ಬಳ್ಳಾರಿ: ’ಕೋಮು ಮತ್ತು ಜಾತಿ ಸೌಹಾರ್ದವನ್ನು ಮೂಡಿಸುವ ಸಲುವಾಗಿ ಸಹಮತ ವೇದಿಕೆಯು ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ನಗರದಲ್ಲಿ ಆಗಸ್ಟ್ 16ರಂದು ನಡೆಸಲಿದೆ' ಎಂದು ವೇದಿಕೆಯ ಮುಖಂಡರಾದ ಸಿರಿಗೇರಿ ಪನ್ನರಾಜ್ ಹಾಗೂ ಜೆ.ಎಂ.ವೀರಸಂಗಯ್ಯ ತಿಳಿಸಿದರು.
‘ಅಂದು ಬೆಳಿಗ್ಗೆ 11ಕ್ಕೆ ಬಿಪಿಎಸ್‌ಸಿ ಶಾಲೆಯಲ್ಲಿ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಜಗದೀಶ ಬಸಾಪುರ ಮತ್ತು ಸುಮಂಗಳ ಶುವಕುಮಾರ ಬಳಿಗಾರ ಕೂಡ ಪಾಲ್ಗೊಳ್ಳಲಿದ್ದಾರೆ’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಸಂಜೆ 4 ಗಂಟೆಗೆ ಮುನ್ಸಿಪಲ್ ಕಾಲೇಜು ಮೈದಾನದಿಂದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಸಾಮರಸ್ಯ ನಡಿಗೆ ನಡೆಯಲಿದ್ದು, ಸಕಲ ಜಾತಿ, ಧರ್ಮಗಳ ಜನರು ಪಾಲ್ಗೊಳ್ಳಲಿದ್ದಾರೆ’ ಎಂದರು.
‘ನಂತರ, ಸಂಜೆ 6 ಗಂಟೆಗೆ ರಂಗಮಂದಿರದಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದ್ದು, ಪ್ರಭುದೇವರ ವಿರಕ್ತಮಠದ ಪ್ರಭುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ವಚನ ಧರ್ಮದ ಕುರಿತು ಪ್ರೊ.ಎಸ್.ಜಿ. ಸಿದ್ದರಾಮಯ್ಯ, ವಚನಕಾರರ ಆರ್ಥಿಕ ಚಿಂತನೆ ಕುರಿತು ಲೇಖಕಿ ಜಯಶ್ರೀ ಸುಕಾಲೆ ಉಪನ್ಯಾಸ ನೀಡಲಿದ್ದಾರೆ. ನಂತರ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದು ತಿಳಿಸಿದರು.
‘ವಿವಿಧ ಧರ್ಮಗಳ ಪ್ರಮುಖರಾದ ಸೋಮಶೇಖರ ಸ್ವಾಮಿ, ಪಿ.ಆಂಥೋನಿರಾಜ್, ಮೊಹ್ಮದ್ ಇದ್ರೀಸ್, ಬಸಂತಕುಮಾರ್ ಛಾಜಡ್, ಹಾಲಶಂಕರ ಸ್ವಾಮಿ, ಫ್ರಾನ್ಸಿಸ್ ಬ್ಯಾಶ್ಯಂ, ಶಾರದಮ್ಮ, ರೆವರೆಂಡ್ ಸ್ಯಾಮ್ಯುಯಲ್ ಪ್ರಸಾದ್, ಗಂಗಾಧರ ದೇವರು, ಶಾಂತಲಿಂಗ ದೇಶಿಕೇಂದ್ರ ಸ್ವಾಮಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿ ಪಾಲ್ಗೊಳ್ಳಲಿದ್ದಾರೆ’ ಎಂದರು.
‘12 ನೇ ಶತಮಾನದ ಕಲ್ಯಾಣದ ಶರಣರ ವಚನ ಚಳವಳಿಯು 21ನೇ ಶತಮಾನದಲ್ಲೂ ಹಲವು ಸಮಸ್ಯೆಗಳ ಪರಿಹಾರ ಮಾರ್ಗ ಎಂಬುದನ್ನು ಪ್ರತಿಪಾದಿಸುವ ಸಲುವಾಗಿ ಶಿವಾಚಾರ್ಯರ ನೇತೃತ್ವದಲ್ಲಿ ಸಹಮತ ವೇದಿಕೆಯನ್ನು ನಿರ್ಮಿಸಲಾಗಿದೆ. ಈ ವೇದಿಕೆಯನ್ನು ಕಲ್ಯಾಣ ಕಾರ್ಯಕ್ರಮದ ಬಳಿಕವೂ ಜಿಲ್ಲೆಯಲ್ಲಿ ಮುಂದುವರಿಸುತ್ತೇವೆ’ ಎಂದರು.
ವೇದಿಕೆಯ ಪ್ರಮುಖರಾದ ಯೋಗ ನಾಗರಾಜ್, ಶಿವಲಿಂಗಪ್ಪ ಹಂದಿಹಾಳ್, ಯರ್ರಿಸ್ವಾಮಿ, ಮಹ್ಮದ್ ರಿಜ್ವಾನ್, ಒಂಕಾರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.