ಕಾನಹೊಸಹಳ್ಳಿ(ವಿಜಯನಗರ): 'ಪ್ರಧಾನ ಮಂತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡದೇ ಕಾಂಗ್ರೆಸ್‌ನವರು ತಿರುಕನ ಕನಸು ಕಾಣುತ್ತಿದ್ದಾರೆ' ಎಂದು ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಹೇಳಿದರು.
ಪಟ್ಟಣದ ಹೊರವಲಯದಲ್ಲಿ ಬಿಜೆಪಿಯಿಂದ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.
‘ಕಾಂಗ್ರೆಸ್ ಸರ್ಕಾರ ಅರ್ಥಿಕವಾಗಿ ದಿವಾಳಿಯಾಗಿದ್ದು, ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿಲ್ಲ. ನಾನು ಮುಖ್ಯಮಂತ್ರಿ ಇದ್ದಾಗ ರೈತರಿಗೆ ನಾಲ್ಕು ಸಾವಿರ ಕೊಡುತ್ತಿದ್ದೆ ಅದನ್ನು ನಿಲ್ಲಿಸಿದರು. ಹಾಲಿನ ಪ್ರೋತ್ಸಾಹಧನ ಸೇರಿ ಈಗ ನಮ್ಮ ಸರ್ಕಾರ ಇದ್ದಾಗ ಮಾಡಿದ ಸಾಕಷ್ಟು ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ‘ ಎಂದು ಆರೋಪಿಸಿದರು.
ರಾಜ್ಯದಲ್ಲಿ ನಾಯಕ ಸಮುದಾಯದ ಬಹುದೊಡ್ಡ ನಾಯಕ ಶ್ರೀರಾಮುಲು ಅವರು, ಅವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ. ಜನಾರ್ದನ ರೆಡ್ಡಿ ಪಕ್ಷಕ್ಕೆ ಬಂದಿರುವುದು ನಮಗೆ ದೊಡ್ಡ ಶಕ್ತಿ ಬಂದಿದೆ ಎಂದರು.
ಅಭ್ಯರ್ಥಿ ಬಿ.ಶ್ರೀರಾಮುಲು ಮಾತನಾಡಿ, ‘ನಾನು ಸೋತರೆ ರಾಜಕೀಯವಾಗಿ ನಿರ್ನಾಮವಾಗಲಿದ್ದೇನೆ, ನನಗೆ ರಾಜಕೀಯ ಪುನರ್ ಜನ್ಮ ಕೊಡಿ, ನನ್ನ ರಾಜಕೀಯ ಭವಿಷ್ಯಕ್ಕೆ ಕೂಡ್ಲಿಗಿಯ ಜನತೆ ಕೈ ಹಿಡಿಯಿರಿ’ ಎಂದರು.
ಕೂಡ್ಲಿಗಿ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಯಡಿಯೂರಪ್ಪ ಅವರು ಮಂಜೂರು ಮಾಡಿದ್ದರು. ಬಹುತೇಕ ಕಾಮಗಾರಿ ಪುರ್ಣಗೊಂಡಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಾಕಿ ಶೇ 5 ಕಾರ್ಯ ಮುಗಿದಿಲ್ಲ. ಚುನಾವಣಾ ನಂತರ ಬಾಕಿ ಕಾರ್ಯ ಪೂರ್ಣಗೊಳಿಸಿ ಬಿ.ಎಸ್. ಯಡಿಯೂರಪ್ಪ ಅವರೇ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಮಾತನಾಡಿ, ಇಡೀ ದೇಶದಲ್ಲಿಯೇ ಕೃಷಿ ಬಜೆಟ್ ಮಂಡಿಸಿದವರು ಯಡಿಯೂರಪ್ಪನವರು. ಮಹಿಳೆಯಿರಿಗಾಗಿ ಭಾಗ್ಯ ಲಕ್ಷ್ಮಿ, ಮಕ್ಕಳಿಗೆ ಸೈಕಲ್, ಪ್ಲೋರೈಡ್ ಮುಕ್ತ ಗ್ರಾಮ ಮಾಡಿದ್ದಾರೆ. ಜನಾರ್ದನ ರೆಡ್ಡಿ, ಶ್ರೀರಾಮುಲು ಅವರು ಹಿಂದುಳಿದ ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಮಾಡಲು ಶ್ರಮಿಸಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿ ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮಂಡಲ ಅಧ್ಯಕ್ಷ ಕೆ.ನಾಗರಾಜ ಬಣವಿಕಲ್ಲು, ರಾಮದುರ್ಗ ಸೂರ್ಯಪಾಪಣ್ಣ, ಚಂದ್ರಶೇಖರ ಹಲಗೇರಿ, ಎಚ್ ರೇವಣ್ಣ, ಬೆಳಕಟ್ಟೆ ಕಲ್ಲೇಶ್ ಗೌಡ, ಸಣ್ಣ ಬಾಲಪ್ಪ, ಎಸ್ ಪಿ ಪ್ರಕಾಶ್, ಕೊಲುಮೆಹಟ್ಟಿ ವೆಂಕಟೇಶ್, ನಾಗೇಶ್ ಹನುಮಜ್ಜಿ, ಕೆ.ಎಚ್.ಎಂ ಸಚಿನ್ ಕುಮಾರ್, ದಿನಾ ಮಂಜುನಾಥ್, ರೇಖಾ ಮಲ್ಲಿಕಾರ್ಜುನ, ಹುಲಿಕೆರೆ ಗೀತಮ್ಮ, ಕೆ.ಚನ್ನಪ್ಪ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.