ADVERTISEMENT

ನಾಗೇಂದ್ರ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಜನಾರ್ದನ ರೆಡ್ಡಿ ಪತ್ನಿ ಅರುಣಾ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 14:31 IST
Last Updated 4 ಏಪ್ರಿಲ್ 2024, 14:31 IST
<div class="paragraphs"><p>ಅರುಣಾ ಲಕ್ಷ್ಮೀ</p></div>

ಅರುಣಾ ಲಕ್ಷ್ಮೀ

   

ಬಳ್ಳಾರಿ: ‘ಪ್ರಕರಣಗಳಿಗೆ ಹೆದರಿ ಕಾಂಗ್ರೆಸ್‌ ಸೇರಿದ್ದು, ಕೂಡ್ಲಿಗಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಬಿಜೆಪಿಗೆ ದ್ರೋಹ ಮಾಡಿದ್ದು ಸಚಿವ ಬಿ. ನಾಗೇಂದ್ರ. ಜನಾರ್ದನ ರೆಡ್ಡಿ ಅವರ ಬಗ್ಗೆ ಮಾತನಾಡುವಾಗ ಅವರು ನಾಲಿಗೆ ಬಿಗಿ ಹಿಡಿದರೆ ಒಳ್ಳೆಯದು’ ಎಂದು ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಎಚ್ಚರಿಕೆ ನೀಡಿದ್ದಾರೆ. 

ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಬಳ್ಳಾರಿಯಲ್ಲಿ ನಡೆದ ಬಿಜೆಪಿಯ ಬಹಿರಂಗ ಸಭೆಯಲ್ಲಿ ಭಾಗವಸಿದ್ದ ಅರುಣಾ ಲಕ್ಷ್ಮೀ, ಸಚಿವ ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಚಿವ ಬಿ. ನಾಗೇಂದ್ರ ಅವರ ಅಣ್ಣನನ್ನು ಅಭ್ಯರ್ಥಿ ಮಾಡುವ ಬಗ್ಗೆ ಆರಂಭದಲ್ಲಿ ಚರ್ಚೆಗಳಾದವು. ಆದರೆ, ಜನಾರ್ದನ ರೆಡ್ಡಿ ಬಿಜೆಪಿಗೆ ಸೇರುತ್ತಲೇ ಸೋಲಿನ ಭಯದಿಂದ ತುಕಾರಾಮ್‌ ಅವರನ್ನು ಅಭ್ಯರ್ಥಿಯಾಗಿ ಮಾಡಲಾಯಿತು. ಗೆದ್ದರೆ ಸಂಸದ, ಸೋತರೆ ಸಚಿವ ಎಂಬ ಆಮಿಷವೊಡ್ಡಿ ತುಕಾರಾಮ್‌ ಅವರನ್ನು ಅಭ್ಯರ್ಥಿ ಮಾಡಲಾಗಿದೆ‘ ಎಂದು ಅವರು ವ್ಯಂಗ್ಯವಾಡಿದರು. 

‘ನೂರು ಜನಾರ್ದನ ರೆಡ್ಡಿಗಳು ಬಿಜೆಪಿ ಸೇರಿದರೂ ಕಾಂಗ್ರೆಸ್‌ ಅನ್ನು ಏನೂ ಮಾಡಲು ಆಗವುದಿಲ್ಲ ಎಂದು ನಾಗೇಂದ್ರ ಹೇಳಿದ್ದಾರೆ. ಆದರೆ, ಜನಾರ್ದನ ರೆಡ್ಡಿ ಅವರ ಒಬ್ಬ ಅಭಿಮಾನಿ ನೂರು ಕಾಂಗ್ರೆಸ್ಸಿಗರನ್ನು ಅಲುಗಾಡಿಸಬಲ್ಲ. ರೆಡ್ಡಿ ಅವರಿಂದ ರಾಜಕೀಯ ಜನ್ಮ ಪಡೆದ ನಾಗೇಂದ್ರ ಈಗ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಿದರೆ ಒಳ್ಳೆಯದು. ಪ್ರಕರಣಗಳಿಗೆ ಹೆದರಿದ್ದರೆ ಜನಾರ್ದನ ರೆಡ್ಡಿ ಎಂದೋ  ಯುಪಿಎ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು. ಆದರೆ, ಎಷ್ಟೇ ಕಷ್ಟವಾದರೂ ಅವರು  ಹೋರಾಡಿದ್ದಾರೆ. ನಾಗೇಂದ್ರ ಕೇಸುಗಳಿಗೆ ಹೆದರಿ ಕೂಡ್ಲಿಗಿಯಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಬಿಜೆಪಿಗೆ ಮೋಸ ಮಾಡಿದರು. ಕೇಸುಗಳಿಗೆ ಹೆದರಿ ಈಗ ಕಾಂಗ್ರೆಸ್‌ ಸೇರಿದ್ದಾರೆ’  ಎಂದು ಆಕ್ರೋಶ ವ್ಯಕ್ತಪಡಿಸಿದರು.  

‘ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂದೇ ಗೊತ್ತಿಲ್ಲ. ಕಾಂಗ್ರೆಸ್‌ಗೆ ಮತ ಹಾಕಿ ತುಕಾರಾಮ್‌ ಅವರನ್ನು ಗೆಲ್ಲಿಸಿದರೆ ಅವರು ಮಾಡುವುದು ಏನೂ ಇರುವುದಿಲ್ಲ. ಬಿಜೆಪಿಯಿಂದ ಮೋದಿಯೇ ಪ್ರಧಾನಿ. ಈ ಬಾರಿ ಅವರು ಗೆದ್ದರೆ ಹ್ಯಾಟ್ರಿಕ್‌ ಆಗಲಿದೆ. ಕಾಂಗ್ರೆಸ್‌ಗೆ ಮತ ಹಾಕಿ ತುಕಾರಾಮ್‌ ಅವರನ್ನು ಗೆಲ್ಲಿಸಿ ಮತ ವ್ಯರ್ಥ ಮಾಡಬೇಡಿ’ ಎಂದು ಅವರು ಜನರಲ್ಲಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.