ಕಂಪ್ಲಿ: ಹವಾಮಾನ ವೈಪರೀತ್ಯದಿಂದಾಗಿ ನಾಟಿ ಮಾಡಿದ ಮೆಣಸಿನಕಾಯಿ ಸಸಿ ಆರಂಭದಲ್ಲಿಯೇ ಒಣಗುತ್ತಿರುವುದರಿಂದ ರೈತರು ಕಂಗಲಾಗಿದ್ದಾರೆ.
ಪಟ್ಟಣದ ಸಣಾಪುರ ರಸ್ತೆ ಬಳಿ ವೈಕುಂಟಂ ಸೂರ್ಯನಾರಾಯಣ ಎಂಬ ರೈತ ಒಂದು ಎಕರೆ ಗುತ್ತಿಗೆ ಪಡೆದಿದ್ದು, ಕೊಳವೆಬಾವಿ ಆಧರಿಸಿ ಮೆಣಸಿನಕಾಯಿ ಕೃಷಿ ಆರಂಭಿಸಿದ್ದಾರೆ.
‘ಜೂನ್ 5ರಂದು 5531 ತಳಿಯ ಮೆಣಸಿನಕಾಯಿ ಸಸಿಯನ್ನು ₹25 ಸಾವಿರ ವೆಚ್ಚ ಮಾಡಿ ನಾಟಿ ಮಾಡಿದ್ದಾರೆ. ಸಕಾಲಕ್ಕೆ ಮಳೆ ಇಲ್ಲದೆ, ಬಿಸಿಲ ಝಳಕ್ಕೆ ಬಹಳಷ್ಟು ಸಸಿ ಒಣಗಿವೆ. ಜೂನ್ 15ರಂದು ಮತ್ತೆ ₹6,000 ನೀಡಿ ಸಸಿ ತಂದು ಒಣಗಿದ ಸ್ಥಳದಲ್ಲಿ ಸಸಿ ನಾಟಿ ಮಾಡಿದ್ದಾರೆ. ಇದಾದ ನಂತರವೂ ಸಸಿಗಳು ಅಲ್ಲಲ್ಲಿ ಬಾಡಿ ಒಣಗಿವೆ. ಅದರಿಂದ ಕಂಗಾಲಾಗದ ರೈತ ₹4,000 ವೆಚ್ಚ ಮಾಡಿ ಸಸಿ ತಂದು ಮೂರನೇ ಬಾರಿಯೂ ನಾಟಿ ಮಾಡಿದ್ದೇನೆ’ ಎಂದು ರೈತ ಸೂರ್ಯನಾರಾಯಣ ವಿವರಿಸಿದರು.
ಹವಾಮಾನ ವೈಪರೀತ್ಯದಿಂದ ಮೆಣಸಿನಕಾಯಿ ಸಸಿ ಒಣಗುತ್ತಿದ್ದರೆ ಇದು ಮೇಲ್ನೋಟಕ್ಕೆ ಸೊರಗು ರೋಗವಿರಬಹುದು. ರೈತರು ಹೊಲದಲ್ಲಿ ಬೆಳೆ ಪರಿವರ್ತನೆ ಮಾಡಬೇಕು. ಇಲ್ಲವಾದಲ್ಲಿ ಹೊಲದ ಸರಹದ್ದಿನಲ್ಲಿ ಅಥವಾ ಮೆಣಸಿನಕಾಯಿ 10 ಸಾಲಿನ ನಂತರ ಅಂತರ ಬೆಳೆಯಾಗಿ ಸಜ್ಜೆ, ಜೋಳ, ಮೆಕ್ಕೆಜೋಳ, ಚೆಂಡೂ ಹೂ ಬೆಳೆದಲ್ಲಿ ರೋಗ ನಿಯಂತ್ರಣ ಸಾಧ್ಯ. ರೈತರೇ ಮೆಣಸಿನಕಾಯಿ ಬೀಜ ತಂದು ಬೀಜೋಪಚಾರ ಮಾಡಿ ಸಸಿ ಬೆಳೆಸಿದಲ್ಲಿ ಹೆಚ್ಚಿನ ಅನುಕೂಲ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೆ. ಶಂಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.