ಕಂಪ್ಲಿ: ‘ಕಂಪ್ಲಿ ಹೊಸ ತಾಲ್ಲೂಕಾಗಿರುವುದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಬಿಇಒ ಕಚೇರಿ ಆರಂಭಕ್ಕೆ ಮುಖ್ಯಮಂತ್ರಿಯವರನ್ನು ಒತ್ತಾಯಿಸುವುದಾಗಿ’ ಶಾಸಕ ಜೆ.ಎನ್. ಗಣೇಶ್ ಶಿಕ್ಷಕರಿಗೆ ಭರವಸೆ ನೀಡಿದರು.
ಇಲ್ಲಿಯ ವೀರಶೈವ ಕಲ್ಯಾಣಮಂಟಪದಲ್ಲಿ ಶಿಕ್ಷಕ ಸಂಘಟನೆಗಳು ಗುರುವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಯಾವುದಾದರು ಒಂದು ವಿಶಾಲ ಕಾಂಪೌಂಡ್ ಹೊಂದಿರುವ ಶಾಲೆಯೊಂದರಲ್ಲಿ ನಿವೇಶನ ಗುರುತಿಸಿದಲ್ಲಿ ಗುರುಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವುದಾಗಿ ತಿಳಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಎ. ನಾಗನಗೌಡ ಜಂಟಿಯಾಗಿ ಶಾಸಕರಿಗೆ ಮನವಿ ಸಲ್ಲಿಸಿ, ಶಾಸಕರು ಶಿಕ್ಷಕರ ಸಮಸ್ಯೆ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಮನವಿ ಮಾಡಿದರು.
ಶಿಕ್ಷಕರ ಪತ್ತಿನ ಸಹಕಾರ ಸಂಘ ರಚಿಸುವುದರೊಂದಿಗೆ ತಾಲ್ಲೂಕು ಗುರುಭವನ ನಿರ್ಮಾಣಕ್ಕೆ ಶಿಕ್ಷಕರು ಒಂದು ದಿನದ ಸಂಬಳ ನೀಡಲಿದ್ದಾರೆ ಎಂದರು.
ನಿವೃತ್ತ ಶಿಕ್ಷಕರಾದ ಯರಿಸ್ವಾಮಿ, ಎಚ್.ಎಂ. ಗೌರಮ್ಮ, ವಿ. ಪಕ್ಕೀರಪ್ಪ, ಡಿ. ಗೌರಮ್ಮ, ಪಿ. ಚಂದ್ರಪ್ಪ, ವಿರುಪಮ್ಮ, ಚನ್ನಬಸಪ್ಪ, ಅನ್ನಪೂರ್ಣಮ್ಮ, ಜಗನ್ನಾಥ ಅವರನ್ನು ಗೌರವಿಸಲಾಯಿತು.
ಕ್ಲಸ್ಟರ್ ಮಟ್ಟದ ಉತ್ತಮ ಶಾಲೆಗಳಾಗಿ ಆಯ್ಕೆಗೊಂಡ ನಂ.2 ಮುದ್ದಾಪುರ, ಬೆಳಗೋಡುಹಾಳು, ಹೊಸೂರು ಜವುಕು, ಸೋಮಲಾಪುರ, ಪ್ರಭುಕ್ಯಾಂಪ್, ರಾಜುಕ್ಯಾಂಪ್ ಸಹಿಪ್ರಾ ಶಾಲೆ, ತಾಲ್ಲೂಕು ಮಟ್ಟದ ಉತ್ತಮ ಶಾಲೆಯಾದ ಹೊಸನೆಲ್ಲೂಡಿಯ ಸರ್ಕಾರಿ ಪ್ರೌಢಶಾಲೆ, ಭುವನೇಶ್ವರಿ ಅನುದಾನಿತ ಶಾಲೆ ಮುಖ್ಯಶಿಕ್ಷಕರನ್ನು ಗೌರವಿಸಲಾಯಿತು.
ತಹಶೀಲ್ದಾರ್ ಎಸ್. ಶಿವರಾಜ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಟಿ.ಎಂ. ಸಿದ್ಧಲಿಂಗಮೂರ್ತಿ, ತಾ.ಪಂ ಇಒ ಆರ್.ಕೆ. ಶ್ರೀಕುಮಾರ್, ನರೇಗಾ ಎಡಿ ಕೆ.ಎಸ್. ಮಲ್ಲನಗೌಡ ಸೇರಿದಂತೆ ವಿವಿಧ ಶಿಕ್ಷಕ ಸಂಘಟನೆಗಳು, ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು, ಎಲ್ಲ ಶಾಲೆಯ ಮುಖ್ಯಸ್ಥರು, ಆಡಳಿತ ಮಂಡಳಿಯವರು, ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.