ಬಳ್ಳಾರಿ: ಭಾರತೀಯ ಉಕ್ಕು ಪ್ರಾಧಿಕಾರದಡಿ ಬರುವ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯು (ವಿಐಎಸ್‌ಎಲ್) ಸಂಡೂರಿನ ರಾಮಗಢ ಅರಣ್ಯ ವಲಯದಲ್ಲಿ ಗಣಿಯೊಂದನ್ನು ಹೊಂದಲು ಪ್ರಯತ್ನಿಸುತ್ತಿದೆ. ಆದರೆ, ಖಾಸಗೀಕರಣದ ಹೊಸ್ತಿಲಿನಲ್ಲಿರುವ ವಿಐಎಸ್‌ಎಲ್‌ಗೆ ಗಣಿ ಸಿಕ್ಕರೆ, ಸಂಸ್ಥೆಯೊಂದಿಗೆ ಗಣಿಯೂ ಖಾಸಗಿಯವರಿಗೆ ವರ್ಗಾವಣೆಗೊಳ್ಳುವ ಭೀತಿ ಎದುರಾಗಿದೆ.
ಆರ್ಥಿಕ ನಷ್ಟ, ಕಾರ್ಯಾಚರಣೆಯಲ್ಲಿ ತೊಡಕು, ಆಧುನೀಕರಣ ಮತ್ತು ಮುಖ್ಯವಾಗಿ ‘ಕೆಪ್ಟಿವ್ ಮೈನ್ (ಸ್ವಂತದ ಗಣಿ)’ ಇಲ್ಲದ ಕಾರಣಗಳಿಂದ ಬಂದ್ ಆಗಿರುವ ವಿಎಸ್‌ಐಎಸ್‌ಎಲ್ ಅನ್ನು ಖಾಸಗೀಕರಣಗೊಳಿಸಲು, ಅದರಲ್ಲಿನ ಬಂಡವಾಳ ಹಿಂಪಡೆಯಲು ಅಥವಾ ಮಾರಲು ಕೇಂದ್ರ ಸರ್ಕಾರವು 2000ನೇ ಇಸವಿಯಿಂದ ಹಲವು ಪ್ರಯತ್ನ ನಡೆಸಿ ವಿಫಲವಾಗಿದೆ.
ಈ ಮಧ್ಯೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ವಿಐಎಸ್‌ಎಲ್‌ಗೆ ಸಂಡೂರಿನ ರಾಮಗಢ ಅರಣ್ಯ ಶ್ರೇಣಿಯ 150 ಎಕರೆ ಪ್ರದೇಶವನ್ನು ಗಣಿಗಾರಿಕೆಗೆ ಮೀಸಲಿಟ್ಟು 2019ರ ಫೆಬ್ರುವರಿ 20ರಂದು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು.
ಆದರೆ, ಅಧಿಸೂಚನೆ ಹೊರಬಿದ್ದ ನಾಲ್ಕೂವರೆ ತಿಂಗಳಲ್ಲೇ (2019ರ ಜುಲೈ 4) ಕಂಪನಿಯಲ್ಲಿನ ಬಂಡವಾಳ ಹಿಂತೆಗೆತಕ್ಕೆ ನಿರ್ಧರಿಸಿ ಭಾರತೀಯ ಉಕ್ಕು ಪ್ರಾಧಿಕಾರವು ಆಸಕ್ತ ಜಾಗತಿಕ ಹೂಡಿಕೆದಾರರಿಂದ ಇಒಐ (ಆಸಕ್ತಿ ವ್ಯಕ್ತಪಡಿಸುವಿಕೆ) ಆಹ್ವಾನಿಸಿತ್ತು.
‘ಗಣಿ ಮತ್ತು ಖನಿಜಗಳ ಕಾಯ್ದೆ–1957 (2016ರ ತಿದ್ದುಪಡಿ) ಪ್ರಕಾರ, ಗಣಿ ಗುತ್ತಿಗೆಯನ್ನು ವರ್ಗಾಯಿಸಬಹುದು. ಬಂಡವಾಳ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಒಂದು ವೇಳೆ ಸಂಡೂರಿನ ರಾಮಗಢ ಅರಣ್ಯದಲ್ಲಿ ಗಣಿ ಗುತ್ತಿಗೆಯನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಅದನ್ನು ಸರ್ಕಾರದ ಅನುಮತಿ ಮೇರೆಗೆ ಯಶಸ್ವಿ ಬಿಡ್ಡುದಾರರಿಗೆ ಹಸ್ತಾಂತರಿಸಲಾಗುವುದು’ ಎಂದು ಭಾರತೀಯ ಉಕ್ಕು ಪ್ರಾಧಿಕಾರ 2019ರ ಜುಲೈನಲ್ಲಿ ಸಿದ್ಧಪಡಿಸಿದ್ದ ತನ್ನ ಬಂಡವಾಳ ಹಿಂತೆಗೆತ ಪ್ರಸ್ತಾವದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ಇದರ ಪ್ರಕಾರ, ಕಂಪನಿಯನ್ನು ಖರೀದಿಸಿದ ಖಾಸಗಿಯವರಿಗೆ ಗಣಿಯೂ ವರ್ಗಾವಣೆಯಾಗುವುದು ಸ್ಪಷ್ಟವಾಗಿದೆ.
‘ಸಾಕಷ್ಟು ಬಿಡ್ಡುದಾರರು ಕಂಪನಿ ಖರೀದಿಗೆ ಅಸಕ್ತಿ ಹೊಂದಿದ್ದರೂ ವಹಿವಾಟಿನಲ್ಲಿ ಮುಂದುವರಿಯಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2022ರ ಅಕ್ಟೋಬರ್ 12ರಂದು ಬಂಡವಾಳ ಹಿಂತೆಗೆತ ಪ್ರಕ್ರಿಯೆ ಸ್ಥಗಿತಗೊಳಿಸಿತ್ತು. ಬಿಡ್ಡುದಾರರು ವಹಿವಾಟು ಮುಂದುವರಿಯದೇ ಇರಲು ಕಂಪನಿಯು ಸ್ವಂತದ (ಕೆಪ್ಟಿವ್ ಮೈನ್) ಗಣಿ ಹೊಂದದೇ ಇರುವುದು ಕೂಡ ಪ್ರಮುಖ ಕಾರಣಗಳಲ್ಲಿ ಒಂದು’ ಎಂದು ಮೂಲಗಳು ತಿಳಿಸಿವೆ.
2000, 2013, 2016 ಮತ್ತು 2019ರಲ್ಲಿ ಕಂಪನಿಯನ್ನು ಮಾರಲು ಅಥವಾ ಖಾಸಗೀಕರಣಗೊಳಿಸಲು ಪ್ರಕ್ರಿಯೆ ನಡೆದವು. ಆದರೆ, ಅದು ನೆರವೇರಲಿಲ್ಲ. ಅಂತಿಮವಾಗಿ ಕಂಪನಿಯನ್ನು ಮುಚ್ಚುತ್ತಿರುವುದಾಗಿ ಕೇಂದ್ರ ಸರ್ಕಾರ 2023ರ ಫೆಬ್ರುವರಿ 13ರಂದು ಸಂಸತ್‌ನಲ್ಲಿ ಅಧಿಕೃತವಾಗಿ ಘೋಷಿಸಿತು.
‘ವಿಐಎಸ್‌ಎಲ್‌ನ ಖಾಸಗೀಕರಣ ಪ್ರಕ್ರಿಯೆಯಲ್ಲಿ ವಿಫಲವಾದ ಕೇಂದ್ರ ಸರ್ಕಾರ, ಕಂಪನಿಗೆ ಗಣಿಯೊಂದನ್ನು ಒದಗಿಸಿ ಮಾರಲು ಮಾಡಿದ ತಂತ್ರವಿದು. ಬಳ್ಳಾರಿಯ ‘ವಿಜಯನಗರ ಸ್ಟೀಲ್ ವರ್ಕ್ಸ್’ ಕಂಪನಿಯ ಕತೆ ಏನಾಯಿತು? ರೈತರಿಂದ ಭೂಮಿ ಪಡೆದು ಅಂತಿಮವಾಗಿ ಖಾಸಗಿಯವರಿಗೆ ಮಾರಲಾಯಿತು. ವಿಶಾಖಪಟ್ಟಣದ ಕಂಪನಿಯನ್ನು ಅಲ್ಲಿಯವರು ಉಳಿಸಿಕೊಂಡರು. ಈಗ ಅದನ್ನೂ ಮಾರುತ್ತಿದ್ದಾರೆ’ ಎಂದು ರೈತ ಸಂಘದ ಮುಖಂಡ ಮಾಧವರ ರೆಡ್ಡಿ ದೂರಿದರು.
‘ಗಣಿಗಾರಿಕೆಗೆ ಖಾಸಗಿ ಕಂಪನಿಗಳು ದಟ್ಟಾರಣ್ಯ ಕೇಳಿದರೆ, ಸಾರ್ವಜನಿಕ ವಲಯದಿಂದ ಪ್ರತಿರೋಧ ವ್ಯಕ್ತವಾಗುತ್ತದೆ. ಅದಕ್ಕೆಂದೇ ಸಾರ್ವಜನಿಕ ಉದ್ದಿಮೆ ವಿಐಎಸ್‌ಎಲ್ ಮೂಲಕ ದಟ್ಟಾರಣ್ಯದಲ್ಲಿ ಗಣಿ ಗುತ್ತಿಗೆ ಪಡೆದು ಖಾಸಗಿಗೆ ಮಾರಲು ತಂತ್ರ ನಡೆದಿರಬಹುದು’ ಎಂದು ರೈತ ಹೋರಾಟಗಾರ, ವಕೀಲ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ತಿಳಿಸಿದರು.
ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಇಂದಲ್ಲ, ನಾಳೆ ಖಾಸಗೀಕರಣ ಆಗುತ್ತದೆ. ಗಣಿಯು ಖಾಸಗಿ ಪಾಲಾಗಬಹುದು. ಆ.2ರಂದು ನಡೆಯುವ ಪರಿಸರ–ಸಾರ್ವಜನಿಕ ಸಭೆಯಲ್ಲಿ ಇದು ಚರ್ಚೆ ಆಗಬೇಕು.–ಎಸ್.ಆರ್.ಹಿರೇಮಠ, ಸಂಚಾಲಕ, ಸಮಾಜ ಪರಿವರ್ತನಾ ಸಮುದಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.