ADVERTISEMENT

ಚೆಕ್‌ಪೋಸ್ಟ್‌ ಮೇಲೆ ಲೋಕಾ ದಾಳಿ

₹41,700 ನಗದು, ದಾಖಲೆ ವಶ: ಲೋಕಾಯುಕ್ತಕ್ಕೆ ವರದಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:55 IST
Last Updated 8 ಅಕ್ಟೋಬರ್ 2024, 14:55 IST
ಹಗರಿ ಚೆಕ್‌ಪೋಸ್ಟ್‌ ಸಮೀಪ ಬೀಡು ಬಿಟ್ಟಿದ್ದ ಲೋಕಾಯುಕ್ತ ಸಿಬ್ಬಂದಿ 
ಹಗರಿ ಚೆಕ್‌ಪೋಸ್ಟ್‌ ಸಮೀಪ ಬೀಡು ಬಿಟ್ಟಿದ್ದ ಲೋಕಾಯುಕ್ತ ಸಿಬ್ಬಂದಿ    

ಬಳ್ಳಾರಿ: ಬಳ್ಳಾರಿ ಹೊರವಲಯದ ಹಗರಿ ಚೆಕ್‌ಪೋಸ್ಟ್‌ ಮೇಲೆ ಸೋಮವಾರ ರಾತ್ರಿ 2.30ರ ವೇಳೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಮಂಗಳವಾರ ಬೆಳಿಗ್ಗೆ ವರೆಗೆ ನಡೆದ ಪರಿಶೀಲನೆಯಲ್ಲಿ ₹41,700 ನಗದು ವಶಕ್ಕೆ ಪಡೆದಿದ್ದಾರೆ. 

ಬಳ್ಳಾರಿ ಜಿಲ್ಲಾ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರ ನೇತೃತ್ವದಲ್ಲಿ ದಾಳಿ ನಡೆಯಿತು. ಈ ವೇಳೆ ಯಾರನ್ನೂ ಬಂಧಿಸಿಲ್ಲ.

ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 63ರ ಮೂಲಕ ನೂರಾರು ವಾಹನಗಳು ರಾಜ್ಯ ಪ್ರವೇಶ ಮಾಡುತ್ತವೆ. ಈ ಮಾರ್ಗದಲ್ಲಿರುವ ಹಗರಿ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಯುತ್ತದೆ. ತಪಾಸಣೆ ನೆಪದಲ್ಲಿ ಹಣ ವಸೂಲಿ ನಡೆಯುತ್ತಿದೆ ಎಂದು ಲೋಕಾಯುಕ್ತರಿಗೆ ದೂರು ದಾಖಲಾಗಿದೆ ಎಂದು ಹೇಳಲಾಗಿದೆ. ಕೇಂದ್ರ ಕಚೇರಿಯ ಸೂಚನೆ ಮೇರೆಗೆ ದಾಳಿ ನಡೆದಿದೆ.

ADVERTISEMENT

‘ಚೆಕ್‌ಪೋಸ್ಟ್‌ ಪರಿಶೀಲಿಸುವಂತೆ ಲೋಕಾಯುಕ್ತರು ಸೂಚನೆ ನೀಡಿದ್ದರು. ವಾರೆಂಟ್‌ ಪಡೆದು ಪರಿಶೀಲನೆ ಆರಂಭಿಸಲಾಯಿತು. ಈ ವೇಳೆ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಈ ಕುರಿತು ಲೋಕಾಯುಕ್ತರಿಗೆ ವರದಿ ಸಲ್ಲಿಸಲಾಗುತ್ತದೆ. ವರದಿ ಆಧಾರದಲ್ಲಿ ಅವರು ಕ್ರಮ ಕೈಗೊಳ್ಳಲಿದ್ದಾರೆ. ಬಂಧನ ಆದೇಶ ನೀಡಿದರೆ ಸಂಬಂಧಿಸಿದವರನ್ನು ಬಂಧಿಸುತ್ತೇವೆ’ ಎಂದು ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಪ್ರಜಾವಾಣಿಗೆ ತಿಳಿಸಿದರು.

‘ಹಗರಿ ಚೆಕ್‌ಪೋಸ್ಟ್‌ನ ಚಟುವಟಿಕೆಗಳ ಬಗ್ಗೆ ಲೋಕಾಯುಕ್ತರಿಗೆ ಯಾರಾದರೂ ದೂರು ಕೊಟ್ಟಿರಬಹುದು. ಅಥವಾ, ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿರಬಹುದು. ಅದರ ಆಧಾರದಲ್ಲಿ ನಮಗೆ ಸೂಚನೆ ಬಂದಿದೆ’ ಎಂದು ಎಸ್‌ಪಿ ತಿಳಿಸಿದರು.

ಬುಡಾ: ಲೋಕಾಯುಕ್ತಕ್ಕೆ ದೂರು

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಬುಡಾ) ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಪ್ರಾಧಿಕಾರದ ಕೆಲವು ಸದಸ್ಯರು ಸೋಮವಾರ ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆಗೆ ಮನವಿ ಮಾಡಿದ್ದಾರೆ. 

ಸದಸ್ಯರಿಂದ ದೂರು ಸ್ವೀಕರಿಸಿರುವ ಲೋಕಾಯುಕ್ತ ಅಧಿಕಾರಿಗಳು, ಅವರಿಂದ ನಮೂನೆ–1 ಮತ್ತು 2ರ ಅಡಿಯಲ್ಲಿ ಅಫಿಡವಿಟ್‌ ಪಡೆದಿದ್ದಾರೆ. ದೂರನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ರವಾನಿಸಿದ್ದಾರೆ. 

ತನಿಖೆ ನಡೆಸುವಂತೆ ಕೇಂದ್ರ ಕಚೇರಿಯಿಂದ ಸೂಚನೆ ಬಂದರೆ ಕೂಡಲೇ ಎಫ್‌ಐಆರ್ ದಾಖಲಿಸಿ, ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬಡಾವಣೆ ಮಂಜೂರಾತಿಗೆ ಲಂಚ ಪಡೆಯಲಾಗುತ್ತಿದೆ, ಪ್ರಾಧಿಕಾರದ ಅಧ್ಯಕ್ಷರು ತಮ್ಮ ಪತ್ನಿಯ ನಿವೇಶನಕ್ಕೆ ಏಕನಿವೇಶನ ಮಂಜೂರಾತಿ ನೀಡಿದ್ದಾರೆ ಎಂದು ಆರೋಪಿಸಿರುವ ಕೆಲ ಸದಸ್ಯರು ಇತ್ತೀಚೆಗೆ ಬುಡಾ ಆಯುಕ್ತರಿಗೆ ದೂರು ನೀಡಿದ್ದರು. ಅದೇ ದೂರನ್ನು ಸದ್ಯ ಲೋಕಾಯುಕ್ತಕ್ಕೂ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.