ADVERTISEMENT

ಸಂಡೂರಿನ ಕುಮಾರಸ್ವಾಮಿ ದೇವಾಲಯದ ಸುತ್ತಮುತ್ತ ಗಣಿಗಾರಿಕೆ: ಮಾತು ತಪ್ಪಿದ ಎಚ್‌ಡಿಕೆ

ಆರ್. ಹರಿಶಂಕರ್
Published 13 ಜೂನ್ 2024, 23:44 IST
Last Updated 13 ಜೂನ್ 2024, 23:44 IST
ಜೆಡಿಎಸ್‌ ನಾಯಕ ಎಚ್‌ಡಿ ಕುಮಾರಸ್ವಾಮಿ
ಜೆಡಿಎಸ್‌ ನಾಯಕ ಎಚ್‌ಡಿ ಕುಮಾರಸ್ವಾಮಿ   

ಬಳ್ಳಾರಿ: ‘ಅಧಿಕಾರಕ್ಕೆ ಬಂದರೆ ಸಂಡೂರಿನ ಐತಿಹಾಸಿಕ ಕುಮಾರಸ್ವಾಮಿ ದೇವಾಲಯದ ಸುತ್ತಮುತ್ತಲೂ 2ರಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವೆ’ ಎಂದು ಹಿಂದೊಮ್ಮೆ ಹೇಳಿದ್ದ ಎಚ್‌.ಡಿ ಕುಮಾರಸ್ವಾಮಿ ಈಗ ಕೇಂದ್ರ ಉಕ್ಕು ಸಚಿವರಾಗಿ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಸಹಿ ಹಾಕಿದ್ದಾರೆ. ಅವರು ತಮ್ಮ ಮಾತು ಉಳಿಸಿಕೊಂಡಿಲ್ಲ ಎಂದು ವಿವಿಧ ಸಂಘಟನೆಗಳು ಆರೋಪಿಸಿವೆ.

ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ 2018ರ ಫೆಬ್ರುವರಿ 26ರಂದು ಬಳ್ಳಾರಿ ಜಿಲ್ಲೆಯ ಸಂಡೂರಿಗೆ ಬಂದಿದ್ದ  ಎಚ್‌.ಡಿ ಕುಮಾರಸ್ವಾಮಿ ಅವರನ್ನು ಜನಸಂಗ್ರಾಮ ಪರಿಷತ್‌ ಮತ್ತು ನಾಗರಿಕ ಸಂಘಟನೆಗಳ ಮುಖಂಡರು ಭೇಟಿಯಾಗಿದ್ದರು. ‘ಗಣಿಗಾರಿಕೆಯಿಂದ ಕುಮಾರಸ್ವಾಮಿ ದೇವಾಲಯಕ್ಕೆ ಧಕ್ಕೆಯಾಗುತ್ತಿದೆ. ಅದಕ್ಕೆ ದೇವಾಲಯದ ಸುತ್ತಮುತ್ತ 3 ರಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು’ ಎಂದು ಅವರು ಕೋರಿದ್ದರು.

2018ರ ಫೆಬ್ರುವರಿ 26ರಂದು ಎಚ್‌.ಡಿ ಕುಮಾರಸ್ವಾಮಿ ಅವರು ಸಂಡೂರಿನ ಕುಮಾರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಕುರಿತು ಪ್ರಜಾವಾಣಿ ವರದಿ

ADVERTISEMENT

ಮನವಿಪತ್ರ ಸ್ವೀಕರಿಸಿದ್ದ ಕುಮಾರಸ್ವಾಮಿ ‘ದೇವಾಲಯದ ಸುತ್ತಮುತ್ತ 2-3 ಕಿ.ಮೀ. ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಿಸಲು ಸರ್ಕಾರಕ್ಕೆ ಕೋರುವೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಾಗ, ದೇವಸ್ಥಾನದ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಲು ಕ್ರಮಕೈಗೊಳ್ಳುವೆ' ಎಂದಿದ್ದರು. ಆಗ ಅವರು ವಿಶೇಷ ಪೂಜೆ ಸಲ್ಲಿಸಿದ್ದರು.

ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವರಾದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ (ಜೂನ್ 12) ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕುದುರೆಮುಖ ಕಬ್ಬಿಣದ ಅದಿರು ಕಂ‍‍ಪನಿಯ (ಕೆಐಒಸಿಎಲ್‌) ಕಡತಕ್ಕೆ ಸಹಿ ಹಾಕಿದ್ದಾರೆ. ಉದ್ದೇಶಿತ ಗಣಿಯು ಸಂಡೂರಿನ ಕುಮಾರಸ್ವಾಮಿ ದೇವಾಲಯದಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ಬರುತ್ತದೆ.

ಸಾವಿರ ವರ್ಷಗಳ ಇತಿಹಾಸ:

ಸಂಡೂರಿನ ಸ್ವಾಮಿಮಲೈ ಅರಣ್ಯ ಪ್ರದೇಶದ ಕುಮಾರಸ್ವಾಮಿ ಪರ್ವತದಲ್ಲಿರುವ ಪುರಾತನ ಕುಮಾರಸ್ವಾಮಿ ದೇವಾಲಯವು ಬಾದಾಮಿ ಚಾಲುಕ್ಯರ ಆಳ್ವಿಕೆಯ 7ನೇ ಶತಮಾನದಲ್ಲಿ ನಿರ್ಮಿತವಾಗಿದೆ. ಅದಕ್ಕೆ ಹೊಂದಿಕೊಂಡಂತೆ ಪಾರ್ವತಿ ದೇವಾಲಯವೂ ಇದೆ. ಸಾವಿರ ವರ್ಷಗಳಷ್ಟು ಹಳೆಯ ಈ ಎರಡೂ ದೇವಾಲಯಗಳು ಸಂರಕ್ಷಿತ ಸ್ಮಾರಕಗಳು ಎಂದು ಘೋಷಿಸಲಾಗಿದೆ. ದೇವಾಲಯದ ಸಂರಕ್ಷಣೆ ಕೋರಿ ಜನಸಂಗ್ರಾಮ ಪರಿಷತ್‌ ಸಂಘಟನೆ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಯನ್ನೂ ಸಲ್ಲಿಸಿದೆ.

ಸಂಡೂರಿನ ಕುಮಾರಸ್ವಾಮಿದೇವಾಲಯ
ಗಣಿಗಾರಿಕೆಯಿಂದ ದೇವಾಲಯಕ್ಕೆ ಆಗುವ ಹಾನಿಯ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ 2018ರಲ್ಲಿ ತಿಳಿಸಿದ್ದೆವು. ಗಣಿಗಾರಿಕೆ ನಿಷೇಧಿಸುವುದಾಗಿ ಹೇಳಿದವರೇ ಈಗ ಗಣಿಗಾರಿಕೆಗೆ ಸಹಿ ಹಾಕಿದ್ದಾರೆ. ಆಗಿನ ಕಾಳಜಿ ಈಗ ಏಕಿಲ್ಲ?  
ರಾಘವೇಂದ್ರ ಕುಷ್ಟಗಿ ಗೌರವಾಧ್ಯಕ್ಷ ಜನಸಂಗ್ರಾಮ ಪರಿಷತ್‌

‘ಅಧಿಕಾರಕ್ಕೆ ಬಂದ ಕೂಡಲೇ ಗಣಿಗಾರಿಕೆಗೆ ಅನುಮತಿ’

2018ರ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಕಾಂಗ್ರೆಸ್‌ ಬೆಂಬಲದೊಂದಿಗೆ ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜೆಎಸ್‌ಡಬ್ಲ್ಯುನ ನಂದಿ ಗಣಿ ಕಂಪನಿಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಿದರು. ಆಗಲೂ ಅವರ ವಿರುದ್ಧ  ಆಕ್ರೋಶ ವ್ಯಕ್ತವಾಗಿತ್ತು. ಕುಮಾರಸ್ವಾಮಿ ಅವರ ಸರ್ಕಾರ ಒಂದೂವರೆ ವರ್ಷದಲ್ಲಿ ಪತನವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.