ಸಿರುಗುಪ್ಪ: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಹಾಗೂ ನೈತಿಕ ಮತದಾನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸಿರುಗುಪ್ಪ ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ತಾಲ್ಲೂಕಿನ ವಿವಿಧೆಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ನರೇಗಾ ಕಾಮಗಾರಿ ಸ್ಥಳಗಳಲ್ಲಿ'ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಮನೋಹರ ಅವರು ಸೋಮವಾರ ಮತದಾನ ಜಾಗೃತಿ ಮೂಡಿಸಿದರು.
ತಾಲ್ಲೂಕಿನ ಕುಡುದರಹಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಲಾಪುರ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.
'ಈ ಬಾರಿಯ ಲೋಕಸಭೆ ಚುನಾವಣೆಗೆ ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಮಾಡುವುದು ತಮ್ಮ ಆದ್ಯ ಕರ್ತವ್ಯವಾಗಿರುತ್ತದೆ' ಎಂದು ತಿಳಿಸಿದರು.
'ಮತದಾನ ಪ್ರಕ್ರಿಯೆಯಿಂದ ಯಾವೊಬ್ಬ ವ್ಯಕ್ತಿಯು ಕೂಡ ಹೊರಗುಳಿಯಬಾರದು. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಕೆಲಸದ ಸ್ಥಳದಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಇರುವ ಟೀ-ಶರ್ಟ್, ಟವೆಲ್ ಹಾಘೂ ಇನ್ನೀತರೆ ವಸ್ತ್ರ ಧರಿಸಬಾರದು' ಎಂದು ಮನವರಿಕೆ ಮಾಡಿದರು.
‘ನರೇಗಾ ಯೋಜನೆಯ ನಿಯಮಾನುಸಾರ ಕೂಲಿ ಕಾರ್ಮಿಕರು ಕೆಲಸ ನಿರ್ವಹಣೆ ಮಾಡಬೇಕು. ಗಂಡು ಮತ್ತು ಹೆಣ್ಣಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಪ್ರತ್ಯೇಕವಾಗಿ ಎನ್‍ಎಂಆರ್ ಸೃಜನೆ ಮಾಡಿ ಕೆಲಸ ನೀಡಲಾಗುತ್ತಿದೆ‘ ಎಂದರು.
ಪ್ರಸ್ತುತ ವರ್ಷದ ಕೂಲಿ ಮೊತ್ತ ₹349 ಹೆಚ್ಚಳವಾಗಿದ್ದು, ಅಳತೆಗೆ ತಕ್ಕಂತೆ ಕೆಲಸ ನಿರ್ವಹಣೆ ಮಾಡಿದರೆ ಮಾತ್ರ ಒಂದು ದಿನದ ಪೂರ್ಣ ಪ್ರಮಾಣದ ಕೂಲಿಯು ಲಭ್ಯವಾಗುತ್ತದೆ. ಎನ್‍ಎಂಎಂಎಸ್ ಆಪ್ ಮೂಲಕವೇ ಹಾಜರಾತಿ ತೆಗೆದುಕೊಳ್ಳಲಾಗುತ್ತದೆ. ಕೂಲಿಕಾರರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕರೆತರದೇ, 06 ತಿಂಗಳಿಂದ 03 ವರ್ಷದೊಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿಯೇ ಇರಿಸಬೇಕು. ಅಲ್ಲಿ ಪೌಷ್ಠಿಕ ಆಹಾರ, ಆಟೋಪಚಾರ ನೀಡಲಾಗುತ್ತದೆ ಎಂದು ಹೇಳಿದರು.
ತಾಲ್ಲೂಕಿನ ಕೊಂಚಗೇರಿ, ಕೆ.ಸೂಗೂರು, ಶಾನವಾಸಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಗ್ರಾಮ ಕಾಯಕ ಮಿತ್ರರು ಮೇ 7ರಂದು ನಡೆಯುವ ಮತದಾನ ದಿನದಂದು ತಪ್ಪದೇ ಮತದಾನ ಮಾಡಬೇಕು. ಯಾರೂ ತಪ್ಪಿಸಬಾರದು ಎಂದು ಮತದಾನದ ಕುರಿತು ಅರಿವು ಮೂಡಿಸಲಾಯಿತು.
ಕುಡುದರಹಾಳ್ ಗ್ರಾಪಂ ಪಿಡಿಓ ಲಿಂಗಯ್ಯ ಸ್ವಾಮಿ, ತಾಂತ್ರಿಕ ಸಹಾಯಕ ಅನುದೀಪ್, ಬಿಎಫ್‍ಟಿ ವಿರೇಶಪ್ಪ, ಡಿಇಓ ಬಡೇಸಾಬ್, ಗ್ರಾಮ ಕಾಯಕ ಮಿತ್ರ ಭೀಮಮ್ಮ ಸೇರಿದಂತೆ, ಪಂಚಾಯತ್ ಸಿಬ್ಬಂದಿಗಳು ಮತ್ತು 426 ಕೂಲಿಕಾರ್ಮಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.