖ್ಯಶಿಕ್ಷಕ ಹಾಗೂ ಸಾಹಿತಿ ಎಸ್.ಕಾಸಿಂ ಸಾಹೇಬ್ ಅವರ ‘ಹೇಳಲಾರೆ ಹೇಳದಿರಲಾರೆ’ ಕವನ ಸಂಕಲನವನ್ನು ಭಾನುವಾರ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಬಿಡುಗಡೆ ಮಾಡಿದರು   

ಮರಿಯಮ್ಮನಹಳ್ಳಿ: ಪ್ರಸ್ತುತ ದಿನಮಾನಗಳಲ್ಲಿ ಕವಿ, ಸಾಹಿತಿಗಳು ಕಾವ್ಯ ವಾಚನ ಮಾಡಿ ಹೋದರೆ ಸಾಲದು, ಕಾವ್ಯವನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಮಾಡುವ ಅನಿವಾರ್ಯತೆ ಇದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.

ಸ್ಥಳೀಯ ದುರ್ಗಾದಾಸ್ ಕಲಾಮಂದಿರದಲ್ಲಿ ಭಾನುವಾರ ಗುರುಶಿಷ್ಯರ ಬಳಗ, ಚಿದ್ರಿ ವಿದ್ಯಾರ್ಥಿ ಗೆಳೆಯರ ಪ್ರಕಾಶನ ಹಾಗೂ ಲಲಿತ ಕಲಾರಂಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಮುಖ್ಯಶಿಕ್ಷಕ, ಸಾಹಿತಿ ಎಸ್.ಕಾಸಿಂಸಾಹೇಬ್ ಅವರ ‘ಹೇಳಲಾರೆ ಹೇಳದಿರಲಾರೆ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹೊಸ ನೀರು ಬರಬೇಕಿದ್ದು, ಹೇಳಲಾರದ ವಿಷಯಗಳನ್ನು ಕಾವ್ಯದ ಮೂಲಕ ಹೇಳಿದಾಗ ಮಾತ್ರ ಸಾರ್ವತ್ರಿಕ ಮಹತ್ವ ಬರುತ್ತದೆ. ಕವಿಗಳು ಪ್ರೀತಿಪ್ರೇಮದ ಜೊತೆಗೆ ಸಮಕಾಲೀನ ವಿಷಯಗಳಿಗೆ ಕಾವ್ಯದ ಮೂಲಕ ಗಟ್ಟಿಧ್ವನಿ ನೀಡಬೇಕಿದೆ. ದೇಶದ ಬಹುದೊಡ್ಡ ಸಂಪತ್ತಾದ ಪ್ರತಿಭಟನಾ ನಿರತ ರೈತರಿಗೆ ಭಾವನೆಗಳ ಮೂಲಕ ನಾವು ಈ ಸಂದರ್ಭದಲ್ಲಿ ಬಾಹ್ಯ ಬೆಂಬಲ ತೋರಬೇಕಿದೆ ಎಂದರು.

ADVERTISEMENT

ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಜಾಜಿ ದೇವೇಂದ್ರಪ್ಪ, ಕಾವ್ಯ ಪ್ರೀತಿಸುವ ಜನ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಕವಿಗಳು ಸುಮ್ಮನೆ ಕುಳಿತಿಲ್ಲ. ತಮ್ಮ ಮೇಲಿನ ಸಾಮಾಜಿಕ ಜವಾಬ್ದಾರಿಗಳನ್ನು ಎಲ್ಲಾ ಕಾಲದಲ್ಲಿಯೂ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ ಎಂದರು.

ವೈದ್ಯ ಹಾಗೂ ಸಾಹಿತಿ ಡಾ.ಬಿ.ಅಂಬಣ್ಣ ಉದ್ಘಾಟಿಸಿದರು. ನಿವೃತ್ತ ಪ್ರಾಧ್ಯಾಪಕ ಜೆ.ಎಂ.ನಾಗಯ್ಯ ಅಧ್ಯಕ್ಷತೆ ವಹಿಸಿದ್ದರು. ಗುರುಶಿಷ್ಯ ಬಳಗದ ಎಂ.ವಿಶ್ವನಾಥಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ನಾಗರತ್ನಮ್ಮ, ಡಾ.ಎಚ್.ಎಸ್.ಗುರುಪ್ರಸಾದ್, ಜಿ.ವಿ.ಸುಬ್ಬರಾವ್ ಕವನ ವಾಚಿಸಿದರು. ಎಚ್.ಶೇಷಗಿರಿರಾವ್, ಬಿ.ಎಂ.ಎಸ್.ಮೃತ್ಯುಂಜಯ, ಕೆ.ಕಲೀಂ, ಜಿ.ಎಂ.ಕೊಟ್ರೇಶ್, ಆರ್.ರಾಮಾನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು.

ನಿವೃತ್ತ ಮುಖ್ಯಶಿಕ್ಷಕ ಹಾಗೂ ಸಾಹಿತಿ ಎಸ್.ಕಾಸಿಂ ಸಾಹೇಬ್, ಪ್ರಕಾಶಕ ಚಿದ್ರಿ ಸತೀಶ್ ಉಪಸ್ಥಿತರಿದ್ದರು. ಸಂತೋಷ್ ಕಿರಣ್ ಗಜಲ್‌ಗಳನ್ನು ಹಾಡಿದರು. ಮಲ್ಲನಗೌಡ ತಂಡದವರು ಪ್ರಾರ್ಥನೆ ಗೀತೆ ಹಾಡಿದರೆ, ಕೆ.ನಾಗೇಶ್ ಸ್ವಾಗತಿಸಿದರು. ಡಿ.ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.