ADVERTISEMENT

ಕಾಂಗ್ರೆಸ್‌ನಿಂದ ಕರ್ನಾಟಕ ದಿವಾಳಿ: ಬಿ.ಎಸ್.ಯಡಿಯೂರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 14:23 IST
Last Updated 16 ಏಪ್ರಿಲ್ 2024, 14:23 IST
ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖಂಡ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು
ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖಂಡ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು   

ಹೂವಿನಹಡಗಲಿ: ‘ಕಾಂಗ್ರೆಸ್ ದುರಾಡಳಿತದಿಂದ ರಾಜ್ಯದ ಅಭಿವೃದ್ಧಿ ಸ್ಥಗಿತಗೊಂಡಿದೆ. ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ದಿವಾಳಿ ಮಾಡಿದೆ’ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಮತಯಾಚಿಸಿ ಮಾತನಾಡಿದರು.

‘ಕಾಂಗ್ರೆಸ್ ನಾಯಕರು ಹಣ, ಹೆಂಡ, ತೋಳ್ಬಲದಿಂದ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ರಾಜ್ಯದ ಜನರು ಜಾಗೃತರಾಗಿದ್ದಾರೆ. ಅವರ ಮೋಸಗಳಿಗೆ ಬಲಿಯಾಗುವುದಿಲ್ಲ. ನಾವು ಜಾರಿಗೊಳಿಸಿದ್ದ ಭಾಗ್ಯಲಕ್ಷ್ಮಿ, ಕಿಸಾನ್ ಸಮ್ಮಾನ್, ಹಾಲು ಪ್ರೋತ್ಸಾಹ ಧನ ನೀಡುವಂತಹ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಜನವಿರೋಧಿ ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.

ADVERTISEMENT

‘ಹೋರಾಟಗಾರ ಶ್ರೀರಾಮುಲು ಲೋಕಸಭೆಯಲ್ಲಿ ಗುಡುಗಿ ರಾಜ್ಯಕ್ಕೆ ಅಭಿವೃದ್ಧಿ ಯೋಜನೆಗಳನ್ನು ತರುತ್ತಾರೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಪ್ರಧಾನಿ ಮೋದಿಯವರಿಗೆ ಶಕ್ತಿ ತುಂಬಲು ಶ್ರೀರಾಮುಲು ಅವರನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.

‘ಶ್ರೀರಾಮುಲು ಅಭ್ಯರ್ಥಿಯಾಗಲು ಬಯಸಿರಲಿಲ್ಲ. ನಾವು ಒತ್ತಡ ಹೇರಿ ನಿಲ್ಲಿಸಿದ್ದೇವೆ. ಈ ಚುನಾವಣೆಯಲ್ಲಿ ಅವರು ಗೆಲ್ಲಲೇಬೇಕಿದೆ. ರಾಮುಲು ಗೆಲ್ಲಿಸಿದರೆ, ಯಡಿಯೂರಪ್ಪ ಅವರನ್ನೇ ಗೆಲ್ಲಿಸಿದಂತಾಗುತ್ತದೆ. ರಾಮುಲು ಬೇರೆಯಲ್ಲ, ಯಡಿಯೂರಪ್ಪ ಬೇರೆಯಲ್ಲ. ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷಕ್ಕೆ ಹೆಚ್ಚು ಮತಗಳನ್ನು ಕೊಡಿಸಿ’ ಎಂದು ಹೇಳಿದರು.

ಕಷ್ಟಕಾಲದಲ್ಲಿ ಕೈ ಬಿಡಬೇಡಿ: ‘ನಾನು ರಾಜಕೀಯವಾಗಿ ಕಷ್ಟ ಕಾಲದಲ್ಲಿರುವೆ. ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ರಾಜಕೀಯ ಶಕ್ತಿ ನೀಡಿ’ ಎಂದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮನವಿ ಮಾಡಿದರು.

‘ನಾನು ಆಯ್ಕೆಯಾದರೆ ಶಾಸಕ ಕೃಷ್ಣನಾಯ್ಕ ಜತೆಗೂಡಿ ಜೋಡೆತ್ತಿನಂತೆ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇವೆ. ಕಾಂಗ್ರೆಸ್ ನಾಯಕರು ಓಟಿಗಾಗಿ ಜಾತಿ, ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮೋದಿ ಆಡಳಿತದಲ್ಲಿ ದೇಶ ಸುರಕ್ಷಿತವಾಗಿದೆ. ರಾಷ್ಟ್ರದ ಭವಿಷ್ಯ ನಿರ್ಧರಿಸುವ ಈ ಚುನಾವಣೆಯಲ್ಲಿ ವಿವೇಚನೆಯಿಂದ ಮತ ಚಲಾಯಿಸಿ’ ಎಂದು ತಿಳಿಸಿದರು.

ಶಾಸಕ ಕೃಷ್ಣನಾಯ್ಕ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮಂಡಲ ಅಧ್ಯಕ್ಷ ಹಣ್ಣಿ ಶಶಿಧರ, ಮುಖಂಡರಾದ ಓದೋ ಗಂಗಪ್ಪ, ಎಚ್.ಪೂಜಪ್ಪ, ಅರುಂಡಿ ನಾಗರಾಜ, ಸಿದ್ದಾರ್ಥ ಸಿಂಗ್, ಬಲ್ಲಾಹುಣ್ಸಿ ರಾಮಣ್ಣ, ಎಂ.ಪರಮೇಶ್ವರಪ್ಪ, ಈಟಿ. ಲಿಂಗರಾಜ, ಸಿರಾಜ್ ಬಾವಿಹಳ್ಳಿ, ಬೀರಬ್ಬಿ ಬಸವರಾಜ, ತಳಕಲ್ ಕರಿಬಸಪ್ಪ, ಗಡ್ಡಿ ಬಸವರಾಜ, ಕೆ.ಬಿ.ವೀರಭದ್ರಪ್ಪ, ಎಸ್.ಗುರುಸಿದ್ದಪ್ಪ, ಮಂಜುನಾಥ ಜೈನ್, ಎ.ಜೆ.ವೀರೇಶ, ಜೆಡಿಎಸ್ ಅಧ್ಯಕ್ಷ ಎಸ್.ಕೊಟ್ರೇಶ, ಮುಖಂಡ ಕೆ.ಪುತ್ರೇಶ, ಭಾಗ್ಯಮ್ಮ, ಮೀರಾಬಾಯಿ ಇದ್ದರು. ಇದೇ ವೇಳೆ ಕೆ.ಪತ್ರೇಶ, ಗಡಿಗಿ ಕೃಷ್ಣ, ಖಾಜಾ ಮೋಹಿದ್ದೀನ್, ಎಂ. ಸೈಫುಲ್ಲಾ, ಎಚ್.ಇಸ್ಮಾಯಿಲ್ ಸಾಬ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.

ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.